ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು–ಹೊನ್ನಾವರ ರಸ್ತೆ ಕಾಮಗಾರಿ ಅಪೂರ್ಣ: ಒಕ್ಕಣೆ ಕಣಗಳಾದ ಹೆದ್ದಾರಿ

Published 8 ಫೆಬ್ರುವರಿ 2024, 6:59 IST
Last Updated 8 ಫೆಬ್ರುವರಿ 2024, 6:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತುಮಕೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯು ಸುಗ್ಗಿ ಕಾಲದಲ್ಲಿ ರೈತರಿಗೆ ಒಕ್ಕಣೆ ಕಣವಾಗಿ ಮಾರ್ಪಟ್ಟಿದೆ.

ರಾಷ್ಟ್ರೀಯ ಹೆದ್ದಾರಿ–206 ಆರು ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೂರುವರೆ ವರ್ಷಗಳ ಹಿಂದೆ ಆರಂಭವಾಗಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಮೇಲ್ಸೇತುವೆ ಕಾಮಗಾರಿ ಇನ್ನೂ ಕುಂಟುತ್ತಾ ಸಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಡಾಂಬರ್ ರಸ್ತೆಗಳು ಈಗ ಒಕ್ಕಣೆ ಕಣಗಳಾಗಿವೆ.

ಕಡೂರಿನಿಂದ ತರೀಕೆರೆಗೆ ಹೋಗುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬಹುತೇಕ ಒಕ್ಕಣೆಯ ಕಣವಾಗಿದೆ. ರಾಗಿ ಮತ್ತು ಭತ್ತದ ಕೊಯ್ಲು ಮುಗಿಸಿ ರೈತರು ರಸ್ತೆಗೆ ತಂದು ಹಾಕಿಕೊಂಡಿದ್ದಾರೆ. ಟ್ರ್ಯಾಕ್ಟರ್‌, ಟಿಲ್ಲರ್‌ಗಳನ್ನು ಬಳಸಿ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ಬರುವ ಧೂಳು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಹೆದ್ದಾರಿಯಿಂದ ಬೇರೆ ರಸ್ತೆಗಳಿಗೆ ತಿರುವು ಪಡೆಯಲು ಕೊಂಚ ಅಗಲವಾಗಿರುವ ಕಡೆಯೂ ರಸ್ತೆಯ ಅಂಚಿನಲ್ಲಿ ಒಕ್ಕಣೆ ಮಾಡಲಾಗುತ್ತಿದೆ. ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನ ಸವಾರರು ಗೊಂದಲಕ್ಕೆ ಈಡಾಗುತ್ತಿದ್ದು,  ಅಪಘಾತಗಳಿಗೂ ಕಾರಣವಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹುಲ್ಲಿನ ಮೇಲೆ ಸಾಗಿ ನಿಯಂತ್ರಣ ತಪ್ಪಿ ಬೀಳುವ ಸಂಭವವೂ ಹೆಚ್ಚಿದೆ.

‘ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಬಳಸಿ ಒಕ್ಕಣೆ ಮಾಡುವುದರಿಂದ ರಸ್ತೆಗೂ ಹಾನಿ ಇದ್ದು, ಹೆದ್ದಾರಿ ಅಧಿಕಾರಿಗಳು ಗಮನಿಸುತ್ತಿಲ್ಲ. ವಾಹನ ಸವಾರರಿಗೆ ಆಗುವ ತೊಂದರೆ ಬಗ್ಗೆಯೂ ಮನವರಿಕೆ ಮಾಡಿಸುತ್ತಿಲ್ಲ’ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮಗಳಲ್ಲಿ ಒಕ್ಕಣೆ ಕಣಗಳನ್ನು ನಿರ್ಮಿಸಿಕೊಳ್ಳುವುದನ್ನೇ ರೈತರು ಮರೆತಿದ್ದಾರೆ. ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸುವ ರೈತರು, ‘ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಒಕ್ಕಣೆ ಮಾಡುತ್ತಿದ್ದೇವೆ. ಗ್ರಾಮಗಳಲ್ಲಿ ಒಕ್ಕಣೆ ಕಣಗಳೇ ಇಲ್ಲವಾಗಿದ್ದು,  ಮುಂದಿನ ವರ್ಷದಿಂದ ಒಕ್ಕಣೆಗೆ ಪರದಾಡಬೇಕಾದ ಸ್ಥಿತಿ ಇದೆ’ ಎಂದು ಹೇಳುತ್ತಾರೆ.

ಬೀರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಕ್ಕಣೆ ಮಾಡುತ್ತಿರುವ ರೈತರು
ಬೀರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಕ್ಕಣೆ ಮಾಡುತ್ತಿರುವ ರೈತರು
ಸೂಚನಾ ಫಲಕ ಇಲ್ಲದೆ ಸವಾರರು ಗೊಂದಲ
ಈ ಹೆದ್ದಾರಿಯಲ್ಲಿ ಹಲವು ಕಡೆಗಳಲ್ಲಿ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿ ನಡೆಯುತ್ತಿದೆ. ಏಕಾಏಕಿ ತಿರುವುಗಳನ್ನು ಪಡೆಯಬೇಕಿದೆ. ಎತ್ತ ಸಾಗಬೇಕು ಎಂಬುದು ಗೊತ್ತಾಗದೆ ವಾಹನ ಸವಾರರು ಪರದಾಡುವಂತಾಗಿದೆ. ಬೀರೂರಿನಿಂದ ತರೀಕೆರೆ ಮಾರ್ಗದಲ್ಲಿ ಶಿವಮೊಗ್ಗ ಕಡೆಗೆ ತೆರಳಬೇಕಾದ ವಾಹನ ಸವಾರರು ಹೊಸ ಹೆದ್ದಾರಿ ನಿರ್ಮಾಣವಾಗುತ್ತಿರುವ ಕಡೆಗಳಲ್ಲಿ ಗೊಂದಲಕ್ಕೆ ಈಡಾಗುತ್ತಿದ್ದಾರೆ. ಹೊಸ ರಸ್ತೆ ಪೂರ್ಣ ಆಗಿರಬಹುದು ಎಂದು ಮುಂದೆ ಸಾಗಿ ವಾಪಸ್ ಬರಬೇಕಾದ ಸ್ಥಿತಿ ಇದೆ. ಸೂಚನಾ ಫಲಕ ಇದ್ದಿದ್ದರೆ ವಾಹನ ಸವಾರರು ಪರದಾಡುವ ಸ್ಥಿತಿ ಇರುವುದಿಲ್ಲ. ರಾತ್ರಿ ವೇಳೆಯಂತೂ ಈ ಮಾರ್ಗದಲ್ಲಿ ಹೊಸದಾಗಿ ಬರುವ ಚಾಲಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT