ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ 2023–24ನೇ ಸಾಲಿನ ಬಜೆಟ್‌ನಲ್ಲಿ ಕಾಫಿನಾಡಿಗೆ ಮೆಗಾ ಜವಳಿ ಪಾರ್ಕ್, ಹೊಸ ವಿಶ್ವವಿದ್ಯಾಲಯ ಸಹಿತ ಹಲವು ಕೊಡುಗೆ ನೀಡಿದ್ದಾರೆ.
ಚಿಕ್ಕಮಗಳೂರು ಸಹಿತ ನಾಲ್ಕು ಜಿಲ್ಲೆಗಳಿಗೆ ಮೆಗಾ ಜವಳಿ ಪಾರ್ಕ್ ಘೋಷಿಸಲಾಗಿದೆ. ಈ ಪಾರ್ಕ್ ಸ್ಥಾಪನೆಯಾದರೆ ಉದ್ಯೋಗ ಸೃಷ್ಟಿಯಾಗಲಿವೆ ಎಂಬ ನಿರೀಕ್ಷೆಗಳು ಗರಿಗೆದರಿವೆ.
ಹೊಸ ವಿಶ್ವವಿದ್ಯಾಲಯ: ಚಿಕ್ಕಮಗಳೂರಿನಲ್ಲಿ ಗರಿಷ್ಠ ತಂತ್ರಜ್ಞಾನ ಮತ್ತು ಕಡಿಮೆ ಮಾನವ ಸಂಪನ್ಮೂಲ ಒಳಗೊಂಡಂತೆ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ ಮಾಡಲಾಗಿದೆ.
ಹೊಸ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಲ್ಲಿಯೇ ಉನ್ನತ ವ್ಯಾಸಂಗದ, ಸಂಶೋಧನಾ ಅಧ್ಯಯನ ಮೊದಲಾದ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
ಪಿಎಂ– ಎಬಿಎಚ್‌ಐಎಂ ನಡಿ ತೃತೀಯ ಹಂತದ ಆರೈಕೆ ಒದಗಿಸಲು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇಋರ್ ಬ್ಲಾಕ್ ಸ್ಥಾಪನೆ ಪ್ರಸ್ತಾಪಿಸಲಾಗಿದೆ. ಶೃಂಗೇರಿಯ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನಾಗಿ ಹಂತಹಂತವಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಲಾಗಿದೆ.
ಮಾನವ– ಪ್ರಾಣಿ ಸಂಘರ್ಷ ಕ್ಷೇತ್ರದಲ್ಲಿ ಸೆರೆ ಹಿಡಿದ ವನ್ಯಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸ ಸ್ಥಾನ ಪ್ರದೇಶ ಗುರುತಿಸಿ ಬಿಡುಗಡೆ ಮಾಡಲು ಭದ್ರಾ ಅರಣ್ಯದಲ್ಲಿ
ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.
ಕಾಡಾನೆ ಹಾವಳಿ ತಡೆ ನಿಟ್ಟಿನಲ್ಲಿ ರಚಿಸಿರುವ ಕಾರ್ಯಪಡೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹೆಚ್ಚುವರಿಯಾಗಿ 199 ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಿರುವ ಪ್ರಸ್ತಾಪ ಇದೆ.
ದಶಕಗಳಿಂದ ಬೆಳಗಾರರು ಒತ್ತುವರಿ ಮಾಡಿರುವ ಜಮೀನನ್ನು (25 ಎಕರೆ ಮಿತಿ) 30 ವರ್ಷ ಅವಧಿಗೆ ಗುತ್ತಿಗೆ ನೀಡುವ ನಿಟ್ಟಿನಲ್ಲಿ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. 2023–24ನೇ ಸಾಲಿನಲ್ಲಿ ಕಾಯ್ದೆ ಜಾರಿಗೊಳಿಸಲು ನಿಯಮ ರೂಪಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.
ಚಿಕ್ಕಮಗಳೂರು– ಬೇಲೂರು ಸಹಿತ ನಾಲ್ಕು ರೈಲ್ವೆ ಮಾರ್ಗಗಳಿಗೆ ಹೆಚ್ಚುವರಿಯಾಗಿ ₹ 960 ಕೋಟಿ ಅನುದಾನವನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಸಹ್ಯಾದ್ರಿ ಸಿರಿ ಯೋಜನೆ, ಕಾಲು ಸಂಕ ನಿರ್ಮಾಣ ಯೋಜನೆಗಳಲ್ಲೂ ಜಿಲ್ಲೆಗೆ ಪಾಲು ಇರಬಹುದು ಎಂಬ ಆಶಾಭಾವ ಇದೆ.
ಹುಸಿಯಾದ ನಿಗಮ ಮಂಡಳಿ
ಬಾಳೆಹೊನ್ನೂರು: ಬಜೆಟ್‌ನಲ್ಲಿ ನಾರಾಯಣಗುರು ನಿಗಮ ಮಂಡಳಿ ಸ್ಥಾಪಿಸುವ ಆಶ್ವಾಸನೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ ಭರವಸೆಯನ್ನು ಹುಸಿಗೊಳಿಸಿದ್ದಾರೆ. ಇದರಿಂದ ಬಿಲ್ಲವ, ಈಡಿಗ, ನಾಮದಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಬಹುಸಂಖ್ಯಾತರ ಬೇಡಿಕೆ ಈಡೇರಿಲ್ಲ.ಸಮುದಾಯ ಚುನಾವಣೆ ಬಹಿಷ್ಕಾರದ ಮೊರೆಹೋಗುವುದು ಅನಿವಾರ್ಯ ಆಗಲಿದೆ ಎಂದು ಬ್ರಹ್ಮಶ್ರೀ ಶ್ರೀನಾರಾಯಣ ಗುರು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಸತೀಶ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.