ಸೋಮವಾರ, ಜನವರಿ 24, 2022
21 °C

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ 6 ಜನರನ್ನು ರಕ್ಷಿಸಿದ 112 Help Line

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಕೌಟುಂಬಿಕ ಕಲಹದಿಂದ ಬೇಸತ್ತು ಕುಟುಂಬವೊಂದರ ಆರು ಜನರು ಸೋಮವಾರ ಸಂಜೆ ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದು, ಸಕಾಲಕ್ಕೆ ಘಟನಾ ಸ್ಥಳಕ್ಕೆ ಹೋಗಿ 112 ತುರ್ತು ಸ್ಪಂದನಾದ ಸಿಬ್ಬಂದಿ ರಕ್ಷಿಸಿದ್ದಾರೆ.

ತಾಲ್ಲೂಕಿನ ರಂಗೇನಹಳ್ಳಿಯ ಸಕ್ರಪ್ಪ ಎಂಬುವವರ ಪತ್ನಿ ರತ್ನಮ್ಮ ಕೌಟುಂಬಿಕ ಕಲಹದಿಂದ ಬೇಸತ್ತು ಗಂಡನಿಂದ ಬೇರೆಯಾಗಿ ಹಿರಿಯೂರಿನ ಸಕ್ಕರೆ ಕಾರ್ಖಾನೆ ವಸತಿ ಗೃಹದಲ್ಲಿ ಎರಡು ತಿಂಗಳಿಂದ ತಾಯಿ ಮತ್ತು ಮೂವರು ಮಕ್ಕಳ ಜೊತೆ ನೆಲೆಸಿದ್ದರು. ಹೆಂಡತಿಯಿಂದ ದೂರವಿದ್ದ ಸಕ್ರಪ್ಪ ಸೋಮವಾರ ತನ್ನ ಪತ್ನಿ ವಾಸವಾಗಿದ್ದ ಮನೆಯ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಗಂಡನ ಗಲಾಟೆಯಿಂದ ಬೇಸತ್ತ ರತ್ನಮ್ಮ, ‘ಇದೇ ರೀತಿ ತೊಂದರೆ ಕೊಟ್ಟರೆ ಮಾರಿಕಣಿವೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೆದರಿಸಿದ್ದಾರೆ. ತಾನೂ ಜೊತೆಗೆ ಬಂದು ಸಾಯುತ್ತೇನೆ ಎಂದು ಸಕ್ರಪ್ಪ ಅವರ ಜೊತೆ ಹೋಗಿದ್ದರು. ‘ಎಲ್ಲಿ ತನ್ನ ಮಕ್ಕಳನ್ನು ಸಿಟ್ಟಿನ ಭರದಲ್ಲಿ ನೀರಿಗೆ ಎಸೆದು ಬಿಡುತ್ತಾನೋ’ ಎಂಬ ಭಯದಲ್ಲಿ ರತ್ನಮ್ಮ 112 ಕ್ಕೆ ಕರೆ ಮಾಡಿದ್ದಾರೆ.

ತಕ್ಷಣವೇ ಇಆರ್‌ಎಸ್ಎಸ್ ಕೇಂದ್ರದ ಸಿಬ್ಬಂದಿ ರಮಾಕಾಂತ್ ಅವರು ಹೊಯ್ಸಳ–7 ವಾಹನಕ್ಕೆ ವಿಷಯ ಮುಟ್ಟಿಸಿದರು. ವಾಹನದ ಅಧಿಕಾರಿ ಗಂಗಾಧರ್ ಮತ್ತು ಚಾಲಕ ರವಿ ತಕ್ಷಣ ಕಾರ್ಯಪ್ರವೃತ್ತರಾಗಿ, ಘಟನಾ ಸ್ಥಳಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದವರ ಮನ ಒಲಿಸಿ, ಹಿರಿಯೂರಿನ ಗ್ರಾಮಾಂತರ ಠಾಣೆಗೆ ಕರೆ ತಂದಿದ್ದಾರೆ. ಠಾಣೆಯಲ್ಲಿ ಪತಿ–ಪತ್ನಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ. ಸಕ್ರಪ್ಪ ತನ್ನ ಅಕ್ಕನ ಮಗಳು ರತ್ನಮ್ಮಳನ್ನು ಮದುವೆಯಾಗಿದ್ದು, ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಆರ್‌ಎಸ್ಎಸ್ ಕೇಂದ್ರದ ಸಿಬ್ಬಂದಿ, ಹೊಯ್ಸಳ–7 ವಾಹನದ ಅಧಿಕಾರಿ ಮತ್ತು ಚಾಲಕರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ರಾಧಿಕಾ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು