ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸಂಸ್ಕಾರದ ನೀರು ಪೂರೈಕೆ!

ಶೃಂಗೇರಿ ತಾಲ್ಲೂಕಿನ ಮೆಣಸೆ,ಮಸಿಗೆ ಗ್ರಾಮಗಳ ಜನರಿಗೆ ತುಂಗಾ ನದಿಯಿಂದ ನೀರು
Last Updated 16 ಮೇ 2016, 5:44 IST
ಅಕ್ಷರ ಗಾತ್ರ

ಶೃಂಗೇರಿ:  ಬೇಸಿಗೆಯಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಬರುತ್ತದೆ.  ಆದರೆ ಮೆಣಸೆ ಗ್ರಾಮ ಪಂಚಾಯಿತಿಯ ಎರಡು ಗ್ರಾಮಸ್ಥರ ಸ್ವಯಂಕೃತ ತಪ್ಪಿನಿಂದ ಅನಿವಾರ್ಯವಾಗಿ ಕಲುಷಿತ ನೀರು ಕುಡಿಯಬೇಕಾದ ಪರಿಸ್ಥಿತಿ ಬಂದಿದೆ.

ಮೆಣಸೆ ಗ್ರಾಮ ಪಂಚಾಯಿತಿಯ ನೂರಾರು ಮನೆಗಳಿಗೆ ತುಂಗಾ ನದಿಯಿಂದ ನೀರು ಪೂರೈಸುತ್ತಿದ್ದು, ಕುಡಿಯುವ ನೀರು ಸರಬರಾಜು ಆಗುವ ಸಮೀಪದಲ್ಲಿ ಶವ ಸಂಸ್ಕಾರ ನಡೆಸುತ್ತಿರುವುದು ಮಾರಕವಾಗಿ, ನೀರು ಕಲುಷಿತವಾಗುತ್ತಿದೆ. ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಮೆಣಸೆ ಸಮೀಪವಿರುವ ಟ್ಯಾಂಕ್‌ನಲ್ಲಿ ಸಂಗ್ರಹವಾಗುವ ಈ ನೀರನ್ನು ನಂತರ ಕುಡಿಯಲು ಬಳಸಲಾಗುತ್ತಿದೆ.

ನದಿ ಪಕ್ಕದಲ್ಲಿ ಶವ ಸಂಸ್ಕಾರ ಮಾಡುವ ಪದ್ದತಿ ಇಲ್ಲಿ ರೂಢಿಯಾಗಿದ್ದು,  ತುಂಗಾ ನದಿ ಪಕ್ಕದಲ್ಲಿ ಇಲ್ಲಿನ ಸುತ್ತ ಮುತ್ತಲಿನ ಜನರು ಶವ ಸಂಸ್ಕಾರ ಮಾಡುತ್ತಾರೆ, ಕೆವಿಆರ್ ರಸ್ತೆಯಲ್ಲಿ ಈಗಾಗಲೇ ಒಂದು ರುದ್ರಭೂಮಿ ಮತ್ತು ಆನೆಗುಂದದಲ್ಲಿ ಮತ್ತೊಂದು ವ್ಯವಸ್ಥಿತ ರುದ್ರಭೂಮಿ ಇದ್ದರೂ, ನಾನಾ ಕಾರಣಗಳಿಂದ ನದಿ ದಂಡೆಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ನದಿಯ ನೀರು ಕಡಿಮೆ ಹರಿಯುವುದರಿಂದ ಶವ ಸಂಸ್ಕಾರದ ನಂತರ  ಬೂದಿ, ಮೂಳೆಗಳನ್ನು ಸಂಸ್ಕಾರ ನಡೆಸಿದ ಮೂರು ದಿನಗಳ ನಂತರ ನದಿಯಲ್ಲಿ ಬಿಡಲಾಗುತ್ತದೆ. 

ಶವ ಸಂಸ್ಕಾರದ ಸ್ಥಳದಿಂದ 50 ಮೀಟರ್ ಅಂತರದಲ್ಲಿ ಕುಡಿಯುವ ನೀರಿನ ಬಾವಿಗೆ ಪೈಪುಗಳನ್ನು ಅಳವಡಿಸಿದ್ದು, ಬೇಸಿಗೆಯಲ್ಲಿ ನೀರು ಪೂರೈಕೆ ಕಡಿಮೆಯಾಗುವುದರಿಂದ ತಾತ್ಕಾಲಿಕ ಕಟ್ಟು ನಿರ್ಮಿಸಿ ಪೂರ್ಣ ಪ್ರಮಾಣದ ನೀರು ಒಳ ಹರಿವು ಮಾಡಲಾಗುತ್ತದೆ. ಶವ ಸಂಸ್ಕಾರ ಮಾಡಿದ ನಂತರ ಬೂದಿಯನ್ನು ತೊಳೆದು ಬಿಡುತ್ತಿದ್ದು, ಅದು ನೇರವಾಗಿ ಬಾವಿಗೆ ಹೋಗುತ್ತಿರುವುದರಿಂದ ನೀರು ಕಲುಷಿತವಾಗುತ್ತಿದೆ.

ಈ ವರ್ಷ ಹಾಲಿ ಇರುವ ನೀರಿನ ಬಾವಿಯಿಂದ ಮೆಣಸೆಗೆ ಪೂರೈಕೆಯಾಗುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ  ತುಂಗಾ ನದಿಯ ಸೇತುವೆ ಬಳಿ ನೀರಿನ ಹರಿವು ಸಾಕಷ್ಟು ಇರುವಲ್ಲಿ ಬಾವಿಯೊಂದನ್ನು ₹4.40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಬಾವಿ ನಿರ್ಮಾಣವಾದ ನಂತರ ಇದರಿಂದ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು. ಇದರ ಮೇಲ್ಬಾಗಕ್ಕೆ ತೆರಳುವುದೇ ಕಷ್ಟವಾಗಿರುವುದರಿಂದ ಶವ ಸಂಸ್ಕಾರ ಮಾಡುವುದಕ್ಕೆ ಸಾಧ್ಯವಿಲ್ಲ.

ಕುಡಿಯುವ ನೀರು ಪೂರೈಕೆಯಾಗುವ ಸ್ಥಳದಿಂದ ಕೆಳ ಭಾಗದಲ್ಲಿ ನದಿಯ ದಂಡೆಯಲ್ಲಿ ರುದ್ರಭೂಮಿಗೆ  ಜಾಗವನ್ನು ಮೀಸಲು ಇಡಲಾಗಿದ್ದು, ಕಳೆದ ವರ್ಷ ಈ ಸ್ಥಳವನ್ನು ಸಮತಟ್ಟು ಮಾಡಲಾಗಿದೆ. ಇಲ್ಲಿಗೆ ತೆರಳಲು ಅಗತ್ಯ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅನುದಾನದ ಕೊರತೆಯಿಂದ ರುದ್ರಭೂಮಿ ನಿರ್ಮಾಣ ನನೆಗುದಿಗೆ ಬಿದ್ದಿದೆ.

‘ಜನರಿಗೆ  ಇರದ ಅರಿವಿದ್ದರೂ, ಶವ ಸಂಸ್ಕಾರ ಮಾಡುವುದರಿಂದ ನೀರು ಕಲುಷಿತವಾಗುತ್ತಿದೆ. ಪಂಚಾಯಿತಿ ಇಲ್ಲಿ ಶವ ಸಂಸ್ಕಾರ ಮಾಡಲು ಅವಕಾಶವನ್ನು ನೀಡಬಾರದು.

ಬೇಸಿಗೆಯಲ್ಲಿ ಕಡಿಮೆ ನೀರು ಹರಿಯುವುದರಿಂದ ಶವ ಸಂಸ್ಕಾರದ ನಂತರ ಕ್ರಿಯೆಗಳಲ್ಲಿ ಬೂದಿಯನ್ನು ನದಿಯ ನೀರಿಗೆ ಹಾಕುವುದರಿಂದ ಅದು ನೇರವಾಗಿ ಕುಡಿಯುವ ನೀರಿನ ಬಾವಿಗೆ ಬಂದು ಅದೇ ನೀರು ಕುಡಿಯುವ ನೀರಿಗೆ ಸರಬರಾಜು ಆಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಭಾರತೀನಗರದ ಜಮಾಲ್‌ ಸಾಬ್ ಹಾಗೂ  ಕೃಷ್ಣಮೂರ್ತಿ ಹೇಳುತ್ತಾರೆ.

ಕುಡಿಯುವ ನೀರು ಕಲುಷಿತವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿರುವುದರಿಂದ ಬದಲಿ ವ್ಯವಸ್ಥೆಯಾಗಿ  ಬಾವಿ ನಿರ್ಮಿಸಲಾಗುತ್ತಿದೆ. ರುದ್ರಭೂಮಿಗೆ ಈಗಾಗಲೇ ಸ್ಥಳ ನಿಗದಿ ಪಡಿಸಿ ಜಾಗವನ್ನು ಸಮತಟ್ಟು ಮಾಡಲಾಗಿದೆ. ಕುಡಿಯುವ ನೀರು ಪೂರೈಕೆಯಾಗುವ ಸ್ಥಳಕ್ಕೆ ಸಾರ್ವಜನಿಕರು ತೆರಳದಂತೆ ಬೇಲಿ ನಿರ್ಮಿಸಿ, ಶವ ಸಂಸ್ಕಾರ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿಸದಸ್ಯ ಎಂ.ಎಲ್.ಶಿವಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT