ಸೋಮವಾರ, ಸೆಪ್ಟೆಂಬರ್ 20, 2021
20 °C
ಜಿಲ್ಲೆಯಲ್ಲಿ ಲಭ್ಯ ಇದ್ದವು 317 ಸೀಟು, ನಾಲ್ಕು ತಾಲ್ಲೂಕಿನಲ್ಲಿ ಶೂನ್ಯ ಪ್ರವೇಶಾತಿ

ಚಿತ್ರದುರ್ಗ: ಆರ್‌ಟಿಇ ಪ್ರವೇಶ ಪಡೆದವರು 16 ಮಕ್ಕಳು!

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಕೋಟಾದಡಿ ಉಚಿತ ಶಿಕ್ಷಣ ಪಡೆಯಲು ಅನುದಾನಿತ ಶಾಲೆ ಪ್ರವೇಶಕ್ಕೆ ಪೋಷಕರು ನಿರಾಸಕ್ತಿ ತೋರುತ್ತಿರುವಂತೆ ಕಾಣುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿ ಲಭ್ಯವಿದ್ದ 317 ಸೀಟುಗಳಲ್ಲಿ 16 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದಾರೆ.

ಜಿಲ್ಲೆಯ 58 ಅನುದಾನಿತ ಶಾಲೆಗಳು ಆರ್‌ಟಿಇ ವ್ಯಾಪ್ತಿಯಲ್ಲಿವೆ. ಒಂದೂವರೆ ವರ್ಷದ ಹಿಂದೆ ನಡೆದ ಪರಿಷ್ಕೃತ ಮ್ಯಾಪಿಂಗ್‌ ವೇಳೆ ಖಾಸಗಿ ಶಾಲೆಗಳು ಆರ್‌ಟಿಇ ವ್ಯಾಪ್ತಿಯಿಂದ ಹೊರಗಿವೆ. ಪ್ರತಿಷ್ಠಿತ ಶಾಲೆಗಳು ಆರ್‌ಟಿಇ ವ್ಯಾಪ್ತಿಯಲ್ಲಿ ಇಲ್ಲದಿರುವುದು ಈ ನಿರಾಸಕ್ತಿಗೆ ಕಾರಣ ಎಂಬುದು ಶಿಕ್ಷಣ ಇಲಾಖೆಯ ವಿಶ್ಲೇಷಣೆ.

ಪ್ರಸಕ್ತ ವರ್ಷದ ಎಲ್‌ಕೆಜಿ ಹಾಗೂ ಒಂದನೇ ತರಗತಿಯ ಪ್ರವೇಶಕ್ಕೆ ಆರ್‌ಟಿಇ ಕೋಟಾದ ಸೀಟಿಗೆ 116 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ ಪ್ರವೇಶಾತಿಗೆ ಆಸಕ್ತಿ ತೋರಿದ್ದು ಬೆರಳೆಣಿಕೆ ಪೋಷಕರು ಮಾತ್ರ. ಮೊದಲ ಸುತ್ತಿನಲ್ಲಿ 11 ಹಾಗೂ ಎರಡನೇ ಸುತ್ತಿನಲ್ಲಿ 5 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದಾರೆ.

ಆರ್‌ಟಿಇ ಕೋಟಾದಡಿ ಪ್ರವೇಶಾತಿ ಪಡೆದವರಲ್ಲಿ ಚಿತ್ರದುರ್ಗದ್ದೇ ಸಿಂಹಪಾಲು. ಆನ್‌ಲೈನ್‌ ಮೂಲಕ ಸಲ್ಲಿಕೆಯಾಗಿದ್ದ ಚಿತ್ರದುರ್ಗ ತಾಲ್ಲೂಕಿನ 92 ಅರ್ಜಿಗಳಲ್ಲಿ 15 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಒಂದು ಮಗು ಮಾತ್ರ ಸೌಲಭ್ಯ ಪಡೆದಿದೆ. ಹೊಸದುರ್ಗ, ಹಿರಿಯೂರು, ಮೊಳಕಾಲ್ಮುರು ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಆರ್‌ಟಿಇ ಕೋಟಾದಡಿ ಒಬ್ಬ ವಿದ್ಯಾರ್ಥಿಯೂ ಪ್ರವೇಶಾತಿ ಪಡೆದಿಲ್ಲ.

ಆರ್‌ಟಿಇ ಸೌಲಭ್ಯ ಕಲ್ಪಿಸಿದ ಆರಂಭದ ಕೆಲ ವರ್ಷ ಈ ಕೋಟಾದ ಸೀಟುಗಳಿಗೆ ಭಾರಿ ಬೇಡಿಕೆ ಇತ್ತು. ಪ್ರತಿಷ್ಠಿತ ಶಾಲೆಯ ಪ್ರವೇಶಾವಕಾಶಕ್ಕೆ ಪೋಷಕರು ಪೈಪೋಟಿ ನಡೆಸುತ್ತಿದ್ದರು. ಎರಡು ವರ್ಷಗಳ ಹಿಂದೆ ಆರ್‌ಟಿಇ ಶಾಲೆಗಳ ಪಟ್ಟಿಯನ್ನು ಮರು ವಿನ್ಯಾಸಗೊಳಿಸಲಾಯಿತು. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇಲ್ಲದಿದ್ದರೆ ಮಾತ್ರ ಅನುದಾನ ರಹಿತ ಶಾಲೆಯನ್ನು ಆರ್‌ಟಿಇ ವ್ಯಾಪ್ತಿಗೆ ಒಳಪಡಿಸಬಹುದು ಎಂಬ ಷರತ್ತು ವಿಧಿಸಿತು. ಹೀಗಾಗಿ, ಜಿಲ್ಲೆಯ ಬಹುತೇಕ ಎಲ್ಲ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಆರ್‌ಟಿಇ ವ್ಯಾಪ್ತಿಯಿಂದ ಹೊರಗೆ ಉಳಿದವು.

‘ಕೆಲ ಪ್ರತಿಷ್ಠಿತ ಶಾಲೆಗಳ ಸೀಟಿಗೆ ಆರಂಭದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ನಿಯಮ ಬದಲಾದ ಬಳಿಕ ಪ್ರತಿಷ್ಠಿತ ಶಾಲೆಗೂ ಆರ್‌ಟಿಇ ವ್ಯಾಪ್ತಿಯಿಂದ ಹೊರಗೆ ಉಳಿದವು. ಈ ಮಾಹಿತಿ ಅರಿತ ಪೋಷಕರು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಮಾಹಿತಿ ಕೊರತೆಯಿಂದ ಅರ್ಜಿ ಸಲ್ಲಿಸಿದ ಕೆಲ ಪೋಷಕರಿಗೆ ವಾಸ್ತವದ ಅರಿವಾದ ನಂತರ ಪ್ರವೇಶಾತಿ ಪಡೆಯಲು ಮುಂದೆ ಬರುವುದಿಲ್ಲ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

2019–20ನೇ ಶೈಕ್ಷಣಿಕ ವರ್ಷದಲ್ಲಿಯೂ ಜಿಲ್ಲೆಯಲ್ಲಿ ಆರ್‌ಟಿಇ ಕಳೆಗುಂದಿತ್ತು. ಲಭ್ಯವಿದ್ದ 286 ಸೀಟುಗಳಿಗೆ 161 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದವು. ಈ ಪೈಕಿ 29 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದರು. ಕನ್ನಡ ಮಾಧ್ಯಮ ಶಾಲೆ ಸೇರಲು ಹಿಂದೇಟು ಹಾಕುತ್ತಿದ್ದಾರೆ.

***

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಅರ್ಹ ಸಿಬ್ಬಂದಿ, ಸೌಲಭ್ಯ ಪೋಷಕರ ಗಮನ ಸೆಳೆದಿದೆ. ಖಾಸಗಿ ಶಾಲೆ ವ್ಯಾಮೋಹ ತೊರೆದು ಸರ್ಕಾರಿ ಶಾಲೆಯತ್ತ ಬರಬೇಕು.

ಕೆ.ರವಿಶಂಕರ್‌ ರೆಡ್ಡಿ, ಡಿಡಿಪಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು