ಸೋಮವಾರ, ಮಾರ್ಚ್ 27, 2023
31 °C
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಯಶಸ್ಸು ಕಂಡ ಅನ್ನದಾತರು

ಮೊಳಕಾಲ್ಮುರು: ಶೇಂಗಾಕ್ಕೆ ಪರ್ಯಾಯ ತೊಗರಿ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನ ರೈತರು ಶೇಂಗಾಕ್ಕೆ ಪರ್ಯಾಯವಾಗಿ ತೊಗರಿ ಬಿತ್ತನೆ ಮಾಡಿ, ಲಾಭ ಕಂಡುಕೊಳ್ಳುವಲ್ಲಿ ಯಶಸ್ಸು ಪಡೆದಿದ್ದಾರೆ.

ತಾಲ್ಲೂಕು ಮಳೆಯಾಶ್ರಿತ ಶೇಂಗಾಕ್ಕೆ ಹೆಸರುವಾಸಿ. ಹಲವು ದಶಕಗಳಿಂದ ಇಲ್ಲಿನ ಸಾಂಪ್ರದಾಯಿಕ ಬೆಳೆಯಾಗಿ ಶೇಂಗಾ ಹೊರಹೊಮ್ಮಿದೆ. ಶೇ 80ರಷ್ಟು ರೈತರು ಶೇಂಗಾ ಮಾತ್ರ ಬಿತ್ತನೆ ಮಾಡುತ್ತಾರೆ. ಹಲವು ವರ್ಷ ಸತತ ನಷ್ಟವಾಗಿದ್ದರೂ ಶೇಂಗಾವನ್ನು ಬಿತ್ತನೆ ಮಾಡುತ್ತಿದ್ದ ರೈತರಿಗೆ ತೊಗರಿ ಬೆಳೆ ಆಶಾದಾಯಕವಾಗಿ ಕಂಡು ಬಂದಿದೆ. ತಾಲ್ಲೂಕಿನಲ್ಲಿ 950 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ.

ಶೇಂಗಾಕ್ಕೆ ಪರ್ಯಾಯವಾಗಿ ತೊಗರಿ ಬಿತ್ತನೆ ಮಾಡಿ 5 ವರ್ಷಗಳಿಂದ ಲಾಭದಾಯಕ ಕೃಷಿಯನ್ನು ಮಾಡುವ ಮೂಲಕ ತಾಲ್ಲೂಕಿನ ಕೊಮ್ಮನಪಟ್ಟಿಯ ರೈತ ಓಬಣ್ಣ ಮಾದರಿಯಾಗಿ ಹೊರಹೊಮ್ಮಿದ್ದಾರೆ.

‘ಶೇಂಗಾದಿಂದ ಆಗುತ್ತಿದ್ದ ನಷ್ಟಕ್ಕೆ ಬೇಸತ್ತು 5 ವರ್ಷಗಳಿಂದ ನನ್ನ 6 ಎಕರೆ ಜಮೀನಿನಲ್ಲಿ 'ಕಾವೇರಿ ಸಂಪದ' ತಳಿಯ ತೊಗರಿ ಬಿತ್ತನೆ ಮಾಡುತ್ತಿದ್ದೇನೆ. ಇದು ಶೇಂಗಾಕ್ಕೆ ಹೋಲಿಕೆ ಮಾಡಿದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬಹುದು. ಮಳೆ ಕೈಕೊಟ್ಟರೂ ಸುಲಭವಾಗಿ ಒಣಗುವುದಿಲ್ಲ. ಜತೆಗೆ ಕಾರ್ಮಿಕರ ಅವಶ್ಯಕತೆ ಅಷ್ಟಾಗಿ
ಬೇಕಿಲ್ಲದ ಕಾರಣ ಮನೆಯವರೇ ಕೃಷಿ ಮಾಡಬಹುದು’ ಎಂದು ರೈತ ಓಬಣ್ಣ ಹೇಳಿದರು.

‘6 ಎಕರೆಗೆ 22ರಿಂದ 23 ಕೆ.ಜಿ. ಬಿತ್ತನೆ ತೊಗರಿ ಬೇಕಾಗುತ್ತದೆ. ಬಿತ್ತನೆ ಖರ್ಚು, ಎರಡು ಬಾರಿ ಔಷಧ ಸಿಂಪಡಣೆ ಖರ್ಚು, ಯಂತ್ರದಿಂದ ಕಟಾವು ಖರ್ಚು ಸೇರಿ ಸುಮಾರು ₹1 ಲಕ್ಷ ಖರ್ಚು ಬರುತ್ತದೆ. ಈ ವರ್ಷ ಒಟ್ಟು ₹3.20 ಲಕ್ಷ ಆದಾಯ ಬರುವ ಮೂಲಕ ₹2.20 ಲಕ್ಷ ಉಳಿದಿದೆ. 6 ಎಕರೆ ಶೇಂಗಾ ಬಿತ್ತನೆ ಮಾಡಲು ₹1.50 ಲಕ್ಷ ಖರ್ಚು ಬರುತ್ತದೆ, ಮಳೆ ಕೈಕೊಡುವುದು, ಅಕಾಲಿಕ ಮಳೆ, ವಿವಿಧ ರೋಗಗಳ ಬಾಧೆಯಿಂದಾಗಿ ಹಾಕಿದ ಬಂಡವಾಳ ವಾಪಸ್ ಬರುವುದು ಅನುಮಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ರೈತರು ತೊಗರಿ ಬಿತ್ತನೆ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಟಿಎಂವಿ- 2 ತಳಿಯ ಶೇಂಗಾ ಬಿತ್ತನೆ ಮಾಡಲಾಗುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ರೋಗಬಾಧೆ, ಇಳುವರಿ ಕುಂಠಿತದಿಂದ ರೈತರು ನಷ್ಟಕ್ಕೀಡಾಗುತ್ತಿದ್ದಾರೆ. ಪರ್ಯಾಯವಾಗಿ ಕದರಿ ಲೇಪಾಕ್ಷಿ ತಳಿ ಶೇಂಗಾ ಪರಿಚಯ ಮಾಡಿದ್ದರೂ ಮಾರುಕಟ್ಟೆ ಸಮಸ್ಯೆಯಿಂದಾಗಿ ರೈತರು ಬಿತ್ತನೆಗೆ ಮುಂದಾಗುತ್ತಿಲ್ಲ. ಆದ್ದರಿಂದ ತೊಗಿರಿಯನ್ನು ಪರ್ಯಾಯವಾಗಿ ಬಿತ್ತನೆ ಮಾಡಬಹುದು. ಮಾರುಕಟ್ಟೆ ಸಮಸ್ಯೆ, ಮಳೆ ಸಮಸ್ಯೆ ತೊಗರಿಯನ್ನು ಅಷ್ಟಾಗಿ ಬಾಧಿಸುವುದಿಲ್ಲ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು