ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತ್ರಶ್ರೀಗೆ ಮತ್ತೊಮ್ಮೆ ಅವಕಾಶ ಸಾಧ್ಯತೆ: ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್

Last Updated 6 ನವೆಂಬರ್ 2020, 3:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸುಜಾತಾ ಕೃಷ್ಣಪ್ಪ ಅವರಿಂದ ರಾಜೀನಾಮೆ ಪಡೆದು, ಸದಸ್ಯೆ ಚೈತ್ರಶ್ರೀ ಮಾಲತೇಶ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ಇದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ವರಸಿದ್ಧಿ ವೇಣುಗೋಪಾಲ್ ಇಲ್ಲಿ ಗುರುವಾರ ಹೇಳಿದರು.

‘ಅಧ್ಯಕ್ಷೆ ಗಾದಿಯ ಮೊದಲ 20 ಹಾಗೂ ಕೊನೆಯ ಆರು ತಿಂಗಳು ಚೈತ್ರಶ್ರೀ ಅವರಿಗೆ ನೀಡುವುದಾಗಿ ಪಕ್ಷದಲ್ಲಿ ಈ ಹಿಂದೆ ಆಂತರಿಕ ಒಪ್ಪಂದವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕಾಂಗ್ರೆಸ್ ಕೃಪಾ ಪೋಷಿತ ಸಂಘಟನೆಯವರು ಸುಜಾತಾ ಕೃಷ್ಣಪ್ಪ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈಗ ಅವರಿಗೆ ಬೆಂಬಲವಾಗಿ ನಿಂತಿರುವ ಸಮುದಾಯದ ಕೆಲ ಮುಖಂಡರು, ಕೊಪ್ಪ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸುಜಾತಾ ಕೃಷ್ಣಪ್ಪ ಅವರಿಗೆ ಟಿಕೆಟ್‌ ನೀಡದಂತೆ ಈ ಹಿಂದೆ ಪಕ್ಷದ ಮುಖಂಡರಿಗೆ ದುಂಬಾಲು ಬಿದ್ದಿದ್ದರು’ ಎಂದು ಆಪಾದಿಸಿದರು.

ಪಕ್ಷದ ಎಸ್‌ಸಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ‘ಸುಜಾತಾ ಕೃಷ್ಣಪ್ಪ ಅವರನ್ನು ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರಿಸುವಂತೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ ಅವರಿಗೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಪಕ್ಷದ ಕೋರ್‌ ಕಮಿಟಿ ಸಭೆ ನಡೆಸಿ, ನಿರ್ಧರಿಸಲಾಗುವುದು. ಸಭೆಯಲ್ಲಿ ಭಾಗವಹಿಸಲು ಸಚಿವ ಸಿ.ಟಿ.ರವಿ ಅವರ ಸಮಯ ಕೇಳಲಾಗಿದೆ. ಕೋರ್‌ ಕಮಿಟಿಯಲ್ಲಿ ತೀರ್ಮಾನವಾಗುವರೆಗೆ ಸುಜಾತಾ ಕೃಷ್ಣಪ್ಪ ಅವರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಸುವುದು ಬೇಡ ಎಂದು ಅವರು ಹೇಳಿದ್ದರು. ಸುಜಾತಾ ಅವರು ಆತುರದಲ್ಲಿ ಸಾಮಾನ್ಯ ಸಭೆ ನಿಗದಿ ಪಡಿಸಿದರು’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಸಹ ವಕ್ತಾರ ನಯನ ತಳವಾರ್ ಮಾತನಾಡಿ, ‘ಕೊಪ್ಪ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಸುಜಾತಾ ಕೃಷ್ಣಪ್ಪ ಅವರು ಅಧ್ಯಕ್ಷೆಯಾಗಲು ಪಕ್ಷ ಸಹಕಾರ ನೀಡಿದೆ. ಬಿಜೆಪಿ ದಲಿತ ವಿರೋಧಿಯಲ್ಲ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಹೇಳಿಕೆಯಲ್ಲಿ ಹುರುಳಿಲ್ಲ’ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಎಸ್‌ಸಿ ಮೋರ್ಚಾದ ಮುಖಂಡ ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT