ಶನಿವಾರ, ಸೆಪ್ಟೆಂಬರ್ 25, 2021
24 °C
ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಬಾಳೆ ದಿಂಡಿನಲ್ಲಿ ನಿರ್ಮಿಸಿದ ದೋಣಿ

ಸಾವಯವ ಉತ್ಪನ್ನ, ಹೋರಿಗಳೇ ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಐಮಂಗಲ (ಹಿರಿಯೂರು): ಶನಿವಾರ ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ನಡೆದದ್ದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಕನಸಿನ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮ.

ಆದರೆ ಅಲ್ಲಿಗೆ ಬಂದಿದ್ದ ರೈತರ ಗಮನವೆಲ್ಲ ವಸ್ತು ಪ್ರದರ್ಶನದಲ್ಲಿ ಸಾಲಾಗಿ ನಿಲ್ಲಿಸಿದ್ದ ಜೋಡಿ ಹೋರಿಗಳು, ಮುರ್‍ರಾ ತಳಿಯ ಎಮ್ಮೆಗಳು, ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು–ತರಕಾರಿಗಳು, ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರ, ಆಕರ್ಷಕವಾಗಿ ಪ್ಯಾಕಿಂಗ್ ಮಾಡಿದ್ದ ಸಿರಿಧಾನ್ಯಗಳು, ನೆಲ್ಲಿ, ನಿಂಬೆ, ಮಾವಿನಿಂದ ತಯಾರಿಸಿದ ಊಟದ ಜೊತೆ ನಂಚಿಕೊಳ್ಳುವ ಬಗೆಬಗೆಯ ಉಪ್ಪಿನಕಾಯಿ, ಬಾಳೆಯ ದಿಂಡಿನಿಂದ ನಿರ್ಮಿಸಿದ್ದ ದೋಣಿ (ಬಹಳಷ್ಟು ರೈತ ಮಹಿಳೆಯರು ದೋಣಿ ಪ್ರತಿಕೃತಿ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು), ಕೃತಕ ಕಣ ನಿರ್ಮಿಸಿ ಧಾನ್ಯಗಳ ರಾಶಿ ಮಾಡಿದ್ದು, ಕೃಷಿ ಉಪ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳತ್ತ
ನೆಟ್ಟಿತ್ತು.

‘ನಿಗದಿತ ಸಮಯಕ್ಕಿಂತ ಐದಾರು ನಿಮಿಷ ಮುಂಚೆಯೇ ಕಾರ್ಯಕ್ರಮ ಆಯೋಜಿಸಿದ್ದ ಪುಣೆ–ಬೆಂಗಳೂರು ಹೆದ್ದಾರಿ ಪಕ್ಕದ ಡಾ. ಲಕ್ಷ್ಮಣ ರೆಡ್ಡಿ ಅವರ ಜಮೀನಿಗೆ ಬಂದ ಸಚಿವ ಪಾಟೀಲರು, ಜಮೀನಿನಲ್ಲಿ ಅಳವಡಿಸಿದ್ದ ಸಮಗ್ರ ಕೃಷಿ ಪದ್ಧತಿಗಳ ತಾಕು, ಅಜೋಲಾ, ಎರೆಹುಳು ಗೊಬ್ಬರದ ಘಟಕ, ಕುರಿಸಾಕಣೆಯನ್ನು ವೀಕ್ಷಿಸುತ್ತ ಕಾರ್ಯಕ್ರಮವನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರೊಟ್ಟಿಗೆ ಉದ್ಘಾಟಿಸಿದರು. ಕಣದಲ್ಲಿಯ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿದರು. ಶೇಂಗಾ ಬೆಳೆಗೆ ಪೂರ್ಣಿಮಾ ಶ್ರೀನಿವಾಸ್ ಅವರೊಟ್ಟಿಗೆ ಸಾವಯವ ಗೊಬ್ಬರ ಚೆಲ್ಲಿ, ಟ್ರ್ಯಾಕ್ಟರ್ ಚಲಾಯಿಸಿ ಮೆಕ್ಕೆಜೋಳ ರಸಮೇವು ತಯಾರಿಸುವುದನ್ನು ರೈತರಿಗೆ ತೋರಿಸಿದರು.

ಜಾನುವಾರು ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದ ಸಚಿವರು, ‘ಅಮೃತಮಹಲ್, ದೇವಣಿ, ಹಳ್ಳಿಕಾರ್ ತಳಿಯ ಹೋರಿ–ಹಸುಗಳನ್ನು, ಮುರ್‍ರಾ ತಳಿಯ ಎಮ್ಮೆಗಳನ್ನು ಕಂಡು, ಸ್ಥಳೀಯ ತಳಿಯ ರಾಸುಗಳನ್ನು ಹೆಚ್ಹೆಚ್ಚು ಅಭಿವೃದ್ಧಿ ಪಡಿಸುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಬಾಳೆ ದಿಂಡಿನಲ್ಲಿ ನಿರ್ಮಿಸಿದ್ದ ದೋಣಿ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಒನಕೆ ಓಬವ್ವ ಹಾಗೂ ಕರ್ನಾಟಕದ ನಕಾಶೆ ಬಿಡಿಸಿದ್ದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಿತ್ತನೆ ಮಾಡುವ, ಕಳೆ ತೆಗೆಯುವ, ಕೊಯ್ಲು ಮಾಡುವ ಯಂತ್ರಗಳು, ವಿವಿಧ ರೀತಿಯ ಔಷಧ ಸಿಂಪಡಣೆ ಯಂತ್ರಗಳು, ಸೋಲಾರ್ ಸಾಧನಗಳನ್ನು
ವೀಕ್ಷಿಸಿದರು.

ಜೋಡೆತ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಐಮಂಗಲ ಗ್ರಾಮದ ವಿನಯ್, ದ್ವಿತೀಯ ಸ್ಥಾನ ಪಡೆದ ಚಳ್ಳಕೆರೆ ತಾಲ್ಲೂಕು ಓಬೇನಹಳ್ಳಿಯ ನಾಗಣ್ಣ, ಮಾಯಸಂದ್ರ ಗ್ರಾಮದ ಪೂಜಾರಿ ಗುಡ್ಡಪ್ಪ, ಸಾವಯವ ಸಂತೆಯ ಪ್ರತಿನಿಧಿ ಜ್ಞಾನೇಶ್, ಹಣ್ಣಿನಲ್ಲಿ ಚಿತ್ರ ಬಿಡಿಸಿದ್ದ ಶಿವಮೊಗ್ಗದ ಹರೀಶ್, ಇಡೀ ಕಾರ್ಯಕ್ರಮಕ್ಕೆ
ಕಲಾತ್ಮಕ ಸ್ಪರ್ಶ ನೀಡಿದ್ದ ಮಹಂತೇಶ್ ಬಡಿಗೇರ್ ಹಾಗೂ ಜಮೀನಿನ ಮಾಲೀಕರಾದ ಲಕ್ಷ್ಮಣರೆಡ್ಡಿ ದಂಪತಿಯನ್ನು ಸಚಿವರು ಸನ್ಮಾನಿಸಿದರು. ಕೃಷಿ ಮತ್ತು ಪಶುಪಾಲನಾ ಇಲಾಖೆಯವರು ಕಾರ್ಯಕ್ರಮ ಆಯೋಜಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು