ಬುಧವಾರ, ಜನವರಿ 22, 2020
22 °C
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಸೆಕ್ಷನ್‌ 4(1) ಪ್ರಕರಣ: 3 ತಿಂಗಳಲ್ಲಿ ವರದಿ ಸಲ್ಲಿಸಲು ಸಚಿವ ಸಿ.ಟಿ.ರವಿ ಸೂಚನೆ

 ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ಸೆಕ್ಷನ್‌ 4(1) ಅಧಿಸೂಚನೆ ಪ್ರದೇಶಗಳ ಪ್ರಕರಣಗಳನ್ನು ಕುರಿತಂತೆ ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿ (ವಿಎ), ವಲಯ ಅರಣ್ಯಾಧಿಕಾರಿಗಳಿಂದ (ಆರ್‌ಎಫ್‌ಒ) ವರದಿ ಪಡೆದು ಸಲ್ಲಿಸಬೇಕು, ಮೂರು ತಿಂಗಳೊಳಗೆ ಈ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೂಚನೆ ನೀಡಿದರು.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರಿಗೆ ಈ ಸೂಚನೆ ನೀಡಿದರು. ಸೆಕ್ಷನ್‌ 4(1) ಪ್ರದೇಶಗಳಿಗೆ ಸಂಬಂಧಿಸಿದಂತೆ 2,400 ಆಕ್ಷೇಪಣಾ ಅರ್ಜಿಗಳಿಗೆ ವಿಚಾರಣೆ ಪ್ರಕ್ರಿಯೆ ಯನ್ನು ಮಾಡಿಲ್ಲ. ವಿಎ, ಆರ್‌ಎಫ್‌ಒಗಳಿಂದ ಸ್ಥಳ ಪರಿಶೀಲನೆ ಮಾಡಿಸಿ ವರದಿ ಪಡೆದರೆ, ಅರ್ಜಿಗಳ ವಿಚಾರಣೆ ಇತ್ಯರ್ಥಕ್ಕೆ ಅನುಕೂಲವಾಗುತ್ತದೆ. ಶಾಲೆ, ಆಸ್ಪತ್ರೆ, ವಸತಿಗೆ ಜಾಗ ಕಾಯ್ದಿರಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

‘ಪರಿಭಾವಿತ (ಡೀಮ್ಡ್‌) ಅರಣ್ಯ ವ್ಯಾಪ್ತಿಯ ಎಂಟು ತಾಲ್ಲೂಕುಗಳಿಂದ 3004 ಗ್ರಾಮಗಳ 1143 ಸರ್ವೆ ನಂಬರ್‌ಗಳ ಒಟ್ಟು 1.08 ಲಕ್ಷ ಹೆಕ್ಟೇರ್‌ ಪ್ರದೇಶದ52.9ಸಾವಿರ ಹೆಕ್ಟೇರ್‌ ಪರಿಭಾವಿತ ಅರಣ್ಯ ಜಾಗ ಒಳಗೊಂಡಂತೆ ಜಂಟಿ ಮೋಜಣಿ (ಸರ್ವೆ) ಕಾರ್ಯವು ಜುಲೈ 31ಕ್ಕೆ ಮುಗಿಸಿ, ಪರಿಭಾವಿತ ಅರಣ್ಯ ಮತ್ತು ಕಂದಾಯ ಜಾಗವನ್ನು ಗುರುತಿಸಲಾಗಿದೆ. ಜಂಟಿ ನಕ್ಷೆ ಮತ್ತು ವರದಿ ತಯಾರಿಕೆ ಪ್ರಗತಿಯಲ್ಲಿದೆ. ಇನ್ನೊಂದು ತಿಂಗಳಲ್ಲಿ ಈ ಕಾರ್ಯವು ಪೂರ್ಣಗೊಳ್ಳಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಸಭೆಗೆ ತಿಳಿಸಿದರು.

‘ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ಈವರೆಗೆ ಎರಡು ಪಟ್ಟಿ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಸುಪ್ರೀಂ ಕೋರ್ಟ್‌ ಈ ಬಗ್ಗೆ ಇನ್ನು ಯಾವುದೇ ಆದೇಶ ನೀಡಿಲ್ಲ. ಹೀಗಾಗಿ, ಆರ್‌ಟಿಸಿನಲ್ಲಿ ಅಪ್ಡೇಟ್‌ ಮಾಡಿಲ್ಲ. ಅಲ್ಲದೇ ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಮೊದಲನೇ ಪಟ್ಟಿಯಲ್ಲಿನ ಜಾಗವನ್ನೂ ಸದ್ಯಕ್ಕೆ ಬೇರೆ ಯಾವುದಕ್ಕೂ ಬಳಸಬಾರದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ಪತ್ರ ಬಂದಿದೆ’ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಸಭೆಗೆ ತಿಳಿಸಿದರು.

ನೀಲಗಿರಿ ಮರಗಳಿರುವ ಪ್ರದೇಶವನ್ನು ಅರಣ್ಯ ಎಂದು ಪರಿಗಣಿಸಬಾರದು. ಪರಿಭಾವಿತ ಅರಣ್ಯ ಘೋಷಣೆಗೂ ಮುಂಚೆ ‘50’, ‘53’ ಅರ್ಜಿ ಸಲ್ಲಿಸಿರುವವರನ್ನು ಕೈಬಿಡಬಾರದು. ಅರಣ್ಯ ಹಕ್ಕು ಸಮಿತಿಯಲ್ಲಿ ದಾಖಲೆ ಆಗಿ ನೀಡಿರುವ ಜಾಗವನ್ನು ಖುಲ್ಲಾಗೊಳಿಸಬಾರದು. ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.

‘ಹಕ್ಕುಪತ್ರಕ್ಕಾಗಿ ಬಹಳಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸಮಿತಿ ರಚಿಸಿ ತ್ವರಿತವಾಗಿ ಅರ್ಜಿ ಇತ್ಯರ್ಥಗೊಳಿಸಿ, ಹಕ್ಕುಪತ್ರ ವಿತರಿಸಲು ಕ್ರಮ ವಹಿಸಬೇಕು’ ಎಂದು ಶಾಸಕ ಟಿ.ಡಿ.ರಾಜೇಗೌಡ ಕೋರಿದರು.

‘ಅರಣ್ಯ ಜಾಗ ಗುರುತು ನಿಟ್ಟಿನಲ್ಲಿ ಟ್ರಂಚ್‌ ಹೊಡೆದು ಅರಣ್ಯ ಸಿಬ್ಬಂದಿ ಬಡವರಿಗೆ ಕಾಟ ಕೊಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ದೂಷಿಸಿದರು.

ತಾರಲಕೊಡಿಗೆ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ; ಅರಣ್ಯ ಇಲಾಖೆ ತಕರಾರು

ಶೃಂಗೇರಿ ತಾಲ್ಲೂಕಿನ ತಾರಲಕೊಡಿಗೆ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮಾರ್ಗ ಅಳವಡಿಕೆ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ತಕರಾರು ಮಾಡಿದ್ದಾರೆ. ಕಂಬ ಮೊದಲು ಅಳವಡಿಸಲು ತಗಾದೆ ಮಮಾಡಿದ್ದರು, ಈಗ ಕೇಬಲ್‌ ಮೂಲಕ ಒಯ್ಯವುದಕ್ಕೂ ಅಡ್ಡಿಪಡಿಸಿದ್ದಾರೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಇದಕ್ಕೆಲ್ಲ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ ಮೆಸ್ಕಾಂನವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು’ ಎಂದು ಅರಣ್ಯಾಧಿಕಾರಿ ಹೇಳಿದರು.

ಪರಿಹಾರ ತ್ವರಿತ ವಿತರಣೆಗೆ ಕ್ರಮ ವಹಿಸಲು ಸೂಚನೆ

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಿಂದ ಸ್ವ ಇಚ್ಛೆಯಿಂದ ಹೊರಹೊಗಲು ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸಿ.ಟಿ.ರವಿ ಸೂಚಿಸಿದರು.

‘360 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಈ ಪೈಕಿ 236 ಕುಟುಂಬಗಳಿಗೆ ಪರಿಹಾರ ಪಾವತಿ ಬಾಕಿ ಇದೆ. ₹ 94.4 ಕೋಟಿ ಅನುದಾನ ಅಗತ್ಯ ಇದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

 

ಬಾಕ್ಸ್‌ಗಳು

ಎಮ್ಮೆದೊಡ್ಡಿ ಅಮೃತ್‌ ಮಹಲ್‌ ಕಾವಲ್‌; ಅಧ್ಯಯನಕ್ಕೆ ಮೊರೆ

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಅಮೃತ್‌ ಮಹಲ್‌ ಕಾವಲ್‌ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಶಾಸಕ ಬೆಳ್ಳಿ ಪ್ರಕಾಶ್‌ ಮನವಿ ಮಾಡಿದರು. ಅದಕ್ಕೆ ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌.ಭೋಜೇಗೌಡ ಧ್ವನಿಗೂಡಿಸಿದರು.

ಈ ಕಾವಲ್‌ನಲ್ಲಿ (ಸರ್ವೆ ನಂ 70) ಒತ್ತುವರಿ ತೆರವು ಸವಾಲು. ಇಲ್ಲಿನ ಜಾಗವನ್ನು ಅಮೃತ್‌ ಮಹಲ್‌ ತಳಿಯ ಜಾನುವಾರುಗಳ ಅಭಿವೃದ್ಧಿ ಹೊರತಾಗಿ ಬೇರಾವುದೇ ಉದ್ದೇಶಕ್ಕೆ ಮಂಜೂರು ಮಾಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇಲ್ಲಿ ಏನು ಚಟುವಟಿಕೆಗಳು ನಡೆಯುತ್ತಿವೆ ಎಂಬ ಬಗ್ಗೆ ವಿಸ್ತೃತ ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತರುವ ಅಗತ್ಯ ಇದೆ ಎಂದು ಸಭೆಯ ಗಮನಕ್ಕೆ ತಂದರು.

‘ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಹಾಕಿಸಿ. ಕೋ‌ರ್ಟ್‌ ಸರ್ಕಾರದಿಂದ ವರದಿ ಕೇಳಿದರೆ ಆಗ ಅಧ್ಯಯನ ಮಾಡಿಸಿ ಕೋರ್ಟ್‌ಗೆ ಸಲ್ಲಿಸಬಹುದು’ ಎಂದು ಸಿ.ಟಿ.ರವಿ ಸಲಹೆ ನೀಡಿದರು.

****

‘94ಸಿ’, ‘94ಸಿಸಿ’ ವಿಲೇವಾರಿಗೆ 1 ತಿಂಗಳು ಗಡುವು

ಜಿಲ್ಲೆಯಲ್ಲಿ ಒಟ್ಟು ‘94ಸಿ’, ‘94ಸಿಸಿ’ನ 2,378 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಒಂದು ತಿಂಗಳೊಳಗೆ ಬಾಕಿ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದು ಸಿ.ಟಿ.ರವಿ ಸೂಚಿಸಿದರು.

ಪರಿಭಾವಿತ ಅರಣ್ಯ ಮತ್ತು ಕಂದಾಯ ತಗಾದೆ ವ್ಯಾಪ್ತಿಯ ಅರ್ಜಿಗಳನ್ನು ಇತ್ಯರ್ಥಕ್ಕೆ ತೊಡಕು ಇದೆ. ಕಂದಾಯ ಮತ್ತು ಅರಣ್ಯ ಜಂಟಿ ಮೋಜಣಿ ನಕ್ಷೆ ಕೈಸೇರಿದರೆ ಅವುಗಳನ್ನು ಇತ್ಯರ್ಥಪಡಿಸಬಹುದು ಎಂದು ಚಿಕ್ಕಮಗಳೂರು ತಾಲ್ಲೂಕು ತಹಶೀಲ್ದಾರ್‌ ನಂದಕುಮಾರ್‌ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು