ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಕುಡಿಯುವ ನೀರಿನ ಪೈಪ್‍ಲೈನ್ ಬಳಿ ಉಕ್ಕಿ ಹರಿಯುತ್ತಿರುವ ತ್ಯಾಜ್ಯ

ಮುಗಿಯದ ಯುಜಿಡಿ ಅವಾಂತರ
Last Updated 13 ಜುಲೈ 2020, 17:02 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾದಾಗಿನಿಂದಲೂ ಅವಾಂತರಗಳನ್ನೇ ಸೃಷ್ಟಿಸುತ್ತಿದ್ದು, ನೂರಾರು ನಾಗರಿಕರಿಗೆ ಮತ್ತೆ ಸಮಸ್ಯೆ ತಂದೊಡ್ಡಿದೆ. ಪಟ್ಟಣದ ರಾಜಾಜಿನಗರ, ಭಾಗವತ್ ನಗರ ಮತ್ತು ಹೊಸಾಳಮ್ಮ ಬಡಾವಣೆಗಳ ತ್ಯಾಜ್ಯವನ್ನು ಸಂಗ್ರಹಿಸಲು ಟ್ರೀಟ್‍ಮೆಂಟ್ ಪ್ಲಾಂಟ್ ವ್ಯವಸ್ಥೆ ಆಗದ ಕಾರಣ ಕೆ.ಎಲ್‍.ಕೆ. ಮೈದಾನದ ಮೂಲೆಯಲ್ಲಿ ಆಳುಗುಂಡಿಯಿಂದ ತ್ಯಾಜ್ಯ ಉಕ್ಕಿ ಹರಿಯುತ್ತಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೆ.ಎಲ್‍.ಕೆ. ಪಿಯು ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾಂಪೌಂಡ್ ಒಳಭಾಗದ ಮೂಲೆಯಲ್ಲಿ ಆಳುಗುಂಡಿ (ಮ್ಯಾನ್‍ಹೋಲ್) ಇದ್ದು ಇಲ್ಲಿಂದ ಮುಂದೆ ತ್ಯಾಜ್ಯ ಹರಿದುಹೋಗಲು ಸಂಪರ್ಕ ಕಲ್ಪಿಸಿಲ್ಲ. ರಾಜಾಜಿನಗರ ಪ್ರದೇಶದ ಹಲವಾರು ನಾಗರಿಕರು ಹಣ ತೆತ್ತು ಸಂಪರ್ಕ ಕೂಡಾ ಪಡೆದುಕೊಂಡಿ ದ್ದಾರೆ. ಇಲ್ಲಿನ ತ್ಯಾಜ್ಯ ಸಂಗ್ರಹಿಸಲು ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆ ಸಮೀಪ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಒಳಚರಂಡಿ ಮಂಡಳಿ ಭರವಸೆ ನೀಡಿತ್ತು. ಆದರೆ, ಪುರಸಭೆ ಜಾಗ ಗುರುತಿಸಿ ಕೊಡದ ಕಾರಣ ಘಟಕ ಸ್ಥಾಪನೆ ನನೆಗುದಿಗೆ ಬಿದ್ದಿದೆ. ಹೀಗಾಗಿ, ಕೊಳಚೆ ಮುಂದೆ ಹರಿಯದೆ ಕಾಲೇಜು ಆವರಣದಲ್ಲಿ ಉಕ್ಕಿ ಹೊರಬಂದು ಪಕ್ಕದಲ್ಲಿರುವ ಚರಂಡಿ ಸೇರುತ್ತಿದೆ.

‘ಇದು ಜನವಸತಿ ಪ್ರದೇಶವಾಗಿದೆ. ಮಾತ್ರವಲ್ಲ, ವಿದ್ಯಾರ್ಥಿನಿಲಯ, ಬಿಇಒ ಕಚೇರಿ, ಹೆದ್ದಾರಿ, ಕಲ್ಯಾಣಮಂಟಪ ಮತ್ತು ರೈಲ್ವೆ ಸ್ಟೇಷನ್‍ಗೆ ನೂರಾರು ಪ್ರಯಾಣಿಕರು ನಿತ್ಯ ಸಂಚರಿಸುವ ಸ್ಥಳವಾಗಿದೆ. ಮಳೆ ಬಂದರೆ ಅಥವಾ ಕೊಳಚೆ ತುಂಬಿ ಹರಿದರೆ ಮೂಗು ಮುಚ್ಚಿ ಓಡಾಡಬೇಕು. ಮುಖ್ಯವಾಗಿ ಕಾಲೇಜು ಆವರಣದ ಆಳುಗುಂಡಿಯ ಪಕ್ಕವೇ ಸ್ಥಳೀಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸುವ ವಾಲ್ವ್ ಇದೆ. ಎಷ್ಟೋ ಬಾರಿ ಈ ಕೆಟ್ಟನೀರು ಕುಡಿಯುವ ನೀರಿನ ಜತೆ ಸೇರಿದ್ದು, ಈ ಬಗ್ಗೆ ಪುರಸಭೆಗೆ ದೂರು ನೀಡಿದ್ದೂ ಆಗಿದೆ. ಆದರೆ, ಪರಿಹಾರ ದೊರೆತಿಲ್ಲ’ ಎಂಬುದು ಇಲ್ಲಿನ ನಾಗರಿಕರ ದೂರು.

‘ವಾಲ್ವ್ ಪಕ್ಕದಲ್ಲಿ ಸಣ್ಣ ಪೈಪ್ ಅಳವಡಿಸಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ನೀರು ಪೂರೈಕೆ ವ್ಯವಸ್ಥೆ ಕೂಡಾ ಮಾಡಲಾಗಿದೆ. ಪುರಸಭೆ ಮಾತ್ರ ಕಾಂಪೌಂಡ್ ಮೂಲೆಯನ್ನು ಸ್ವಲ್ಪ ತೆರವುಗೊಳಿಸಿ ಕೊಳಚೆ ನೀರು ಚರಂಡಿ ಸೇರಲು ಅನುವು ಮಾಡಿಕೊಟ್ಟಿದೆ. ಇದು ಕೋಟ್ಯಂತರ ಹಣ ವ್ಯಯಿಸಿ ಕೈಗೊಂಡ ಅಪೂರ್ಣ ಯೋಜನೆಯ ದುಸ್ಥಿತಿಗೆ ಕೈಗನ್ನಡಿಯಾಗಿದೆ. ಹೀಗಾದರೆ, ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ?’ ಎನ್ನುವುದು ಸ್ಥಳೀಯರ ಪ್ರಶ್ನೆ.

ಪೈಪ್‍ಲೈನ್‍ನಲ್ಲಿ ಸಂಗ್ರಹಗೊಂಡ ತ್ಯಾಜ್ಯವು ವಿಲೇವಾರಿ ಘಟಕ ಸೇರದೆ ಹೋದರೆ ಸಂಪರ್ಕ ಪಡೆದ ಮನೆಗಳ ಒಳಭಾಗದಲ್ಲಿ ಉಕ್ಕುವುದು ಖಚಿತ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಲು ಮುಂದಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT