ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ | ಜಾನುವಾರು ಕಳ್ಳರ ಬಂಧನ

Published 4 ಜುಲೈ 2024, 14:24 IST
Last Updated 4 ಜುಲೈ 2024, 14:24 IST
ಅಕ್ಷರ ಗಾತ್ರ

ಹೊಸದುರ್ಗ: ಅಂತರ ಜಿಲ್ಲಾ ಜಾನುವಾರು ಕಳ್ಳರನ್ನು ಹೊಸದುರ್ಗ ಪೋಲಿಸರು ಬಂಧಿಸಿದ್ದು, ಅವರಿಂದ ₹ 1.55 ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 5 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ತಿಪ್ಪಲಾಪುರ ಗ್ರಾಮದ ತೌಫೀಕ್ (30), ದಾದಾ ಪೀರ್ (30) ಹಾಗೂ ಭದ್ರಾವತಿ ತಾಲ್ಲೂಕಿನ ಅರಲಹಳ್ಳಿಯ ನವಾಜ್ ಪಾಷಾ (26) ಬಂಧಿತರು.

ದಾವಣಗೆರೆಯ ಹದಡಿ ಪೊಲೀಸ್ ಠಾಣೆಯಲ್ಲಿ ತೌಫಿಕ್ ವಿರುದ್ಧ, ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ನವಾಜ್ ಪಾಷಾ ವಿರುದ್ಧ ಹಾಗೂ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾದಾ ಪೀರ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.

‘ಆರೋಪಿಗಳು ಕೆಲ ವರ್ಷಗಳಿಂದ ದನದ ವ್ಯಾಪಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಳ್ಳಿಗಳಲ್ಲಿ ತಿರುಗಾಡಿ, ರಾತ್ರಿ ವೇಳೆ ದನಗಳನ್ನು ಕಳವು ಮಾಡಲು ಸಂಚು ರೂಪಿಸಿದ್ದರು. ಒಂದೇ ವಾಹನದಲ್ಲಿ ಓಡಾಡಿದರೆ ಪೋಲಿಸರಿಗೆ ಅನುಮಾನ ಬರುತ್ತದೆಂದು ಕಳವಿಗೆ ಮಹಿಂದ್ರಾ ಸ್ಕಾರ್ಪಿಯೋ, ಅಶೋಕ ಲೈಲ್ಯಾಂಡ್, ಟಾಟಾ ಅರಿಯಾ ಮತ್ತು ಮಹಿಂದ್ರಾ ಝೈಲೋ ವಾಹನಗಳಲ್ಲಿ ದನಗಳನ್ನು ಕಳವು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಾರದ ಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಮೂವರೂ ಹಂಚಿಕೊಳ್ಳುತ್ತಿದ್ದರು. ಅವರು ಹೊಸದುರ್ಗ, ಶ್ರೀರಾಂಪುರ, ಹಿರಿಯೂರು ಗ್ರಾಮಾಂತರ ಹಾಗೂ ತಳಕು ಠಾಣೆ ಸೇರಿ ಹಲವು ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 13 ಹಸುಗಳನ್ನು ಕಳವು ಮಾಡಿ, ಹೊಳೆಹೊನ್ನೂರು, ಭದ್ರಾವತಿ ಸಂತೆಗಳಲ್ಲಿ ₹ 3.15ಕ್ಕೆ ಮಾರಾಟ ಮಾಡಿದ್ದಾರೆ. ಆರೋಪಿಗಳಿಂದ ₹ 1.55 ಲಕ್ಷದ ಜೊತೆಗೆ ಕೃತ್ಯಕ್ಕೆ ಬಳಸಿದ್ದ 5 ವಾಹನಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ’ ಎಂದು ತಿಳಿಸಿದ್ದಾರೆ.

ಸಿಪಿಐ ತಿಮ್ಮಣ್ಣ, ಪಿಎಸ್ಐಗಳಾದ ಮಹೇಶ್ ಕುಮಾರ್, ಭೀಮನಗೌಡ ಪಾಟೀಲ್, ಸಿಬ್ಬಂದಿ ಜಯರಾಜ, ಕುಮಾರ್, ರಾಜಣ್ಣ, ತಿಪ್ಪೇಸ್ವಾಮಿ ಹಾಗೂ ಗಂಗಾಧರ್ ಅವರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT