ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವಡರ ಸಾಧನೆ ಯುವಪೀಳಿಗೆಗೆ ಮಾದರಿ

ಕಾಳಿಂಗ ನಾವಡ ರಾಷ್ಟ್ರೀಯ ವಿಚಾರಗೋಷ್ಠಿಯ ಸಮಾರೋಪದಲ್ಲಿ ಸಚಿವ ಕೋಟ
Last Updated 11 ಜನವರಿ 2021, 2:54 IST
ಅಕ್ಷರ ಗಾತ್ರ

ಶೃಂಗೇರಿ: ‘ಗಂಡು ಮೆಟ್ಟಿನ ಕಲೆ ಯಕ್ಷಗಾನ. ಈ ಕಲೆ ತನ್ನದೇ ಆದ ರೂಪುರೇಷೆಗಳನ್ನು ಹೊಂದಿದೆ. ಈ ಕಲೆಯ ಆಳ, ಪರಂಪರೆ ಮತ್ತು ವ್ಯಾಪ್ತಿಯನ್ನು ಅಳೆಯಲು ಸಾಧ್ಯವಿಲ್ಲ’ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶೃಂಗೇರಿಯ ಡಾ.ವಿ.ಆರ್ ಗೌರೀಶಂಕರ್ ಸಭಾಂಗಣದಲ್ಲಿ ಭಾರತೀ ತೀರ್ಥ ಸಾಂಸ್ಕೃತಿಕ ಟ್ರಸ್ಟ್, ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಭಾನುವಾರ ಯಕ್ಷಗಾನ ಅಕಾಡೆಮಿ ಆಯೋಜಿಸಿದ ಕಾಳಿಂಗ ನಾವಡ ರಾಷ್ಟ್ರೀಯ ವಿಚಾರಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಕ್ಷಗಾನ ಪ್ರಪಂಚದಲ್ಲಿ ನಿರಂತರವಾಗಿ ಹೆಸರು ಮಾಡಿ ಶಾಶ್ವತವಾಗಿ ಉಳಿದ, ಭಾಗವತಿಕೆಯ ಯುಗ ಪ್ರವರ್ತಕರು ಎಂದು ಕರೆಸಿಕೊಳ್ಳುವ ಗುಂಡ್ಮಿ ಕಾಳಿಂಗ ನಾವಡ ಅವರ ಬದುಕು ಹಾಗೂ ಸಾಧನೆಯ ಕುರಿತು ಸ್ಮರಿಸಬೇಕು. ಅಧುನಿಕ ಯುಗದಲ್ಲಿ ನಶಿಸುತ್ತಿರುವ ಯಕ್ಷಗಾನದ ಮೌಲ್ಯಗಳ ಕುರಿತು ಯುವಪೀಳಿಗೆಯನ್ನು ಕಾಳಿಂಗ ನಾವಡ ತನ್ನತ್ತ ಆಕರ್ಷಿಸುತ್ತಿದ್ದರು. ಅವರು ಬದುಕಿದ್ದರೆ ಯಕ್ಷಗಾನಕ್ಕೆ ಹೊಸ ರೂಪವನ್ನು ಕೊಡುತ್ತಿದ್ದರು ಹಾಗೂ ಕಡಲ ಆಚೆಗೂ ಯಕ್ಷಗಾನದ ಕಂಪನ್ನು ಹರಿಸುತ್ತಿದ್ದರು’ ಎಂದರು.

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ಮಾತನಾಡಿ, ‘ಕಡಿಮೆ ವಯಸ್ಸಿನಲ್ಲಿ ಕುಂಜಾಲು ಶೈಲಿಯ ಪರಂಪರೆಯನ್ನು ಅಳವಡಿಸಿಕೊಂಡು ಸಾಧನೆ ಮಾಡಿ, ಅಮರವಾದ ಕಾಳಿಂಗ ನಾವಡರ ಕೀರ್ತಿ ಯುವ ಪೀಳಿಗೆಗೆ ಮಾದರಿ. ಅಕಾಡೆಮಿಯು ಯಕ್ಷಗಾನ ಪರಂಪರೆಯ ಉಳಿವಿಗಾಗಿ ವಿಚಾರ ಮಂಥನ, ದಾಖಲೀಕರಣ, ಸಮಗ್ರ ದರ್ಶನವನ್ನು ಅನಾವರಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಯಕ್ಷಗಾನ ತರಬೇತಿಯನ್ನು ನೀಡುವುದರ ಜೊತೆಗೆ ಪರಂಪರೆಯ ಮೌಲ್ಯವನ್ನು ವಿಸ್ತರಿಸುವ ಕಾರ್ಯವನ್ನು ಮಾಡುತ್ತಿದೆ. ಸಂರಕ್ಷಣಾ, ಸಂವರ್ಧನಾ ಇತ್ಯಾದಿ ಹೆಸರಿನಲ್ಲಿ ಯಕ್ಷಗಾನದ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯ ಅಕಾಡೆಮಿ ನಿರ್ವಹಿಸುತ್ತಿದೆ’ ಎಂದರು.

ಯಕ್ಷಗಾನ ಕಲಾವಿದ ದಿ.ನಲ್ಲೂರು ಮರಿಯಪ್ಪ ಆಚಾರ್ ಪರಂಪರೆಯ ದಾಖಲೀಕರಣದ ಸಿ.ಡಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾ ರವಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಯಕ್ಷಗಾನ ಅಕಾಡೆಮಿಯ ಸದಸ್ಯ ಎಸ್.ಎಚ್ ಶಿವರುದ್ರಪ್ಪ, ರಮೇಶ್ ಬೇಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT