ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಕ್ರಿಸ್‌ಮಸ್‌ ಸಂಭ್ರಮಕ್ಕೆ ಸಜ್ಜುಗೊಂಡ ಕರಾವಳಿ

ಜೋಮನ್‌ ವರ್ಗೀಸ್‌
Published 18 ಡಿಸೆಂಬರ್ 2023, 6:57 IST
Last Updated 18 ಡಿಸೆಂಬರ್ 2023, 6:57 IST
ಅಕ್ಷರ ಗಾತ್ರ

ಮಂಗಳೂರು: ಮನೆಯ ಮುಂದೆ ನಕ್ಷತ್ರ ಮಿನುಗುತ್ತಿದೆ. ಮನೆಯೊಳಗೆ ಕೇಕ್, ’ಕುಸ್ವಾರ್‌’ ತಯಾರಿ ಭರದಿಂದ ನಡೆದಿದೆ. ಮನೆಯ ಆವರಣದಲ್ಲಿ ಬಾಲ ಯೇಸುವಿಗಾಗಿ ಪುಟ್ಟ ಗೋದಲಿ ಸಿದ್ಧಗೊಳ್ಳುತ್ತಿದೆ. ಸಂಜೆ ವೇಳೆ ತಂಗಾಳಿಯಂತೆ ತೇಲಿಬರುವ ‘ಕ್ಯಾರೆಲ್ಸ್‌’ ಗೀತೆ  ಕಿವಿಗೆ ಇಂಪು ನೀಡುತ್ತಿದೆ. ಬಿಳಿಗಡ್ಡದ, ಕೆಂಪು ಉಡುಪು ಧರಿಸಿದ ಸಾಂತಾಕ್ಲಾಸ್‌ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಉಡುಗೊರೆ ಕೊಡುತ್ತಾ ಮನೆಯಿಂದ ಮನೆಗೆ ಕ್ರಿಸ್‌ಮಸ್‌ ಸಂದೇಶ ಸಾರುತ್ತಿದ್ದಾರೆ. 

ವರ್ಷಾಂತ್ಯದ ಬಹುದೊಡ್ಡ ಸಂಭ್ರಮ ಕ್ರಿಸ್‌ಮಸ್‌ಗೆ ಕರಾವಳಿ ಮತ್ತೊಮ್ಮೆ ಸಜ್ಜಾಗಿದೆ. ಡಿ.24ರ ಮಧ್ಯರಾತ್ರಿ ವಿಶೇಷ ಪೂಜೆಯೊಂದಿಗೆ ಯೇಸುಕ್ರಿಸ್ತನ ಜನನ ಸಂಭ್ರಮವನ್ನು ಆಚರಿಸಲಾಗುತ್ತದೆ. ಆ ಮೂಲಕ ಡಿ. 1ರಿಂದ ಆರಂಭಗೊಂಡ ಕ್ರಿಸ್‌ಮಸ್‌ ಧಾರ್ಮಿಕ ಆಚರಣೆಗಳಿಗೆ ತೆರೆ ಬೀಳಲಿದೆ. ವಿಶ್ವದಾದ್ಯಂತ ಕ್ರೈಸ್ತರು ಕ್ರಿಸ್‌ಮಸ್‌ ಹಬ್ಬವನ್ನು ಏಕಕಾಲದಲ್ಲಿ ಆಚರಿಸುತ್ತಾರಾದರೂ ಆಚರಣೆಯಲ್ಲಿ ಏಕರೂಪತೆ  ಇಲ್ಲ. ಆಯಾ ಪ್ರದೇಶ, ಸಂಸ್ಕೃತಿಗೆ ತಕ್ಕಂತೆ ಹಬ್ಬದ ಆಚರಣೆಯಲ್ಲಿ ವ್ಯತ್ಯಾಸ ಇದೆ. ಕರಾವಳಿ ಕ್ರೈಸ್ತರ ಕ್ರಿಸ್‌ಮಸ್‌ ಆಚರಣೆಯಲ್ಲೂ ಈ ಸಾಂಸ್ಕೃತಿಕ ವೈವಿಧ್ಯ ಕಾಣಬಹುದು. 

ಪೊರ್ಚುಗಿಸರೊಂದಿಗೆ ಕ್ರೈಸ್ತ ಧರ್ಮವು ಕರಾವಳಿ ನೆಲವನ್ನು ಪ್ರವೇಶಿಸಿತು. ಕರಾವಳಿಯಲ್ಲಿ  ಮುಖ್ಯವಾಗಿ ರೋಮನ್‌, ಸಿರಿಯನ್‌ ಕಥೋಲಿಕ್‌, ಪ್ರಾಟೆಸ್ಟೆಂಟ್‌, ಸಿಎಸ್‌ಐ,  ಮೆಥಡಿಸ್ಟ್‌, ಪೆಂಟಕೋಸ್ಟ್‌ ಹೀಗೆ ಕ್ರೈಸ್ತ ಧರ್ಮದ ಹಲವು ಉಪ ಪಂಗಡಗಳು, ಸಿರೊ ಮಲಬಾರ್‌, ಸಿರೊ ಮಲಂಕರ, ಲ್ಯಾಟಿನ್‌, ಸಿಎಸ್‌ಐ, ಅರ್ಥೊಡಕ್ಸ್‌ ಧರ್ಮ ಕೇಂದ್ರಗಳನ್ನು ಕಾಣಬಹುದು. ಇಲ್ಲಿನ ಕ್ರೈಸ್ತರಲ್ಲಿ ಕನ್ನಡ, ಕೊಂಕಣಿ, ಮಲೆಯಾಳಂ, ತಮಿಳು ಭಾಷಿಕರೂ ಇದ್ದಾರೆ. ಪ್ರತಿ ಉಪಪಂಗಡದ ಕ್ರಿಸ್‌ಮಸ್‌ ಆಚರಣೆ ಮತ್ತು ಆಹಾರದಲ್ಲಿ   ವ್ಯತ್ಯಾಸವಿದೆ.

ಕ್ರಿಸ್‌ಮಸ್‌ ಸಂದರ್ಭದಲ್ಲಿ ಎಲ್ಲೆಡೆ ಕೇಕ್ ಹಂಚುವ ಪದ್ಧತಿಯಿದೆ. ಮಂಗಳೂರಿನಲ್ಲಿ ಕೊಂಕಣಿ ಕಥೋಲಿಕ್‌ ಕ್ರೈಸ್ತರು ಕೇಕ್ ಜತೆಗೆ  ‘ಕುಸ್ವಾರ್’ ಹಂಚುತ್ತಾರೆ. ನೆವ್ರಿಯೊ, ಕುಕ್ಕೀಸ್‌, ಅಕ್ಕಿ, ರವೆ ಲಡ್ಡು, ವಿವಿಧ ರೀತಿಯ ಚಕ್ಕುಲಿಗಳು, ಅಕ್ಕಿ ಹಿಟ್ಟಿನಿಂದ ತಯಾರಿಸಿದ ಸಣ್ಣ ಗೋಲಿಯಾಕಾರದ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿ, ಅದನ್ನು ಹಬ್ಬದ ದಿನ ಪಾತ್ರೆಯೊಂದರಲ್ಲಿ ಒಪ್ಪ, ಓರಣವಾಗಿ ಜೋಡಿಸಿ, ನೆರೆಮನೆಯವರಿಗೆ, ಬಂಧುಗಳಿಗೆ, ಅತಿಥಿಗಳಿಗೆ ಹಂಚುತ್ತಾರೆ. ಕ್ರಿಸ್‌ಮಸ್‌ಗೆ ವಿಶೇಷ ಮೆರುಗು ನೀಡುವುದೇ ಈ ಕುಸ್ವಾರ್‌ನ ತಯಾರಿ ಹಾಗೂ ಹಂಚುವಿಕೆ. ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆ ವಾಣಿಜ್ಯ ಸ್ವರೂಪ ಪಡೆದುಕೊಂಡು ‘ಕುಸ್ವಾರ್ ಟೈಮ್ಸ್‌’ಎಂಬ ಹೆಸರಿನಿಂದಲೂ ಜನಪ್ರಿಯಗೊಂಡಿದೆ. ಪೊರ್ಚುಗಿಸರ ಸಂಪ್ರದಾಯವಾದ ‘ಕನ್ಸೋಡಾ’ ಎಂಬ ಪರಿಕಲ್ಪನೆಯಿಂದ ‘ಕುಸ್ವಾರ್’ ಕರಾವಳಿಯಲ್ಲಿ ಆಚರಣೆಗೆ ಬಂತು.

ಕರಾವಳಿಗೆ ವಲಸೆ ಬಂದು ನೆಲೆಗೊಂಡ ಕೊಚ್ಚಿ ಕ್ರಿಶ್ಚಿಯನ್ನರು (ಕೇರಳ ಕ್ರೈಸ್ತರು) ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಕೇರಳ ಶೈಲಿಯ ಸಿಹಿ ತಿನಿಸುಗಳನ್ನು ತಯಾರಿಸುತ್ತಾರೆ. ಹಬ್ಬದ ದಿನ ವಿಶೇಷವಾಗಿ ತಯಾರಿಸುವ ಮಾಂಸಾಹಾರ, ಕೇಕ್‌ ಅನ್ನು ನೆರೆಮನೆಯವರಿಗೆ ಕೊಡುವ ಸಂಪ್ರದಾಯವಿದೆ. ಅತಿಥಿಗಳನ್ನು, ಸ್ನೇಹಿತರನ್ನು ಮನೆಗೆ ಊಟಕ್ಕೆ ಆಹ್ವಾನಿಸುವ ಸಂಪ್ರದಾಯವೂ ಇದೆ.

ಡಿ.1ರಿಂದಲೇ ಆರಂಭ: ಸಾಮಾನ್ಯವಾಗಿ ‘ಕ್ರಿಸ್‌ಮಸ್‌ ಆಚರಣೆ ಡಿ. 1ರಿಂದಲೇ ಆರಂಭವಾಗುತ್ತದೆ. ಡಿ. 1ರಿಂದ ಡಿ.24ರವರೆಗೆ ಕ್ರೈಸ್ತರಿಗೆ ಉಪವಾಸ ಕಾಲ. ಆದರೆ, ಇದು ಕಡ್ಡಾಯವಾಗಿ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆ ಅಲ್ಲ. ಹೆಚ್ಚಿನವರು ಈ ಅವಧಿಯಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ. ಪ್ರತಿದಿನ ಬೆಳಗ್ಗೆ ನಡೆಯುವ ಕ್ರಿಸ್‌ಮಸ್‌ ತಿಂಗಳ ವಿಶೇಷ  ಪೂಜೆಗೆ ಚರ್ಚ್‌ಗೆ ಹಾಜರಾಗುತ್ತಾರೆ. 

‘ಸ್ವಯಂ ಪ್ರೇರಿತ ಉಪವಾಸವನ್ನು ಚರ್ಚ್‌ ಪ್ರೋತ್ಸಾಹಿಸುತ್ತದೆ. ಉಳ್ಳವರು ಇಲ್ಲದವರ ಜತೆಗೆ ಹಂಚಿಕೊಳ್ಳುವ ಮತ್ತು ಸಮಾಜದಲ್ಲಿ ಸಹಬಾಳ್ವೆಯನ್ನು ಇದು ಪ್ರೋತ್ಸಾಹಿಸುತ್ತದೆ. ಕಷ್ಟದಲ್ಲಿರುವವರಿಗೆ ನೆರವು ನೀಡಲು, ಮತ್ತೊಬ್ಬರಿಗೆ ದಯೆ, ಕರುಣೆ ತೋರಿಸಲು, ದಾನ ಮಾಡಲು ಕ್ರಿಸ್‌ಮಸ್‌ ಪ್ರೇರಕ ಶಕ್ತಿಯಾಗಲಿ’ ಎನ್ನುತ್ತಾರೆ ಉಜಿರೆಯ ಸೇಂಟ್‌ ಜಾರ್ಜ್‌ ಚರ್ಚ್‌ನ ಫಾ. ಜಾರ್ಜ್‌.

ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌ ಸಮೀಪದ ಮಳಿಗೆಯಲ್ಲಿ ನಕ್ಷತ್ರ ಕ್ರಿಸ್‌ಮಸ್‌ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕಿಟ್ಟಿರುವುದು
ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌ ಸಮೀಪದ ಮಳಿಗೆಯಲ್ಲಿ ನಕ್ಷತ್ರ ಕ್ರಿಸ್‌ಮಸ್‌ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕಿಟ್ಟಿರುವುದು
ಮನೆಯ ಮುಂದೆ ತೂಗು ಹಾಕಿದ ನಕ್ಷತ್ರವು ಯೇಸು ಕ್ರಿಸ್ತನ ಜನನ ಸಂಭ್ರಮವನ್ನು ಸೂಚಿಸುತ್ತದೆ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಹರಡಲು ಕ್ರಿಸ್‌ಮಸ್‌ ಶಕ್ತಿ ನೀಡಲಿ
ಮಾ. ಲಾರೆನ್ಸ್‌ ಮುಕ್ಕುಯಿ ಧರ್ಮಾಧ್ಯಕ್ಷರು ಬೆಳ್ತಂಗಡಿ ಧರ್ಮಪ್ರಾಂತ್ಯ
ಡಿಸೆಂಬರ್‌ ಎರಡನೆಯ ವಾರದಿಂದ ಕುಸ್ವಾರ್ ತಯಾರಿಕೆ ಆರಂಭವಾಗುತ್ತದೆ. ಇದರಲ್ಲಿ ಕುಟುಂಬದ ಎಲ್ಲ ಸದಸ್ಯರು ಜತೆಗೂಡುತ್ತಾರೆ. ಕುಟುಂಬದ ಪ್ರೀತಿ ಮತ್ತು ಐಕ್ಯತೆಯ ಸಂಕೇತ ಇದು
– ಸ್ಟೆಲ್ಲಾ ಡಿಸೋಜ ಮಂಗಳೂರು
ನಿಕೊಲೊಸ್‌ ಸ್ಮರಣೆ
ಕ್ರಿಸ್‌ಮಸ್‌ ಆಚರಣೆಯಲ್ಲಿ ಎಲ್ಲರ ಗಮನ ಸೆಳೆಯುವ ವ್ಯಕ್ತಿ ಸಾಂತಾಕ್ಲಾಸ್‌. ರೋಮನ್‌ ಸಾಮ್ರಾಜ್ಯದಲ್ಲಿ ನಾಲ್ಕನೆಯ ಶತಮಾನದಲ್ಲಿ ಬದುಕಿದ್ದ ಸಂತ ನಿಕೊಲೊಸ್‌ನನ್ನು ಸಾಂತಾಕ್ಲಾಸ್ ರೂಪದಲ್ಲಿ ಕ್ರಿಸ್‌ಮಸ್‌ ಸಂದರ್ಭದಲ್ಲಿ  ಸ್ಮರಿಸಲಾಗುತ್ತದೆ. ನಿಕೊಲಸ್‌ ಬಡವರಿಗೆ ಮಕ್ಕಳಿಗೆ ಸಹಾಯ ಮಾಡುತ್ತಾ ಅವರ ಅರಿವಿಗೆ ಬಾರದಂತೆ ಅವರಿಗೆ ಪಾರಿತೋಷಕ ಕೊಡುವ ವ್ಯಕ್ತಿಯಾಗಿದ್ದರು. ಕ್ರಿಸ್‌ಮಸ್‌ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುವ ಮಕ್ಕಳಿಗೆ ಪಾರಿತೋಷಕ ಕೊಡುವ ಮೂಲಕ ಕ್ರಿಸ್ತನನ್ನು ಸ್ವಾಗತಿಸಬೇಕು ಎಂಬ ಸಂದೇಶವನ್ನು ಸಾಂತಾಕ್ಲಾಸ್‌ ಸಾರುತ್ತಾನೆ.
ವರ್ಷಾಂತ್ಯದ ಮಹಾ ವ್ಯಾಪಾರ ಮೇಳ
ಇತ್ತೀಚಿನ ವರ್ಷಗಳಲ್ಲಿ ಕ್ರಿಸ್‌ಮಸ್‌ ಆಚರಣೆ ಗೋದಲಿ ನಿರ್ಮಾಣ (ಕ್ರಿಬ್‌) ಗೀತಗಾಯನ (ಕ್ಯಾರೆಲ್ಸ್‌)  ಕ್ರಿಸ್‌ಮಸ್‌ ತಾತ (ಸಾಂತಾಕ್ಲಾಸ್‌) ಕ್ರೀಸ್‌ಮಸ್‌ ಮರ (ಕ್ರಿಸ್‌ಮಸ್‌ ಟ್ರೀ) ಮತ್ತು ಕ್ರಿಸ್‌ಮಸ್‌ ಅಲಂಕಾರ (ಡೆಕೊರೇಷನ್ಸ್‌) ಒಳಗೊಂಡು ವಾಣಿಜ್ಯ ಸ್ವರೂಪ  ಪಡೆದುಕೊಂಡಿದೆ. ಕ್ರಿಸ್‌ಮಸ್‌ ಹೆಸರಿನಲ್ಲಿ  ಡಿಸೆಂಬರ್‌ ತಿಂಗಳಿಡೀ ವ್ಯಾಪಾರ ವಹಿವಾಟು ಪ್ರವಾಸೋದ್ಯಮ ಚಟುವಟಿಕೆ ಗರಿಗೆದರುತ್ತದೆ. ಜನರು ವರ್ಷವಿಡೀ ಆಸೆಪಟ್ಟ ವಸ್ತುಗಳ ಖರೀದಿ ನಡೆಯುವುದೇ ಕ್ರಿಸ್‌ಮಸ್ ವಾರದಲ್ಲಿ. ವ್ಯಾಪಾರಿಗಳ ದೃಷ್ಟಿಯಲ್ಲಿ ಕ್ರಿಸ್‌ಮಸ್‌ ಎನ್ನುವುದು ವರ್ಷಾಂತ್ಯದಲ್ಲಿ ನಡೆಯುವ ಮಹಾ ವ್ಯಾಪಾರ ಜಾತ್ರೆಯಂತೆ. ಮಂಗಳೂರಿನಲ್ಲಿ ಕೂಡ ಕ್ರಿಸ್‌ಮಸ್‌ ಹಬ್ಬವನ್ನು ಬಳಸಿಕೊಂಡು ಆತಿಥ್ಯ ಉದ್ಯಮ ಬೆಳೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT