ಭಾನುವಾರ, ಆಗಸ್ಟ್ 1, 2021
23 °C

ಫುಡ್‌ ಪಾರ್ಕ್‌ ಅಭಿವೃದ್ಧಿಗೆ ಒಲವು: ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಫುಡ್‌ ಪಾರ್ಕ್‌ ಹಾಗೂ ಆಹಾರ ಮೌಲ್ಯವರ್ಧನ ಕೇಂದ್ರಗಳ ಅಗತ್ಯತೆ ಬಗ್ಗೆ ಲಾಕ್‌ಡೌನ್ ಮನವರಿಕೆ ಮಾಡಿಕೊಟ್ಟಿದೆ. ಸರ್ಕಾರದ ಅನುದಾನ ಬಳಸಿ ಹಿರಿಯೂರು ಫುಡ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಆಶ್ವಾಸನೆ ನೀಡಿದರು.

ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆಯ ಶಾಂತವೀರಯ್ಯ ಅವರ ಜೇನು ಕೃಷಿ ತೋಟ ಹಾಗೂ ಅಕ್ಷಯ್‌ ಫುಡ್‌ ಪಾರ್ಕ್‌ಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಿರಿಯೂರಿನ ಫುಡ್ ಪಾರ್ಕ್ 2004ರಲ್ಲಿ ಆರಂಭವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಡಿ ಫುಡ್‍ಪಾರ್ಕ್‍ ಅಭಿವೃದ್ಧಿಗೆ ₹ 10 ಸಾವಿರ ಕೋಟಿ ಮೀಸಲಿರಿಸಲಾಗಿದೆ’ ಎಂದು ಹೇಳಿದರು.

‘ಬೆಳೆಯನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ ಎಂಬುದು ಲಾಕ್‌ಡೌನ್‌ ಸಂದರ್ಭದಲ್ಲಿ ಅರ್ಥವಾಗಿದೆ. ಮೌಲ್ಯವರ್ಧನ ಮಾಡಿ ದಾಸ್ತಾನು ಇರಿಸಲು ಅವಕಾಶವಿದೆ. ಹೀಗಾಗಿ, ಫುಡ್‌ಪಾರ್ಕ್‌ ಹಾಗೂ ಕೋಲ್ಡ್‌ ಸ್ಟೋರೇಜ್‌ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

‘ಹಿರಿಯೂರಿನಲ್ಲಿರುವ ಕೋಲ್ಡ್‌ ಸ್ಟೋರೇಜ್‌ 1,400 ಟನ್ ಸಾಮಾರ್ಥ್ಯ ಹೊಂದಿದೆ. ಇದು ತೀರಾ ಚಿಕ್ಕದಾಗಿದ್ದು, ರೈತರ ಬೆಳೆ ಸಂಗ್ರಹಣೆಯಲ್ಲಿ ತೊಡಕು ಉಂಟಾಗುತ್ತಿದೆ. ನಬಾರ್ಡ್ ನೆರವಿನೊಂದಿಗೆ ಸುಮಾರು 5,000 ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಿಸುವತ್ತ ಸರ್ಕಾರ ಗಮನ ಹರಿಸಿದೆ’ ಎಂದು ಹೇಳಿದರು.

‘ರೈತರ ಜಮೀನಿಗೆ ತೆರಳಿ ಮಣ್ಣು ಪರೀಕ್ಷೆ, ಕೀಟ ನಿವಾರಣೆ, ಗೊಬ್ಬರ, ಔಷಧಿ ಸಿಂಪಡಣೆ ಬಗ್ಗೆ ಮಾಹಿತಿ ನೀಡಲು ಕೃಷಿ ಸಂಚಾರಿ ಹೆಲ್ತ್‌ ಕ್ಲಿನಿಕ್‌ ವ್ಯವಸ್ಥೆ ರೂಪಿಸಲಾಗಿದೆ. ಈಗಾಗಲೇ 40 ವಾಹನಗಳು ಕೃಷಿ ಇಲಾಖೆಗೆ ಬಂದಿವೆ. ರಾಜ್ಯದ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಒಂದು ಸಂಚಾರಿ ವಾಹನ ಒದಗಿಸುವ ಉದ್ದೇಶವಿದೆ. ಕೋವಿಡ್‌ ಇರುವ ಕಾರಣಕ್ಕೆ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ’ ಎಂದು ಮಾಹಿತಿ ನೀಡಿದರು.

ನೂರರಷ್ಟು ಹೆಚ್ಚಿದ ಕೊರೊನಾ:

ಆರಂಭದ ದಿನಗಳಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ನೂರರಷ್ಟು ಹೆಚ್ಚಾಗಿದೆ. ಪ್ರತಿಯೊಬ್ಬರು ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

‘ಲಾಕ್‌ಡೌನ್‌ ಸಡಿಲಗೊಳಿಸಿದ ಮಾತ್ರಕ್ಕೆ ಸೋಂಕು ತೊಲಗಿದೆ ಎಂದರ್ಥವಲ್ಲ. ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‌ಡೌನ್‌ ಪರಿಹಾರವಲ್ಲ. ಇದರಿಂದ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ಲಾಕ್‌ಡೌನ್‌ ಅನುಷ್ಠಾನಗೊಳಿಸದಿದ್ದರೂ ಅಮೆರಿಕದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ, ಲಾಕ್‌ಡೌನ್ ಅನುಷ್ಠಾನಗೊಳಿಸಬಾರದು. ರಾಜ್ಯದಲ್ಲಿ ಲಾಕ್‌ಡೌನ್‌ ಆಗುವುದಿಲ್ಲ ಎಂಬ ಭರವಸೆ ಇದೆ’ ಎಂದು ಹೇಳಿದರು.

‘ಕಾಂಗ್ರೆಸ್ ಟೀಕೆಗೆ ಸೀಮಿತ’: 

ಬಡವರಿಗೆ ಅಕ್ಕಿ, ಬೇಳೆಯನ್ನು ನೀಡುವುದಾಗಿ ಘೋಷಣೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ. ಕಾಂಗ್ರೆಸ್‌ ಮಾತು ಕೇಳುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ. ಟೀಕೆಗೆ ಮಾತ್ರ ಕಾಂಗ್ರೆಸ್‌ ಸೀಮಿತವಾಗಿದೆ ಎಂದು ತಿರುಗೇಟು ನೀಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿವೆ. ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಕ್ವಾರಂಟೈನ್ ಆಗದ ಕೆಲವರಿಂದ ತೊಂದರೆ ಉಂಟಾಗಿದೆ. ಹೊರ ರಾಜ್ಯದಿಂದ ಬಂದವರಿಂದ ಸೋಂಕು ಹೆಚ್ಚಾಗಿದೆ’ ಎಂದರು.

‘ಸರ್ಕಾರಕ್ಕೆ ಯಾವ ರೀತಿ ಹೃದಯ ಇರಬೇಕು ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಬೇಕು. ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು, ಬಾಯಿ ಹಾಗೂ ಹೃದಯ ಸರಿಯಾಗಿದೆ. ಮಿದುಳು ಸರಿಯಾಗಿ ಕೆಲಸ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.

ಸಂಸದ ಎ.ನಾರಾಯಣಸ್ವಾಮಿ, ಶಾಸಕಿ ಕೆ.ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಡಾ.ಸವಿತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು