ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಬಿಜೆಪಿಯಿಂದ ವರಸಿದ್ಧಿ ಅಮಾನತು

ನಗರಸಭೆ ರಾಜಕಾರಣ: ದಿನಕ್ಕೊಂದು ಬೆಳವಣಿಗೆ
Published 20 ಅಕ್ಟೋಬರ್ 2023, 14:35 IST
Last Updated 20 ಅಕ್ಟೋಬರ್ 2023, 14:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆಯುವ ಮೂಲಕ ವರಿಷ್ಠರಿಗೆ ಸಡ್ಡು ಹೊಡೆದಿದ್ದ ವರಸಿದ್ಧಿ ವೇಣುಗೋಪಾಲ್ ಅವರನ್ನು ಬಿಜಿಪಿಯಿಂದ ಅಮಾನತು ಮಾಡಲಾಗಿದೆ.

‘ಪಕ್ಷದ ತೀರ್ಮಾನಗಳನ್ನು ಪದೇ ಪದೇ ಉಲ್ಲಂಘನೆ ಮಾಡುವ ಮೂಲಕ‌ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಪಕ್ಷಕ್ಕೆ ಮುಜಗರ ಉಂಟು ಮಾಡಿದ್ದಾರೆ. ಖುದ್ದು ಹಾಜರಾಗಿ ಸಮಜಾಯಿಷಿ ನೀಡಲು ತಿಳಿಸಿದ್ದರೂ ಉತ್ತರ ನೀಡಿಲ್ಲ. ಆದ್ದರಿಂದ ಅಮಾನತು ಮಾಡಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ ಪತ್ರದಲ್ಲಿ ತಿಳಿಸಿದ್ದಾರೆ.

‌ಈ ನಡುವೆ ನಗರಸಭೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ಅವಿಶ್ವಾಸ ಮಂಡಿಸಲು ಕಾಲಾವಕಾಶ ಕೋರಿ 21 ಸದಸ್ಯರು ಸಹಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ.

ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ವರಸಿದ್ಧಿ ವೇಣುಗೋಪಾಲ್ ಎರಡನೇ ಬಾರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ರಾಜೀನಾಮೆ ವಾಪಸ್ ಪಡೆದು ಯಾರ ಸಂಪರ್ಕಕ್ಕೂ ಸಿಗದೆ ಪ್ರವಾಸ ತೆರಳಿದ್ದರು. ಈಗ ವಾಪಸ್ ಬಂದಿದ್ದು, ಅಷ್ಟರಲ್ಲಿ ಪಕ್ಷ ಅವರನ್ನು ಅಮಾನತುಗೊಳಿಸಿದೆ.

ವರಸಿದ್ಧಿ ವೇಣುಗೋಪಾಲ್ ಅವರೇ ರಚಿಸಿದ್ದ ‘ವರಸಿದ್ಧಿ ಪತ್ರಿಕಾ ಮಿತ್ರರು’ ವಾಟ್ಸ್ಆ್ಯಪ್ ಗ್ರೂಪ್‌ನಿಂದಲೂ ಅವರನ್ನು ಹೊರ ಹಾಕಲಾಗಿದೆ. ಬಿಜೆಪಿ ಸಹ ವಕ್ತಾರ ದಿನೇಶ್ ಅವರು ವರಸಿದ್ಧಿ ಅವರ ಸಂಖ್ಯೆಯನ್ನು ತೆಗೆದಿದ್ದು, ‘ಬಿಜೆಪಿ ಪತ್ರಿಕಾ ಮಿತ್ರರು’ ಎಂದು ಗ್ರೂಪ್‌ ಹೆಸರು ಬದಲಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲ್ಮರುಡಪ್ಪ, ‘ಜಿಮ್‌ಗೆ ಹೆಸರಿಡುವುದು ಸೇರಿ ಯಾವುದೇ ವಿಷಯದಲ್ಲೂ ಪಕ್ಷವನ್ನು ಪರಿಗಣಿಸದೆ ವರ್ತಿಸುತ್ತಿದ್ದಾರೆ. ನಗರಸಭೆಯ ಈ ಹಿಂದಿನ 10 ಅಧ್ಯಕ್ಷರು ಪಕ್ಷದ ತೀರ್ಮಾನಗಳಿಗೆ ಬದ್ಧರಾಗಿ ನಡೆದುಕೊಂಡಿದ್ದಾರೆ. ವರಸಿದ್ಧಿ ವೇಣುಗೋಪಾಲ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇದು ಮುಂದುವರಿಯುವ ಸಾಧ್ಯತೆ ಇದೆ’ ಎಂದರು.

‘ಮುಂದಿನ ದಿನಗಳಲ್ಲಿ ಪಕ್ಷಕ್ಕೂ ಅವರಿಗೂ ಸಂಬಂಧ ಇರುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ರಾಜ್ಯ ಮಟ್ಟದ ಶಿಸ್ತು ಸಮಿತಿ ಗಮನಕ್ಕೆ ತರಲಾಗಿದ್ದು, ಮುಂದಿನ ತೀರ್ಮಾನವನ್ನು ಆ ಸಮಿತಿ ತೆಗೆದುಕೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು.

‘ರಾಜೀನಾಮೆ ವಾಪಸ್ ಪಡೆದುಕೊಳ್ಳುವಂತೆ ಕೊನೆಯ ಪ್ರಯತ್ನ ನಡೆಸಲಾಯಿತು. ಆದರೆ, ಅವರು ಅದಕ್ಕೆ ಒಪ್ಪಲಿಲ್ಲ. ಅವರನ್ನು ಕಾಂಗ್ರೆಸ್ ಆಪರೇಷನ್ ಮಾಡಿದೆ ಎಂಬ ಮಾಹಿತಿ ಸದ್ಯಕ್ಕೆ ಇಲ್ಲ. ಮುಂದಿನ ಬೆಳವಣಿಗೆಗಳನ್ನು ನೋಡೋಣ’ ಎಂದರು.

Cut-off box - ತಾಯಿ ಸ್ಥಾನದ ಪಕ್ಷಕ್ಕೆ ಮೋಸ: ಟಿ.ರಾಜಶೇಖರ್ ದುರಾಸೆ ಬಿಟ್ಟು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ನೀಡಬೇಕು ಎಂದು ನಗರಸಭೆ ಬಿಜೆಪಿ ಸದಸ್ಯ ಟಿ.ರಾಜಶೇಖರ್ ಒತ್ತಾಯಿಸಿದರು. ‘ಬಿಜೆಪಿಯೇ ನನ್ನ ತಾಯಿ ಎನ್ನುತ್ತಿದ್ದ ವರಸಿದ್ಧಿ ವೇಣುಗೋಪಾಲ್ ತಾಯಿಗೆ ಮೋಸ ಮಾಡುವ ಕೆಲಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಪಕ್ಷ ಸೇರುವ ಪ್ರಶ್ನೆ ಇಲ್ಲ: ವರಸಿದ್ಧಿ

ಅಮಾನತು ಮಾಡಿರುವ ಕಲ್ಮರುಡಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವರಸಿದ್ಧಿ ವೇಣುಗೋಪಾಲ್ ‘ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಸೋಲಿಗೆ ಕಾರಣವಾದ ಕಲ್ಮರುಡಪ್ಪ ಅವರನ್ನು ಅಮಾನತುಪಡಿಸಬೇಕು’ ಎಂದು ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾನು ಪಕ್ಷದಲ್ಲಿ 32 ವರ್ಷ ದುಡಿದಿದ್ದೇನೆ. ಹೋರಾಟದಲ್ಲಿ ಮುಂಚೂಣಿಯಾಗಿ ನಿಂತಿದ್ದೇನೆ. ನನ್ನ ರಾಜೀನಾಮೆ ಕೇಳಲು ಕಲ್ಮರುಡಪ್ಪಗೆ ಯಾವುದೇ ನೈತಿಕತೆ ಇಲ್ಲ. ಅಮಾನತು ಮಾಡಿರುವುದರಿಂದ ಬೇಜಾರಿಲ್ಲ. ಸಿಡಿಎ ಅಧ್ಯಕ್ಷರಿಗೆ ಮೂರೂವರೆ ವರ್ಷ ಅಧಿಕಾರ ನನಗೇಕೆ 20 ತಿಂಗಳು’ ಎಂದು ಪ್ರಶ್ನಿಸಿದರು. ‘ಈ ಬೆಳವಣಿಗೆಗಳನ್ನು ಪಕ್ಷದ ನಮ್ಮ ನಾಯಕರಿಗೆ ಹೇಳಿದ್ದೇನೆ. ಇವತ್ತಿಗೂ ಅವರೇ ನಮ್ಮ ನಾಯಕರು’ ಎಂದು ಸಿ.ಟಿ.ರವಿ ಹೆಸರು ಉಲ್ಲೇಖಿಸದೆ ಹೇಳಿದರು. ‘ನಗರಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಟಿ.ರಾಜಶೇಖರ ಏನೆಲ್ಲಾ ಪಿತೂರಿ ಮಾಡಿದರು ಎಂಬುದು ಗೊತ್ತಿದೆ. ಬೇರೆ ಯಾರೇ ಸ್ಫರ್ಧಿಸಿದ್ದರೂ ಸೋಲುತ್ತಿದ್ದರು’ ಎಂದರು. ‘ಸಿ.ಟಿ.ರವಿ ಅವರನ್ನು ಸೋಲಿಸಲು ಕಾರಣರಾದ ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ಮನೆಗೆ ಹೋಗಿದ್ದಾರೆ ಎಂದರೆ ನಾಚಿಕೆ ಆಗಬೇಕು ಅವರಿಗೆ’ ಎಂದು ಹರಿಹಾಯ್ದರು. ‘ಅವಿಶ್ವಾಸ ಮಂಡನೆಗೆ ಅವಕಾಶ ಕೋರಿದ್ದಾರೆ. ದಿನಾಂಕ ನಿಗದಿಯಾಗಲಿ ಏನಾಗಲಿದೆ ನೋಡೊಣ. ನಾನು ಎಂದಿಗೂ ಬಿಜೆಪಿಯೇ ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT