ಬುಧವಾರ, ಮೇ 25, 2022
29 °C
ಖಾಸಗಿ ಕಂಪನಿಯಿಂದ ಈರುಳ್ಳಿ ಬೀಜ ಖರೀದಿಸಿದ್ದ ಹೋಬಳಿಯ ರೈತರು

ಕಟಾವಿನ ಸಮಯ ಬಂದರೂ ಗೆಡ್ಡೆ ಕಟ್ಟದ ಈರುಳ್ಳಿ

ವಿ. ಧನಂಜಯ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಹಿಂಗಾರು ಹಂಗಾಮಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯ ಕಟಾವಿನ ಅವಧಿ ಸಮೀಪಿಸುತ್ತಿದ್ದರೂ ಗೆಡ್ಡೆಕಟ್ಟದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ನಾಯಕನಹಟ್ಟಿ ಸಮೀಪದ ಕಾವಲು ಬಸವೇಶ್ವರ ನಗರ, ಮಾದಯ್ಯನಹಟ್ಟಿ, ಜಾಗನೂರಹಟ್ಟಿ ವ್ಯಾಪ್ತಿಯಲ್ಲಿರುವ ಈರುಳ್ಳಿ ಬೆಳೆಗಾರರು ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯಲು ನಿರ್ಧರಿಸಿದ್ದರು. ಉತ್ತಮ ಗುಣಮಟ್ಟದ ಮತ್ತು ಅಧಿಕ ಇಳುವರಿ ಕೊಡುವ ಬೀಜವನ್ನು ಬಿತ್ತನೆ ಮಾಡಲು ಖಾಸಗಿ ಕಂಪನಿಯ ಮೊರೆಹೋಗಿದ್ದರು.

1 ಕೆ.ಜಿ. ಈರುಳ್ಳಿ ಬೀಜಕ್ಕೆ ₹ 1,350 ದರ ನೀಡಿ ಈರುಳ್ಳಿ ಬೀಜವನ್ನು ಸೆಪ್ಟೆಂಬರ್ ತಿಂಗಳಲ್ಲಿ ಖರೀದಿಸಿ ಭೂಮಿಯನ್ನು ಹಸನುಗೊಳಿಸಿ ಬಿತ್ತಿದ್ದರು. ಕಾಲಕಾಲಕ್ಕೆ ನೀರು, ಗೊಬ್ಬರ ಔಷಧ ನೀಡಿದ್ದರು. ಈರುಳ್ಳಿ ಪೈರು ಉತ್ತಮವಾಗಿ ಬೆಳೆದಿದೆ. ಆದರೆ, ಕಟಾವಿನ ಸಮಯ ಹತ್ತಿರ ಬರುತ್ತಿದ್ದಂತೆ ಬೆಳೆಯಲ್ಲಿ ಹಲವು ರೋಗಗಳು ಕಾಣಿಸಿಕೊಂಡ ಪರಿಣಾಮ ಈರುಳ್ಳಿ ಗೆಡ್ಡಕಟ್ಟುವ ಬದಲು ದಂಟು ಒಣಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

‘ಚಿತ್ರದುರ್ಗ ಜಿಲ್ಲೆಯಲ್ಲಿ ಗುಣಮಟ್ಟದ ಈರುಳ್ಳಿ ಬೆಳೆ ಬೆಳೆಯಲು ಉತ್ತಮ ಹವಾಗುಣವಿದೆ. ಜತೆಗೆ ಮಾರುಕಟ್ಟೆ ವ್ಯವಸ್ಥೆ ಇದೆ. ವ್ಯಾಪಾರಸ್ಥರೇ ರೈತರ ಜಮೀನುಗಳಿಗೆ ತೆರಳಿ ಈರುಳ್ಳಿ ಕೊಂಡುಕೊಳ್ಳುತ್ತಾರೆ. ಹಾಗಾಗಿ ನೂರಾರು ರೈತರು ಈರುಳ್ಳಿ ಬೆಳೆಯುತ್ತಾರೆ. ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಹೆಚ್ಚು ಸುರಿದ ಪರಿಣಾಮ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು. ಹಾಗಾಗಿ ನಮ್ಮ ಜಿಲ್ಲೆಯ ಈರುಳ್ಳಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂದು ಭಾವಿಸಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಆದರೆ, ಕಳಪೆ ಗುಣಮಟ್ಟದ ಬೀಜದಿಂದಾಗಿ ಈರುಳ್ಳಿ ಗೆಡ್ಡೆಕಟ್ಟದೆ ಬೆಳೆ ನಷ್ಟವಾಗಿದೆ’ ಎಂದು ಬೆಳೆಗಾರ ಬಿ.ಟಿ. ಪ್ರಕಾಶ್ ದೂರಿದ್ದಾರೆ.

‘ನಾಯಕನಹಟ್ಟಿ ಹೋಬಳಿಯು ದಶಕದಿಂದ ಬರಗಾಲದಿಂದ ತತ್ತರಿಸಿದೆ. ಮಳೆಯ ಅಭಾವದಿಂದ ಅಂತರ್ಜಲದ ಮಟ್ಟ ಕುಸಿದಿದೆ. ಆದರೂ ಕೊಳವೆಬಾವಿಗಳಲ್ಲಿ ಸಿಗುವ ಅಲ್ಪಸ್ವಲ್ಪ ನೀರಿನಲ್ಲಿ ಈರುಳ್ಳಿ ಸೇರಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. 12 ಕೆ.ಜಿ. ಬೀಜ ಖರೀದಿಸಿ ಬಿತ್ತನೆ ಮಾಡಿದ್ದೆ. ಕಟಾವಿನ ಅವಧಿ ಇನ್ನು 10 ದಿನಗಳು ಬಾಕಿ ಇದ್ದು, ಈರುಳ್ಳಿ ಬೆಳೆ ಗೆಡ್ಡೆ ಕಟ್ಟಿಲ್ಲ. ಬೆಳೆಯು ಸುಳಿರೋಗಕ್ಕೆ ತುತ್ತಾಗಿದೆ. ಪರಿಣಾಮ ಈರುಳ್ಳಿ ಬೇರಿನ ಬುಡದಲ್ಲಿ ಕೊಳೆಯುತ್ತಿದೆ. ಪ್ರಸ್ತುತ ಈರುಳ್ಳಿ ಬೆಳೆಗೆ ಬೆಲೆ ಉತ್ತಮವಾಗಿದ್ದು, ಎಕರೆಗೆ ₹ 2 ಲಕ್ಷದಿಂದ ₹ 3 ಲಕ್ಷದವರೆಗೂ ಆದಾಯದ ನಿರೀಕ್ಷಿಸಿದ್ದೆವು. ಆದರೀಗ ಬೆಳೆ ವಿಫಲವಾಗಿದ್ದು, ದಾರಿ ಕಾಣದಾಗಿದೆ ಎಂದು ರೈತರಾದ ಉಜ್ಜಿನಪ್ಪ, ಬಡಗಿ ತಿಪ್ಪೇಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

*

ತೋಟಗಾರಿಕೆ ಇಲಾಖೆಯ ವಿಜ್ಞಾನಿಗಳು ರೈತರ ಜಮೀನುಗಳಿಗೆ ಭೇಟಿ ಕೊಟ್ಟು ಮಣ್ಣು, ನೀರಿನ ಪರೀಕ್ಷೆ ಸೇರಿ ಬೀಜ, ಗೊಬ್ಬರ, ಔಷಧೋಪಚಾರದ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.
-ಬಿ.ಟಿ. ಪ್ರಕಾಶ್, ಈರುಳ್ಳಿ ಬೆಳೆಗಾರ

*

ಈರುಳ್ಳಿ ಗೆಡ್ಡೆ ಕಟ್ಟದಿರುವ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಜಮೀನುಗಳಿಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಲಿದೆ.
-ವಿರೂಪಾಕ್ಷಪ್ಪ, ಸಹಾಯಕ‌ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಚಳ್ಳಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು