ಗುರುವಾರ , ಅಕ್ಟೋಬರ್ 1, 2020
26 °C

ವಿದ್ಯಾಗಮ ಯೋಜನೆ ಅವೈಜ್ಞಾನಿಕ: ಎಸ್.ಎಲ್.ಭೋಜೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ವಿದ್ಯಾಗಮ ಯೋಜನೆ ಅವೈಜ್ಞಾನಿಕವಾಗಿದೆ. ಈ ಯೋಜನೆಯಿಂದ ವಿಧ್ಯಾರ್ಥಿಗಳಿಗೆ ಅನುಕೂಲ ಇಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಇಲ್ಲಿ ಗುರುವಾರ ದೂಷಿಸಿದರು.

‘ಇಂಟರ್ನೆಟ್ ಸೌಲಭ್ಯ ಇರುವ ಗ್ರಾಮಗಳ ವಿದ್ಯಾರ್ಥಿಗಳಿಗೆ ಮೊಬೈಲ್‌ ಬಳಸಿ ಆನ್‌ಲೈನ್ ಕ್ಲಾಸ್ ಮಾಡಬೇಕು. ಇಂಟರ್‌ನೆಟ್‌ ಸೌಲಭ್ಯವಿಲ್ಲದ ಗ್ರಾಮಗಳ ವಿದ್ಯಾರ್ಥಿಗಳಿಗೆ ಎಸ್‌ಎಂಸ್, ದೂರವಾಣಿಯಲ್ಲಿ ತರಗತಿ ಮಾಡಬೇಕು ಎಂದು ಯೋಜನೆಯಲ್ಲಿದೆ. ಬಡವರು ಅನ್‌ಲೈನ್‌ ತರಗತಿ ನಿಟ್ಟಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಿಸಲು ಸಾಲ ಮಾಡಬೇಕಾದ ಸ್ಥಿತಿ ಇದೆ. ಸರ್ಕಾರಕ್ಕೆ ಅದು ತಿಳಿದಿಲ್ಲವೇ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ನೆಟ್‌ವರ್ಕ್ ಸಮಸ್ಯೆ ಇರುವ ಪ್ರದೇಶಗಳಿಗೆ ಶಿಕ್ಷಕರು ವಾರಕ್ಕೊಮ್ಮೆ ತೆರಳಿ, 25 ವಿದ್ಯಾರ್ಥಿಗಳನ್ನು ದೇಗುಲ, ಸಮುದಾಯಭವನ, ಕಲ್ಯಾಣ ಮಂಟಪಗಳಲ್ಲಿ ಕೂರಿಸಿಕೊಂಡು ಬೋಧನೆ ಮಾಡುವಂತೆ ತಿಳಿಸಲಾಗಿದೆ. ಅದರ ಬದಲು ಶಾಲೆಗಳಲ್ಲಿಯೇ ಅಂತರ ಕಾಯ್ದುಕೊಂಡು ವಾರದಲ್ಲಿ ಮೂರು ದಿನ ತರಗತಿ ನಡೆಸಲಿ’ ಎಂದು ಸಲಹೆ ನೀಡಿದರು.

ಜಿಲ್ಲಾಡಳಿತ ನಿರ್ಲಕ್ಷ್ಯ: ಆರೋಪ
‘ಜಿಲ್ಲಾಡಳಿತವು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಬೇಕಿತ್ತು. ಅದರಿಂದ ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ವಿಪತ್ತು ನಿರ್ವಹಣೆಗೆ ಸಲಹೆ ದೊರೆಯುತ್ತಿತ್ತು. ಹಿಂದಿನ ವರ್ಷದ ತಪ್ಪುಗಳು ಮರಕಳಿಸಿದಂತೆ ಎಚ್ಚರವಹಿಸಲು ಸಾಧ್ಯವಾಗುತ್ತಿತ್ತು. ಆದರೆ ಜಿಲ್ಲಾಡಳಿತ ನಿರ್ಲಕ್ಷ ವಹಿಸಿದೆ’ ಎಂದು ಭೋಜೇಗೌಡ ಆರೋಪಿಸಿದರು.

‘ಜಿಲ್ಲೆಯಲ್ಲಿ ಮಳೆಯಿಂದಾಗಿ ಅಡಿಕೆ, ಕಾಫಿ, ಹಣ್ಣು, ಹೂ, ತರಕಾರಿ ಬೆಳೆನಷ್ಟ ಉಂಟಾಗುತ್ತಿದೆ. ಬೆಳೆ ನಷ್ಟದ ಮೌಲ್ಯದ ಕನಿಷ್ಠ ಶೇ 25 ರಷ್ಟಾದರೂ ಪರಿಹಾರ ನೀಡಬೇಕು. ಗಾಳಿಗೆ ಅಡಿಕೆ ಮರಗಳು ಮುರಿದು ಬೀಳುತ್ತಿವೆ. ಎರಡು ಎಕರೆಗಿಂತ ಕಡಿಮೆ ಅಡಿಕೆ ತೋಟ ಹೊಂದಿರುವ ಬೆಳೆಗಾರರಿಗೆ, ಹಾನಿಯಾಗಿರುವ ಪ್ರತಿ ಅಡಿಕೆ ಮರಕ್ಕೆ ₹ 5 ಸಾವಿರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಕಳೆದ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ, ತೋಟ, ಜಮೀನು ಕಳೆದುಕೊಂಡವರಿಗೆ ಜಿಲ್ಲಾಡಳಿತ ಈವೆರೆಗೆ ಪುನರ್ವಸತಿ ಕಲ್ಪಿಸಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಕಲ್ಲಂಗಡಿ, ಅನಾನಸ್‌ ಸಹಿತ, ತರಕಾರಿ, ಹೂ, ಹಣ್ಣು ಬೆಳೆಗಾರರು ನಷ್ಟ ಅನುಭವಿಸಿದರು. ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿಲ್ಲ. ಹೀಗಾಗಿ, ಬಹುತೇಕ ಬೆಳೆಗಾರರಿಗೆ ಬೆಳೆ ನಷ್ಟದ ಪರಿಹಾರ ದೊರೆತಿಲ್ಲ’ ಎಂದು ದೂಷಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು