ಗುರುವಾರ , ಮಾರ್ಚ್ 23, 2023
30 °C
ವಸತಿ ಖಾತೆ ಮೂಲಕ ನಿರಾಶ್ರಿತರಿಗೆ, ತುಳಿತಕ್ಕೆ ಒಳಗಾದವರಿಗೆ ಸೂರು ಒದಗಿಸುವ ಅವಕಾಶ: ಸಚಿವ ಸೋಮಣ್ಣ

ಅಲೆಮಾರಿಗಳಿಗೆ 4,500 ಮನೆಗಳ ಕಾರ್ಯಾದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಸುವರ್ಣಾವಕಾಶ ಬಂದಿರಲಿಲ್ಲ. ಯಡಿಯೂರಪ್ಪನವರು ನನಗೆ ವಸತಿ ಖಾತೆ ಕೊಟ್ಟಾಗ ಕೊಂಚ ಅಸಮಾಧಾನ ಆಗಿದ್ದು ನಿಜ. ನಂತರ ನಿರಾಶ್ರಿತರಿಗೆ, ತುಳಿತಕ್ಕೆ ಒಳಗಾದ ಸಮಾಜದವರಿಗೆ ಸೂರು ಕಲ್ಪಿಸುವ ಅವಕಾಶ ಇಲ್ಲಿದೆ ಎಂಬ ಸತ್ಯ ಅರಿವಾದಾಗ ಮುಖ್ಯಮಂತ್ರಿ ಬಗೆಗಿನ ಗೌರವ ಹೆಚ್ಚಿತು’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ 4,500 ಮನೆಗಳ ಕಾರ್ಯಾದೇಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರಗಳು ವಸತಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಇನ್ನಾದರೂ ವಿರೋಧ ಪಕ್ಷಗಳು ರಾಜಕೀಯ ಬದಿಗಿಟ್ಟು ಶಾಸಕರು, ಸಂಸದರು ಬಡವರಿಗೆ ಮನೆ ಕೊಡಿಸುವಲ್ಲಿ ನಡೆಸಿರುವ ಯತ್ನವನ್ನು ಶ್ಲಾಘಿಸುವಂತಾಗಲಿ. ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಡಿ.ಟಿ. ಶ್ರೀನಿವಾಸ್ ಅಲೆಮಾರಿಗಳಿಗೆ ಸೂರು ಕೊಡಿಸಲು ಮುಂದಾಗಿರುವುದು ಹೃದಯ ಶ್ರೀಮಂತಿಕೆಗೆ ನಿದರ್ಶನ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲ ಜಾತಿಯ ಬಡ ಸೂರುರಹಿತರಿಗೂ 65 ಸಾವಿರ ಮನೆ ಕೊಡುವ ಆಲೋಚನೆ ಇದೆ’ ಎಂದು ಸಚಿವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ‘ಯಾದವರು, ಹೆಳವರು, ದೊಂಬಿದಾಸರು, ದಾಸರು ಅಲೆಮಾರಿ ಜನಾಂಗಕ್ಕೆ ಸೇರಿದ್ದು, ಸೋಮಣ್ಣನವರ ಆಸಕ್ತಿಯಿಂದ ತಾಲ್ಲೂಕಿಗೆ 4,448 ಮನೆಗಳು ಮಂಜೂರಾಗಿವೆ. ಯಾದವ ಸಮುದಾಯದವರು ದೇವಸ್ಥಾನ, ಜಾತ್ರೆ, ಧಾರ್ಮಿಕ ಕಾರ್ಯಗಳಿಗೆ ಕೊಟ್ಟ ಮಹತ್ವವನ್ನು ಮನೆಗಳ ನಿರ್ಮಾಣಕ್ಕೆ ಕೊಟ್ಟಿಲ್ಲ. ಸರ್ಕಾರ ಮಂಜೂರು ಮಾಡುವ ₹ 1.20 ಲಕ್ಷ ಅನುದಾನದ ಜೊತೆ ಮತ್ತೊಂದಿಷ್ಟು ಹಣ ಸೇರಿಸಿ ಉತ್ತಮ ಮನೆ ನಿರ್ಮಿಸಿಕೊಳ್ಳಿ. ಆರ್ಥಿಕವಾಗಿ ಹಿಂದುಳಿದಿರುವ ಇತರ ಸಮುದಾಯದವರಿಗೂ ಮನೆ ಕೊಡುವ ಭರವಸೆಯನ್ನು ಸಚಿವರು ಈಗಾಗಲೇ ನೀಡಿದ್ದಾರೆ’ ಎಂದು
ಹೇಳಿದರು.

ಸಂಸದ ನಾರಾಯಣಸ್ವಾಮಿ ಮಾತನಾಡಿ, ‘ವಸತಿ ಇಲಾಖೆಗೆ ಹೊಸ ಚೈತನ್ಯ ತುಂಬಿದವರು ಸೋಮಣ್ಣ. ನಮ್ಮ ಜಿಲ್ಲೆಗೆ 20 ಸಾವಿರ ಮನೆ ನಿರ್ಮಾಣಕ್ಕೆ ₹ 330 ಕೋಟಿ ಹಣ ಮಂಜೂರು ಮಾಡಿದ್ದಾರೆ. ರಾಜ್ಯದಲ್ಲಿ ಕೇಂದ್ರದ ಸಹಯೋಗದಲ್ಲಿ 5 ಲಕ್ಷ ಮನೆ ನಿರ್ಮಿಸಲಾಗುತ್ತದೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ’ ಎಂದರು.

ಶ್ರೀಕೃಷ್ಣಯಾದವಾನಂದ ಸ್ವಾಮೀಜಿ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿಗೆ ಪೂರ್ಣಿಮಾ ಅವರಿಗೆ ಪತಿ ಡಿ.ಟಿ. ಶ್ರೀನಿವಾಸ್ ಬೆನ್ನೆಲುಬಾಗಿ ನಿಂತಿದ್ದಾರೆ. ಶಾಸಕರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆಂಬ ಅಪಪ್ರಚಾರ ಸಲ್ಲ. ಅಭಿವೃದ್ಧಿಗೆ ಪತಿ–ಪತ್ನಿ ಇಬ್ಬರೂ ಬದ್ಧರಾಗಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಡಿ.ಟಿ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ನಂದಿನಿದೇವಿ, ತಾಲ್ಲೂಕು ಪಂಚಾಯಿತಿ ಇಒ ಈಶ್ವರಪ್ರಸಾದ್, ತಹಶೀಲ್ದಾರ್ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಡಿವೈಎಸ್‌ಪಿ ರೋಷನ್ ಜಮೀರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಮುಖಂಡರಾದ ದ್ಯಾಮೇಗೌಡ, ಆರ್.ರಂಗಸ್ವಾಮಿ, ಕರಿಯಪ್ಪ, ಗುರುಮೂರ್ತಿ, ಸಿ.ಶಿವಾನಂದ್ ಅವರೂ ಇದ್ದರು.

ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು. ಬಯಲಿನಲ್ಲಿ ಕುಳಿತಿದ್ದ ಸಾವಿರಾರು ಮಹಿಳೆಯರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸೀರೆಯ ಸೆರಗು ಹೊದ್ದುಕೊಂಡರೆ, ಪುರುಷರು ಟವೆಲ್ ಮೊರೆ ಹೋಗಿದ್ದರು.

ಡಿಕೆಶಿಗೆ ತಿರುಗೇಟು

‘ಬಿಜೆಪಿ ಅತೃಪ್ತ ಶಾಸಕರಲ್ಲಿ ಕೆಲವರು ನನ್ನ ಸಂಪರ್ಕದಲ್ಲಿದ್ದಾರೆಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತಿಗೆ ಉತ್ತರಿಸುವ ಅಗತ್ಯವಿಲ್ಲ. ಎರಡು ವರ್ಷ ನಮ್ಮ ಸರ್ಕಾರ ಬಂಡೆಯಂತಿರಲಿದೆ. ಬಿಎಸ್‌ವೈ ರಾಜ್ಯದ ಪ್ರಶ್ನಾತೀತ ನಾಯಕರು. ಅವರೇ ಉಳಿದ ಅವಧಿಗೂ ಸಿಎಂ. ಯಾರು ಹೋಗ್ತಾರೆ, ಯಾರು ಬಿಡ್ತಾರೆ ಈಗ ಎಲ್ಲವೂ ಗೌಣ. ಉತ್ತಮ ಕೆಲಸ ಮಾಡುವ ಸರ್ಕಾರದ ಅಸ್ಥಿರತೆಗೆ ಯಾರೂ ಕೈ ಹಾಕಬಾರದು’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಸೋಮಣ್ಣ ಉವಾಚ

* ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಇಲ್ಲಿಗೆ ವಾರಕ್ಕೊಮ್ಮೆ ಭೇಟಿಯಾಗಿ, ತಿಂಗಳಿಗೊಮ್ಮೆ ಪ್ರಗತಿಯ ವರದಿ ನೀಡಬೇಕು. ಪ್ರವಾಸಿ ಮಂದಿರದಲ್ಲಿದ್ದು ಎಣ್ಣೆ ಹೊಡ್ದು ಹೋಗ್ಬಾರ್ದು. ಈ ತಾಲ್ಲೂಕನ್ನು ದತ್ತು ಪಡೆದು ಯೋಜನೆಯನ್ನು ಪೂರ್ಣಗೊಳಿಸಿ.

* ಮನೆ ನಿರ್ಮಿಸಿಕೊಳ್ಳುವಾಗ ರಸ್ತೆ ಸಮಸ್ಯೆ ಬಂದಲ್ಲಿ ಕಂದಾಯ, ಸರ್ವೆ ಇಲಾಖೆ ನೆರವನ್ನು ಪಿಡಿಒಗಳು ಪಡೆಯಬೇಕು. ಅದನ್ನೇ ನೆಪ ಮಾಡಿಕೊಂಡು ಕಾಮಗಾರಿ ಅಪೂರ್ಣವಾಗಲು ಬಿಡಬಾರದು.

* ಕೇವಲ ₹ 1.20 ಲಕ್ಷದಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ ಎಂಬುದು ತಿಳಿದಿದೆ. ಕುಟುಂಬದ ಬೇರೆ ಖರ್ಚುಗಳಿಗೆ ಮಿತಿ ಹಾಕಿಕೊಂಡಲ್ಲಿ ಸೂರು ಸಾಧ್ಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು