ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ: ತರಕಾರಿ ಬೆಳೆದು ಬದುಕು ರೂಪಿಸಿಕೊಂಡ ರೈತ ಮಹಿಳೆ

10 ವರ್ಷಗಳಿಂದ ಯಶಸ್ವಿಯಾಗಿ ಕೃಷಿ ನಿರತ ವಿಜಯಕುಮಾರಿ ಎಂ.ಆರ್.
Last Updated 28 ಡಿಸೆಂಬರ್ 2022, 3:00 IST
ಅಕ್ಷರ ಗಾತ್ರ

ಹೊಸದುರ್ಗ: ಮೂರು ಎಕರೆ ಭೂಮಿಯಲ್ಲಿ ತರಕಾರಿ ಬೆಳೆದು, ಕೂಲಿಕಾರ್ಮಿಕರ ಮೊರೆ ಹೋಗದೇ ಎಲ್ಲ ಕೆಲಸಗಳನ್ನೂ ಸ್ವತಃ ನಿರ್ವಹಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ ತಾಲ್ಲೂಕಿನ ನಾಗರಕಟ್ಟೆ ಗ್ರಾಮದ ರೈತ ಮಹಿಳೆ ವಿಜಯಕುಮಾರಿ ಎಂ.ಆರ್.

ದ್ವೀತಿಯ ಪಿಯುಸಿವರೆಗೆ ಓದಿರುವ ಇವರು, ಬೆಳೆದಿದ್ದು ಭದ್ರಾವತಿಯಲ್ಲಿ. 10 ವರ್ಷಗಳ ಹಿಂದೆ ತರಕಾರಿ ಬೆಳೆಯುವ ಯೋಜನೆ ರೂಪಿಸಿ, ಪತಿಯೊಂದಿಗೆ ಶ್ರಮವಹಿಸಿ ಬೆಳೆಯುವ ಮೂಲಕ ಲಾಭ ಗಳಿಸುತ್ತಿದ್ದಾರೆ.

ಬಳ್ಳಿ ಬೀನ್ಸ್, ಟೊಮೆಟೊ, ಹೀರೇಕಾಯಿ, ಹಾಗಲಕಾಯಿ ಬೆಳೆಯುವುದರ ಜೊತೆಗೆ ಮೆಣಸಿನಕಾಯಿ, ಬದನೆಕಾಯಿಯನ್ನೂ ಬೆಳೆಯುತ್ತಾರೆ. ಎಕರೆಗೆ ವಾರ್ಷಿಕ ₹ 2.5 ಲಕ್ಷ ಆದಾಯ ಗಳಿಸುತ್ತಿದ್ದಾರೆ. ತರಕಾರಿಯಿಂದ ಬಂದ ಆದಾಯದಲ್ಲೇ ಮನೆ ಖರ್ಚು ಹಾಗೂ ಮಗಳ ವೈದ್ಯಕೀಯ ಪದವಿ ವಿದ್ಯಾಭ್ಯಾಸದ ಖರ್ಚನ್ನೂ ನಿಭಾಯಿಸುತ್ತಿದ್ದಾರೆ.

‘ನಮ್ಮ ಒಂದುಎಕರೆ ಜಮೀನಿನ ಜೊತೆಗೆ ಪಕ್ಕದ ಜಮೀನಿನನ್ನು ಕೋರಿಗೆ ಪಡೆದು ಅದರಲ್ಲೂ ತರಕಾರಿ ಬೆಳೆಯುತ್ತಿದ್ದೇವೆ. ಭೂಮಿ ಹದ ಮಾಡಿ, ನೀರು ಹರಿಸಬೇಕು. ತರಕಾರಿ ಬೆಳೆಗೆ ಬೀಜ ಅಥವಾ ಸಸಿ ಹಾಕಿದ ನಂತರ ನೀರು, ಗೊಬ್ಬರ, ಔಷಧವನ್ನು ಸಮಯಕ್ಕೆ ಸರಿಯಾಗಿ ಸಿಂಪಡಿಸಬೇಕು. ತರಕಾರಿಯು ಎರಡೂವರೆಯಿಂದ 3 ತಿಂಗಳ ಬೆಳೆ. ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಮದುವೆ ಮತ್ತು ಶುಭ ಸಮಾರಂಭಗಳಿರುವ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ತರಕಾರಿಯನ್ನು ಹೊಸದುರ್ಗ ಮಾರುಕಟ್ಟೆಗೆ ಕಳಿಸುತ್ತೇವೆ. ಅಗತ್ಯ ಇದ್ದವರು ಮನೆಗೇ ಬಂದು ತರಕಾರಿ ಕೊಳ್ಳುತ್ತಾರೆ. ಬೆಲೆ ಏರುಪೇರಾಗುವುದು ಸಹಜ. ಅಂಥ ಸಂದರ್ಭಗಳಲ್ಲಿ ಕುಗ್ಗದೇ ಕೃಷಿ ಕಾಯಕದಲ್ಲಿ ತೊಡಗಬೇಕು’ ಎನ್ನುತ್ತಾರೆ ವಿಜಯಕುಮಾರಿ.

ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (ಐಐಎಚ್‌ಆರ್) ಹೆಸರಘಟ್ಟ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಕಾರಿ ಬೆಳೆಯುವ ಬಗ್ಗೆ ತರಬೇತಿ ಪಡೆದಿದ್ದಾರೆ. ಶಿವಮೊಗ್ಗ, ಬೆಂಗಳೂರು, ಧಾರವಾಡ ಹಾಗೂ ಬಾಗಲಕೋಟೆಯಲ್ಲಿ ನಡೆಯುವ ಕೃಷಿ ಮೇಳಗಳಿಗೆ ಭೇಟಿ ನೀಡಿ, ಸಲಹೆಗಳನ್ನು ಪಡೆಯುತ್ತಾರೆ. ಇವರ ಇಬ್ಬರ ಮಕ್ಕಳೂ ರಜಾ ಅವಧಿಯಲ್ಲಿ ಕೃಷಿಯಲ್ಲಿ ತೊಡಗಿ, ತಾಯಿಗೆ ಸಹಕರಿಸುತ್ತಾರೆ.

----

ಮಹಿಳೆಯರು ತರಕಾರಿ ಬೆಳೆದು ಉತ್ತಮ ಆದಾಯ ಗಳಿಸಬಹುದು. ಸ್ವಂತ ಜಮೀನು ಇಲ್ಲದವರು ಬೇರೆ ಜಮೀನನ್ನು ಕೋರಿಗೆ (ವರ್ಷಕ್ಕೆ ಇಂತಿಷ್ಟು ಎಂದು ಹಣ ಕೊಡುವುದು) ತೆಗೆದುಕೊಳ್ಳಬಹುದು. ಇದರಿಂದ ಲಾಭವೇ ಹೊರತು ನಷ್ಟವಿಲ್ಲ.

– ವಿಜಯಕುಮಾರಿ ಎಂ.ಆರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT