ಬುಧವಾರ, ಜನವರಿ 27, 2021
16 °C
‘ತೇಜಸ್ವಿ ಜೊತೆ ಯುವಜನರ ಸಾಂಸ್ಕೃತಿಕ ಪಯಣ’ ಕಾರ್ಯಕ್ರಮ

‘ತೇಜಸ್ವಿ ಚಿಂತನೆ ಜನರನ್ನು ತಲುಪಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ: ‘ಮಲೆನಾಡಿನ ಹಸಿರು ಕೃಷಿಯ ಜೊತೆ ಸಾಹಿತ್ಯ ಕೃಷಿಯ ಸ್ಥಿರ ನೆಲೆಯನ್ನು ಕಟ್ಟಿಕೊಂಡವರು ತೇಜಸ್ವಿಯವರು’ ಎಂದು ಲೇಖಕ ಡಾ.ನರೇಂದ್ರ ರೈ ದೇರ್ಲ ಬಣ್ಣಿಸಿದರು.

ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಕೋಶ ಓದು ದೇಶ ನೋಡು ಬಳಗ ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ನಡೆದ ‘ತೇಜಸ್ವಿ ಜೊತೆ ಯುವಜನರ ಸಾಂಸ್ಕೃತಿಕ ಪಯಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂತಹ ಕಾರ್ಯಕ್ರಮಗಳ ಮೂಲಕ ತೇಜಸ್ವಿ ಅವರ ಬದುಕು ಬರಹ ಚಿಂತನೆಗಳು ಯುವ ಸಮುದಾಯವನ್ನು ತಲುಪಬೇಕು. ತೇಜಸ್ವಿ ಅವರು ಮಾತೃ ನೆಲದ ಒಡನಾಟದಿಂದ ನೆಲದ ಅಮೋಘ ಭಾಷೆಯನ್ನು ದಕ್ಕಿಸಿಕೊಂಡರು’ ಎಂದರು.

ಲೇಖಕಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ‘ತೇಜಸ್ವಿ ಅವರು ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಪ್ರತಿಯೊಂದು ಸಮಸ್ಯೆಯನ್ನು ನೋಡುತ್ತಿದ್ದರು. ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದರ ಕಡೆಗೆ ತೇಜಸ್ವಿ ಅವರ ಚಿಂತನೆಗಳಿದ್ದವು. ಪರಿಸರ ಸಂರಕ್ಷಣೆಯೇ ಪ್ರಪಂಚದ ಮೊದಲ ಆದ್ಯತೆಯಾಗಬೇಕು. ಪ್ರಕೃತಿ ಉಳಿಯದೇ ಮನುಷ್ಯನ ಉಳಿವು ಸಾಧ್ಯವಿಲ್ಲ ಎಂಬುವುದು ತೇಜಸ್ವಿ ಅವರ ನಿಲುವಾಗಿತ್ತು’ ಎಂದರು.

ಲೇಖಕ ಕೆ.ಪಿ. ಸುರೇಶ್ ಮಾತನಾಡಿ, ‘ತೇಜಸ್ವಿ ಅವರ ಕರ್ವಾಲೊ ಕಾದಂಬರಿ ಬದುಕಿನ ನಿತ್ಯ ರಗಳೆಗಳನ್ನು ಬಿಟ್ಟು ಮಹತ್ತಾದ ವಿಷಯಯೊಂದನ್ನು ಅನ್ವೇಷಿಸುತ್ತಾ ಸಾಗುವ ಪಯಣದ ಕಥಾನಕ. ಆ ಕಾದಂಬರಿಯಲ್ಲಿ ನೋಡುವುದಕ್ಕಿಂತಲೂ ಕಾಣುವಿಕೆಯ ಮಹತ್ತನ್ನು ತೇಜಸ್ವಿ ಅವರು ಅದ್ಭುತವಾಗಿ ಚಿತ್ರಿಸಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, ‘ಸಾಮಾಜಿಕ ಜಾಲತಾಣಗಳನ್ನು ಯುವ ತಲೆಮಾರು ಗೀಳಾಗಿಸಿಕೊಂಡಿದ್ದು, ಅದೇ ಜಾಲತಾಣಗನ್ನು ಬಳಸಿಕೊಂಡು ಓದುವ ಹವ್ಯಾಸವನ್ನು ಯುವ ಓದುಗರಲ್ಲಿ ಬೆಳೆಸಲು ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ’ ಎಂದರು.

ತೇಜಸ್ವಿ ಒಡನಾಡಿಗಳಾದ ರಾಘವೇಂದ್ರ, ಬಾಪು ದಿನೇಶ್, ಲೇಖಕರಾದ ಪೂರ್ಣೆಶ್ ಮತ್ತಾವರ, ಸತೀಶ್, ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಸಿಬ್ಬಂದಿ ಸತೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.