ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಗಳ ನೋಂದಣಿ ಕಡ್ಡಾಯ: ಎಚ್‌.ಎಲ್‌.ನಾಗರಾಜ್‌

ನೋಂದಾಯಿಸಲು ಒಂದು ತಿಂಗಳು ಕಾಲವಕಾಶ
Last Updated 2 ಫೆಬ್ರುವರಿ 2021, 17:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆಯಂತೆ ದೇಗುಲ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈವರೆಗೆ ಮಾಡಿಸದವರು ಅರ್ಜಿ ಸಲ್ಲಿಸಿ ನೋಂದಾಯಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಇಲ್ಲಿ ಮಂಗಳವಾರ ತಿಳಿಸಿದರು.

‘ನೋಂದಣಿ ಮಾಡಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ನೋಂದಾಯಿಸದಿದ್ದರೆ ನೋಟಿಸ್‌ ನೀಡಿ, ಕ್ರಮ ಜರುಗಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಧಿಸೂಚಿತ ದೇಗುಲಗಳನ್ನು ಹೊರತುಪಡಿಸಿ ಉಳಿದವನ್ನು ನೋಂದಣಿ ಮಾಡಿಸಬೇಕಿದೆ. ಪ್ರತಿಯೊಂದು ಖಾಸಗಿ ದೇವಾಲಯದ ನೋಂದಣಿಗೆ ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ದೇಗುಲದ ಪೂರ್ವಾಪರ ಮಾಹಿತಿ ಸಂಗ್ರಹಿಸಿ ನೋಂದಣಿ ಆದೇಶ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿಗಳು ಲಭ್ಯ ಇವೆ’ ಎಂದು ಹೇಳಿದರು.

‘ನ.19ರಂದು ತಹಶೀಲ್ದಾರ್‌ಗಳಿಗೆ ಪತ್ರ ಬರೆಯಲಾಗಿದೆ. ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳ 5ರಂದು ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ’ ಎಂದರು.

‘ಮಜುರಾಯಿ ದೇಗುಲಗಳ ಒಡವೆ ಮೌಲ್ಯಮಾಪನದ ನಿರ್ದೇಶನ ಖಾಸಗಿ ದೇಗುಲಕ್ಕೂ ಅನ್ವಯವಾಗುತ್ತದೆ. ನೋಂದಣಿ ಸಂದರ್ಭದಲ್ಲಿ ದೇಗುಲದ ಚಿನ್ನ, ಬೆಳ್ಳಿ ಅಭರಣ ಮೊದಲಾದವುಗಳ ಮೌಲ್ಯಮಾಪನ ಮಾಡಿಸಿ ಅದರಂತೆ ಅರ್ಜಿಯಲ್ಲಿ ವಾಸ್ತವಿಕತೆ ದೃಢೀಕರಿಸಿಕೊಳ್ಳಲಾಗುವುದು. ಮೌಲ್ಯಮಾಪನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಸಲಾಗುತ್ತದೆ’ ಎಂದು ವಿವರಿಸಿದರು.

‘ನೋಂದಣಿ ಪ್ರಕ್ರಿಯೆ ನಂತರ ಪ್ರಮಾಣ ಪತ್ರ ನೀಡಲಾಗುವುದು. ಆ ಪ್ರಮಾಣ ಪತ್ರವನ್ನು ದೇಗುಲದಲ್ಲಿ ಪ್ರದರ್ಶಿಸಬೇಕು’ ಎಂದು ಮಾಹಿತಿ ನೀಡಿದರು.

‘ಮನೆ ಆವರಣದಲ್ಲಿ ಗುಡಿ ಕಟ್ಟಿ, ಹೊರಗಿನ ಭಕ್ತರಿಗೆ ದರ್ಶನಕ್ಕೆ ಅವಕಾಶ, ಪೂಜಾ ಕೈಂಕರ್ಯ ಇದ್ದರೆ ಅವರೂ ನೋಂದಣಿ ಮಾಡಿಸಬೇಕು. ಪ್ರತಿಯೊಂದು ದೇಗುಲವನ್ನು ನೋಂದಾಯಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ’ ಎಂದು ಉತ್ತರಿಸಿದರು.

‘ಖಾಸಗಿಯವರು (ಟ್ರಸ್ಟ್, ಸಮಿತಿ, ಮಂಡಳಿ...) ದೇಗುಲದ ಚಟುವಟಿಕೆಗಳನ್ನು ನಿರ್ವಹಿಸಿ ಮುನ್ನಡೆಸಿದರೆ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಏಕಸ್ವಾಮ್ಯ, ಹಣ, ಆಸ್ತಿ ದುರುಪಯೋಗ ಮೊದಲಾದ ದೂರುಗಳಿದ್ದರೆ ಸರ್ಕಾರ ಮಧ್ಯಪ್ರವೇಶಿಸುತ್ತದೆ’ ಎಂದು ತಿಳಿಸಿದರು.

‘ಪ್ರತಿಯೊಂದು ದೇವಾಲಯದ ಮಾಹಿತಿ ಕಲೆ ಹಾಕಲಾಗುವುದು. ಮೂಢನಂಬಿಕೆಗಳನ್ನು ಬಿತ್ತುವುದು. ದೇವಾಲಯದ ಆಸ್ತಿ ದುರುಪಯೋಗ ಮಾಡುವುದು ಕಂಡಬಂದರೆ ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT