ಶನಿವಾರ, ಏಪ್ರಿಲ್ 1, 2023
23 °C

ಮಾರ್ಚ್‌ಗೆ ಅರವಿಂದ ಕೇಜ್ರಿವಾಲ್‌ ಚಿತ್ರದುರ್ಗಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಾರ್ಚ್‌ನಲ್ಲಿ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಬೃಹತ್‌ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಇ.ಜಗದೀಶ್ ತಿಳಿಸಿದರು.

‘ಮುಂಬರುವ ವಿಧಾನಸಭಾ ಚುನಾವಣೆಗೆ ಎಎಪಿ ಸಿದ್ಧತೆ ಆರಂಭಿಸಿದೆ. ಫೆಬ್ರುವರಿ ಅಂತ್ಯಕ್ಕೆ ದಾವಣಗೆರೆಗೆ ಕೇಜ್ರಿವಾಲ್‌ ಆಗಮಿಸಲಿದ್ದಾರೆ. ಆ ಬಳಿಕ ಚಿತ್ರದುರ್ಗದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ಕೇಜ್ರಿವಾಲ್‌ ಭಾಗವಹಿಸಲಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಭ್ರಷ್ಟಾಚಾರ ನಿರ್ಮೂಲನೆಯೇ ಎಎಪಿಯ ಅಂತಿಮ ಗುರಿ. ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ಚುನಾವಣೆ ಎದುರಿಸುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು. ಹಣ ಸೇರಿ ಯಾವುದೇ ಆಮಿಷವೊಡ್ಡುವವರಿಗೆ ಪಕ್ಷದಲ್ಲಿ ಅವಕಾಶವಿಲ್ಲ. ಆಮಿಷದ ಮೂಲಕ ಮತ ಪಡೆಯುವ ಅಗತ್ಯ ಎಎಪಿಗೆ ಇಲ್ಲ’ ಎಂದು ಹೇಳಿದರು.

‘ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ. ಹಲವು ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಪಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಪಕ್ಷದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು’ ಎಂದರು.

ಎಎಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್‌.ಎಂ.ಫಾರೂಕ್‌ ಅಜ್ಮತ್‌ ಅಲಿ, ‘ರಾಜ್ಯದ ಜನರಿಗೆ ಪರಿಚಿತವಾಗಿರುವ ಮೂರು ಪಕ್ಷಗಳಿಗೆ ಭ್ರಷ್ಟಾಚಾರವೇ ಜೀವಾಳ. ಅಧಿಕಾರದಲ್ಲಿರುವ ಪಕ್ಷ ಭ್ರಷ್ಟಾಚಾರದಲ್ಲಿ ರಾಕ್ಷಸರ ರೀತಿ ವರ್ತಿಸುತ್ತಿದೆ. ಬೆಳಗಾವಿಯ ಗುತ್ತಿಗೆದಾರರೊಬ್ಬರ ಜೀವವನ್ನು ಬಲಿಪಡೆದಿದೆ’ ಎಂದು ಆರೋಪಿಸಿದರು.

‘ಸಾರ್ವಜನಿಕರ ಹಣವನ್ನು ಜನಪ್ರತಿನಿಧಿಗಳು ಲೂಟಿ ಮಾಡುತ್ತಿದ್ದಾರೆ. ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಸರಬರಾಜಿಗೆ ಅಳವಡಿಸಿದ ಕೊಳವೆ ಮಾರ್ಗದಿಂದ ಜನರಿಗೆ ಪ್ರಯೋಜನವಾಗಿಲ್ಲ. ಈ ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಕ್ಷೇತ್ರದ ಮತದಾರರು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಿದ್ದಾರೆ’ ಎಂದು ಹೇಳಿದರು.

ಎಚ್‌.ಎಂ.ಫಾರೂಕ್‌ ನೂತನ ಅಧ್ಯಕ್ಷ

ಆಮ್‌ ಆದ್ಮಿ ಪಕ್ಷದ (ಎಎಪಿ) ಜಿಲ್ಲಾ ಘಟಕವನ್ನು ಪುನರ್‌ ರಚಿಸಿ ಪಕ್ಷದ ಉಸ್ತುವಾರಿ ದಿಲೀಪ್‌ ಪಾಂಡೆ ಆದೇಶ ಹೊರಡಿಸಿದ್ದಾರೆ. ಎಚ್‌.ಎಂ.ಫಾರೂಕ್‌ ಅಜ್ಮತ್‌ ಅಲಿ ಎಎಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕೆ.ಲಕ್ಷ್ಮೀನಾರಾಯಣ ರೆಡ್ಡಿ– ಉಪಾಧ್ಯಕ್ಷ, ಟಿ.ಕೆಂಚಪ್ಪ– ಪ್ರಧಾನ ಕಾರ್ಯದರ್ಶಿ, ಈ.ಗಣೇಶ್‌– ಸಂಘಟನಾ ಕಾರ್ಯದರ್ಶಿ, ಕುಬೇರ ನಾಯ್ಕ್‌– ಜಿಲ್ಲಾ ಕಾರ್ಯದರ್ಶಿ, ರಾಜಣ್ಣ– ಖಜಾಂಚಿಯಾಗಿ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

***

ಆಮಿಷವೊಡ್ಡಿ ಅಧಿಕಾರಕ್ಕೆ ಬರುವವರು ಜನರಿಗೆ ಒಳಿತು ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಇನ್ನಷ್ಟು ಅವಕಾಶ ಸಿಕ್ಕಂತೆ ಆಗಲಿದೆ. ಆಮಿಷವಿಲ್ಲದ ನ್ಯಾಯಸಮ್ಮತ ಚುನಾವಣೆ ನಡೆಯಬೇಕು.
–ಬಿ.ಇ.ಜಗದೀಶ್‌, ಜಂಟಿ ಕಾರ್ಯದರ್ಶಿ, ಎಎಪಿ ರಾಜ್ಯ ಘಟಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು