ಪಟ್ಟಣ ಸೇರಲು ಚರಂಡಿಯೇ ದಾರಿ

ತರೀಕೆರೆ: ಪಟ್ಟಣಕ್ಕೆ ಹೊಂದಿದ ಉಪ್ಪಾರ ಬಸವನಹಳ್ಳಿಯು ಪುರಸಭೆಗೆ ಸೇರಿ ಎರಡು ದಶಕಗಳು ಕಳೆದಿವೆ. ಆದರೆ, ಪುರಸಭೆಯ 2ನೇ ವಾರ್ಡ್ ಉಪ್ಪಾರ ಬಸವನಹಳ್ಳಿಯು ರಸ್ತೆ, ಚರಂಡಿ, ಕುಡಿಯುವ ನೀರು, ಸ್ಮಶಾನ, ನಿವೇಶನ ಹಕ್ಕು ಪತ್ರ, ವಸತಿ ಮತ್ತಿತರ ಮೂಲಸೌಕರ್ಯಗಳಿಂದ ಇನ್ನೂ ವಂಚಿತವಾಗಿವೆ.
ಇಲ್ಲಿಂದ ಪಟ್ಟಣವು ಕೇವಲ 300 ಮೀಟರ್ ದೂರದಲ್ಲಿದೆ. ನಡುವೆ ರೈಲ್ವೆ ಹಳಿ ಹಾದು ಹೋಗಿದೆ. ಹೀಗಾಗಿ ಜನರು 5 ಕಿ.ಮೀ. ಸುತ್ತು ಬಳಸಿ ಹೋಗಬೇಕು. ಅದಕ್ಕಾಗಿ ರೈಲ್ವೆ ಹಳಿಯ ಕೊಳಚೆ ನೀರು ಹರಿಯುವ ಸೇತುವೆಯನ್ನೇ ದಾರಿ ಮಾಡಿಕೊಂಡಿದ್ದಾರೆ. ಇಲ್ಲಿನ ಓಡಾಟದ ನರಕ ಯಾತನೆ ಹೇಳತೀರದು.
ಈ ವಾರ್ಡ್‌ಗೆ ಸಾರಿಗೆ ಸಂಪರ್ಕವೂ ಇಲ್ಲ. ವಿದ್ಯಾರ್ಥಿಗಳು ಸಮೀಪದ ಹಳಿಯೂರಿನ ಶಾಲೆಗೆ ಕಾಲು ದಾರಿಯಲ್ಲಿ ಹೋಗಬೇಕು. ಪಟ್ಟಣ ಸಂಪರ್ಕಿಸಲು ರೈಲ್ವೆ ಗೇಟ್ ವ್ಯವಸ್ಥೆ ಇಲ್ಲದ ಕಾರಣ, ಕೊಳಚೆ ನೀರು ಹರಿಯುವ ಕೆಳಸೇತುವೆಯ ಅವಲಂಬಿಸಬೇಕಾಗಿದೆ.
ವಾರ್ಡ್‌ನಲ್ಲಿ ಕಚ್ಚಾ ರಸ್ತೆಗಳೇ ಇದ್ದು ಅವು ಕೆಸರುಮಯವಾಗಿವೆ. ಸಿ.ಸಿ ರಸ್ತೆ ಹಾಗೂ ಚರಂಡಿಗಳಿಲ್ಲ. ದಿನನಿತ್ಯ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು , ವೃದ್ಧರು ಪರದಾಡುತ್ತಿದ್ದು, ಮಳೆಗಾಲದಲ್ಲಿ ಸರ್ಕಸ್ ಮಾಡಿ ಸಾಗಬೇಕು.
ಇಲ್ಲಿ ನೂರ ಐವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕುಡಿಯುಲು ಶುದ್ಧ ನೀರಿನ ಘಟಕವಿಲ್ಲ. ಕೊಳವೆ ಬಾವಿ ನೀರನ್ನು ಕುಡಿಯಬೇಕಾಗಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ನಿವಾಸಿ ಶ್ರೀನಿವಾಸ್ ಒತ್ತಾಯಿಸುತ್ತಾರೆ.
ಸುತ್ತಲ ಕೆರೆಗಳ ಹಿನ್ನೀರು ನಿಲ್ಲುವುದರಿಂದ ಮಳೆಯ ನೀರು ಮನೆಗಳಿಗೆ ನುಗ್ಗುತ್ತದೆ. ಸ್ವಚ್ಛತೆ ಮರೀಚಿಕೆಯಾಗಿದೆ. ಸಮೀಪದಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಅಂಗನವಾಡಿಗಳಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ. ಇಲ್ಲಿನ ಸ್ಮಶಾನ ಮತ್ತು ರಾಜಕಾಲುವೆ ಒತ್ತುವರಿಯಾಗಿರುವ ದೂರುಗಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.