ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಸೆಸ್‌ ರದ್ದತಿಗೆ ಒತ್ತಾಯ

ಭೀಮಸಮುದ್ರದಲ್ಲಿ ಅಡಿಕೆ ವಹಿವಾಟು ಸ್ಥಗಿತ
Last Updated 14 ಜುಲೈ 2020, 10:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ನಡೆಸುವ ವಹಿವಾಟಿಗೆ ವಿಧಿಸಿದ ಸೆಸ್ ರದ್ದುಪಡಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ಅಡಿಕೆ ವ್ಯಾಪಾರಸ್ಥರು ಭೀಮಸಮುದ್ರದಲ್ಲಿ ಮಂಗಳವಾರದಿಂದ ವಹಿವಾಟು ಸ್ಥಗಿತಗೊಳಿಸಿದ್ದಾರೆ.

‘ಸರ್ಕಾರದ ನೂತನ ತಿದ್ದುಪಡಿಯ ಪ್ರಕಾರ ಎಪಿಎಂಸಿ ಹೊರಗೆ ನಡೆಯುವ ವಹಿವಾಟಿಗೆ ಯಾವುದೇ ಸೆಸ್‌ ಇಲ್ಲ. ಆದರೆ, ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ವ್ಯಾಪಾರಕ್ಕೆ ಮಾತ್ರ ಶೇ 1ರಷ್ಟು ಸೆಸ್‌ ವಿಧಿಸಲಾಗಿದೆ. ಈ ತಾರತಮ್ಯದ ವಿರುದ್ಧ ರಾಜ್ಯದ ಎಲ್ಲೆಡೆ ಹೋರಾಟ ಆರಂಭವಾಗಿದೆ. ಸರ್ಕಾರ ಸೆಸ್‌ ರದ್ದು ಮಾಡುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಭಿಮಸಮುದ್ರ ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ ಪಟೇಲ್‌ ಶಿವಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೃಷಿ ಉತ್ಪನ್ನವನ್ನು ರೈತರು ತಮ್ಮಿಷ್ಟದಂತೆ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುವುದರಿಂದ ಸುಗ್ರೀವಾಜ್ಞೆಯನ್ನು ವರ್ತಕರ ಸಂಘ ಸ್ವಾಗತಿಸುತ್ತದೆ. ಆದರೆ, ಎಪಿಎಂಸಿ ಒಳಗೆ ನಡೆಯುವ ವಹಿವಾಟಿಗೆ ಮಾತ್ರ ಸೆಸ್‌ ವಿಧಿಸುವುದರಿಂದ ತಾರತಮ್ಯ ಉಂಟು ಮಾಡಿದಂತೆ ಆಗುತ್ತದೆ. ಎಪಿಎಂಸಿ ಸೆಸ್‌ ರೈತರಿಗೆ ಹೊರೆಯಾಗಿ ಪರಿಣಮಿಸಲಿದೆ. ಇದರಿಂದ ವಹಿವಾಟು ಕುಸಿತವಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಒಂದು ದೇಶ ಒಂದು ತೆರಿಗೆ ಎಂಬ ನೀತಿಯಿಂದ ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೆ ತಂದಿದೆ. ಅಡಿಕೆಗೆ ಶೇ 5ರಷ್ಟು ಜಿಎಸ್‌ಟಿ ಪಾವತಿಸಲಾಗುತ್ತಿದೆ. ಇದರ ಮೇಲೆ ಶೇ 1ರಷ್ಟು ಸೆಸ್‌ ಪಾವತಿಸುವಂತೆ ಪೀಡಿಸುವುದು ತಪ್ಪಾಗುತ್ತದೆ. ಹರಿಯಾಣ, ಕೇರಳ, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಸೆಸ್‌ ರದ್ದುಪಡಿಸಲಾಗಿದೆ. ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಸೆಸ್‌ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಅಡಿಕೆ ವರ್ತಕರ ಸಂಘದ ನಿರ್ದೇಶಕ ಟಿ.ಜಿ.ನರೇಂದ್ರನಾಥ, ‘ಎಪಿಎಂಸಿ ಪ್ರಾಂಗಣದಲ್ಲಿ ನಡೆಸುವ ವಹಿವಾಟಿಗೆ ಮಾತ್ರ ಸೆಸ್ ವಿಧಿಸುವುದು ತಪ್ಪು. ರೈತರಿಗೆ ಸ್ಪರ್ಧಾತ್ಮಕ ಬೆಲೆ ನೀಡಲು ಸಾಧ್ಯವಾಗುವುದಿಲ್ಲ. ಇದು ಎಪಿಎಂಸಿ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತದೆ. ಹಮಾಲರು ಸೇರಿ ಸಾವಿರಾರು ಕೆಲಸಗಾರರಿಗೆ ಇದರಿಂದ ತೊಂದರೆ ಉಂಟಾಗುತ್ತದೆ’ ಎಂದು ಆತಂಕ ಹೊರಹಾಕಿದರು.

‘ದರ, ತೂಕದಲ್ಲಿ ಪಾರದರ್ಶಕ ವ್ಯವಸ್ಥೆ ಹೊಂದಿರುವ ಎಪಿಎಂಸಿಗೆ ಇದು ಬಲವಾದ ಏಟು ನೀಡಲಿದೆ. ಸರ್ಕಾರದ ಅಂಗಸಂಸ್ಥೆ ಎಪಿಎಂಸಿಯನ್ನು ನಂಬಿಕೊಂಡು ಹಲವು ರೈತರು, ವ್ಯಾಪಾರಸ್ಥರು ಬದುಕು ಕಟ್ಟಿಕೊಂಡಿದ್ದಾರೆ. ಪಾರದರ್ಶಕ ಮಾರುಕಟ್ಟೆಯ ಉಳಿವಿಗಾಗಿ ಸರ್ಕಾರ ಅನುಕೂಲ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT