ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಈಜಿ ವಿದ್ಯುತ್‌ ಪರಿವರ್ತಕ ದುರಸ್ತಿ ಮಾಡಿದ ಲೈನ್‌ಮ್ಯಾನ್‌

ಸುನೀಲ್‌ ಕುಮಾರ್ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
Last Updated 5 ಡಿಸೆಂಬರ್ 2022, 5:09 IST
ಅಕ್ಷರ ಗಾತ್ರ

ಮೊಳಕಾಲ್ಮುರು:ಪ್ರಾಣಾಪಾಯವನ್ನು ಲೆಕ್ಕಿಸದೇ ಕೆರೆ ಮಧ್ಯದಲ್ಲಿದ್ದ ವಿದ್ಯುತ್ ಪರಿವರ್ತಕದ ದುರಸ್ತಿಗೆ ಲೈನ್‌ಮ್ಯಾನ್‌ವೊಬ್ಬರು ಈಜಿಕೊಂಡು ಹೋಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಲೈನ್‌ಮ್ಯಾನ್‌ಸುನೀಲ್‌ ಕುಮಾರ್ ಶನಿವಾರ ಪಟ್ಟಣದಿಂದ 2 ಕಿಮೀ ದೂರದಲ್ಲಿರುವ ಗುಂಡ್ಲೂರು ಕೆರೆಯಲ್ಲಿ ಈಜಿಕೊಂಡು ಅಲ್ಲಿದ್ದ ವಿದ್ಯುತ್‌ ಪರಿವರ್ತಕ ದುರಸ್ತಿ ಮಾಡಿದ್ದಾರೆ. ಈವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗುಂಡ್ಲೂರು ಗ್ರಾಮದಲ್ಲಿ 4 ವರ್ಷಗಳ ಹಿಂದೆ ಕೆರೆ ಪಕ್ಕದಲ್ಲಿ ಕೊಳವೆಬಾವಿ ಕೊರೆಸಲಾಗಿತ್ತು. ಇದಕ್ಕೆ ಕೆರೆ ಮಧ್ಯದಲ್ಲಿ ಕಂಬಗಳನ್ನು ಹಾಕಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಪರಿವರ್ತಕ ಅಳವಡಿಸುವಾಗ ಕೆರೆಯಲ್ಲಿ ನೀರು ಇರಲಿಲ್ಲ. ಈ ವರ್ಷ ಮಳೆಯಿಂದ ಕೆರೆ ತುಂಬಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.

‘ವಿದ್ಯುತ್‌ ಪರಿವರ್ತಕದಲ್ಲಿನ ದೋಷದಿಂದಾಗಿ ವಿದ್ಯುತ್ ಸ್ಥಗಿತವಾಗಿತ್ತು. ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿರುವುದನ್ನು ಕಂಡು ಬೇರೆ ಮಾರ್ಗವಿಲ್ಲದೇ ಈಜಿಕೊಂಡು ಹೋಗಿ ದುರಸ್ತಿ ಮಾಡಿದ್ದೇನೆ. ಈ ವರ್ಷ ಮೂರ್ನಾಲ್ಕು ಬಾರಿ ಇದೇ ರೀತಿ ಈಜಿಕೊಂಡು ಹೋಗಿದ್ದೇನೆ. ಇದು ಅಪಾಯ ಎಂದು ತಿಳಿದಿದೆ. ಆದರೆ ಜನರ ಸಮಸ್ಯೆಗೆ ಸ್ಪಂದಿಸಲು ಈ ರೀತಿ ಮಾಡಿದ್ದೇನೆ’ ಎಂದು ಲೈನ್‌ಮ್ಯಾನ್‌ ಸುನೀಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಂಡ್ಲೂರು ಘಟನೆ ಗಮನಕ್ಕೆ ಬಂದಿದೆ. ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕೊಳವೆಬಾವಿಗೆ ಪರ್ಯಾಯ ಮಾರ್ಗದಿಂದ ವಿದ್ಯುತ್ ಸಂಪರ್ಕ ಕೊಡಿಸಲಾಗುವುದು. ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದರೆ ಈಜಿಕೊಂಡು ಹೋಗಲು ಅವಕಾಶ ನೀಡುತ್ತಿರಲಿಲ್ಲ’ ಎಂದುಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT