ಸೋಮವಾರ, ಸೆಪ್ಟೆಂಬರ್ 27, 2021
29 °C
ಕೋಟೆನಾಡಿನ ನಾಲ್ವರು ಶಾಸಕರಲ್ಲಿ ಮೂಡಿದ ಅಸಮಾಧಾನ

ಶ್ರೀರಾಮುಲುಗೆ ಮತ್ತೊಮ್ಮೆ ಒಲಿದ ಸಚಿವ ಸ್ಥಾನ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಅತ್ಯಂತ ಹಿಂದುಳಿದ ಪ್ರದೇಶವೆಂದೇ ಗುರುತಿಸಿಕೊಂಡಿರುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಮತ್ತೊಮ್ಮೆ ಸಚಿವರಾಗಿ ‍ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಚಿವರಾಗಬೇಕು ಎಂಬ ಹಂಬಲ ಹೊಂದಿದ್ದ ಇತರ ನಾಲ್ವರು ಬಿಜೆಪಿ ಶಾಸಕರ ಕನಸು ಕೊನೆಗೂ ಕೈಗೂಡಿಲ್ಲ.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಶ್ರೀರಾಮುಲು ಕೆಲಸ ಮಾಡಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಇವರು ಕೊನೆಯ ಗಳಿಗೆಯಲ್ಲಿ ಮುನಿಸಿಕೊಂಡು ಬಳ್ಳಾರಿ ಸೇರಿದ್ದರು. ಸಚಿವ ಸ್ಥಾನ ಸಿಕ್ಕಿರುವುದು ಶ್ರೀರಾಮುಲು ಬೆಂಬಲಿಗರಲ್ಲಿ ಸಮಾಧಾನ ಮೂಡಿಸಿದೆ.

ಮೂಲತಃ ಬಳ್ಳಾರಿ ಜಿಲ್ಲೆಯವರಾದ ಶ್ರೀರಾಮುಲು 2018ರಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ. ನಾಯಕ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಇವರು, ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಒಬ್ಬರು. ಬಿಜೆಪಿಯ ರಾಜ್ಯ ಕೋರ್‌ ಕಮಿಟಿ ಸದಸ್ಯರೂ ಆಗಿರುವ ಶ್ರೀರಾಮುಲು, ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಯಾವ ಹುದ್ದೆ ಗಿಟ್ಟಿಸಲಿದ್ಧಾರೆ ಎಂಬ ಕುತೂಹಲ ಕ್ಷೇತ್ರದ ಮತದಾರರಲ್ಲಿದೆ.

1970ರ ಆ.8ರಂದು ಜನಿಸಿದ ಶ್ರೀರಾಮುಲು ಬಿ.ಎ ಪದವೀಧರರು. ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರೊಂದಿಗೆ ಗುರುತಿಸಿಕೊಂಡು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಇವರ ಬೆಳವಣಿಗೆಯಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಅವರ ಬೆಂಬಲವಿದೆ. 1996ರಲ್ಲಿ ಬಳ್ಳಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾದ ಶ್ರೀರಾಮುಲು ,1999ರಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋಲು ಅನುಭವಿಸಿದರು. 2004ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ 2006ರಲ್ಲಿ ಪ್ರವಾಸೋದ್ಯಮ ಸಚಿವರಾಗಿಯೂ ಕಾರ್ಯನಿರ್ವಹಿಸಿದರು.

2008ರಲ್ಲಿ ಪುನರಾಯ್ಕೆಯಾದ ಇವರು ಆರೋಗ್ಯ ಸಚಿವರಾಗಿ ಛಾಪು ಮೂಡಿಸಿದರು. ರಾಜಕೀಯ ಸ್ಥಿತ್ಯಂತರದಲ್ಲಿ 2011ರಲ್ಲಿ ಬಿಜೆಪಿ ತೊರೆದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಳ್ಳಾರಿಯನ್ನು ಪ್ರತಿನಿಧಿಸಿದರು. ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ರಾಜ್ಯದಲ್ಲಿ ಪಾದಯಾತ್ರೆ ನಡೆಸಿದರು. 2013ರಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದರು. ಇವರೊಂದಿಗೆ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಇತರ ಮೂವರು ಶಾಸಕರು ಜೊತೆಗಿದ್ದರು.

2014ರಲ್ಲಿ ಮತ್ತೆ ಬಿಜೆಪಿ ಸೇರಿದ ಶ್ರೀರಾಮುಲು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸತ್ತು ಪ್ರವೇಶಿಸಿದರು. ಪಕ್ಷದ ಸೂಚನೆಯಂತೆ 2018ರಲ್ಲಿ ಮೊಳಕಾಲ್ಮುರು ಹಾಗೂ ಬಾದಾಮಿಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಅದೃಷ್ಟ ಪರೀಕ್ಷೆಗೆ ಒಡ್ಡಿದರು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ವಿಜೇತರಾದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಾದಾಮಿಯಲ್ಲಿ ಪರಾಭವಗೊಂಡರು.

ಭುಗಿಲೆದ್ದ ಅಸಮಾಧಾನ

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಹಿರಿಯೂರು ಶಾಸಕಿ ಕೆ.ಪೂರ್ಣಿಮ ಅವರಿಗೆ ಅವಕಾಶ ಸಿಗದಿರುವ ಬಗ್ಗೆ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಶಾಸಕಿಯ ಬೆಂಬಲಿಗರು ರಸ್ತೆ ತಡೆ ನಡೆಸಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಶಶಿಕಲಾ ಜೊಲ್ಲೆ ಅವರ ಮೇಲೆ ಮೊಟ್ಟೆ ಖರೀದಿ ಅವ್ಯವಹಾರದ ಆರೋಪ ಕೇಳಿ ಬಂದಿದ್ದರಿಂದ ಪೂರ್ಣಿಮಾ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಪೂರ್ಣಿಮಾ ಸಚಿವರಾಗುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಕೊನೆ ಗಳಿಗೆಯಲ್ಲಾದ ಬದಲಾವಣೆ ಗೊಲ್ಲ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಹೈಕಮಾಂಡ್‌ ಬಾಗಿಲು ತಟ್ಟಿದ್ದರು

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹಿರಿಯ ಶಾಸಕರು. ಐದು ಬಾರಿ ಶಾಸಕರಾಗಿ ಹಾಗೂ ಒಮ್ಮೆ ವಿಧಾನಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಹಿರಿತನದ ಆಧಾರದ ಮೇರೆಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ ಬಾಗಿಲು ತಟ್ಟಿದರೂ ಪ್ರಯೋಜನವಾಗಿಲ್ಲ.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿಯಾದರೂ ಸಂಪುಟದಲ್ಲಿ ಸ್ಥಾನ ಸಿಗಬಹುದೇ ಎಂಬ ನಿರೀಕ್ಷೆ ಹುಸಿಯಾಗಿದೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಕೂಡ ಸಂಪುಟದಲ್ಲಿ ಅವಕಾಶ ಪಡೆಯಲು ತೆರೆಮರೆಯ ಲಾಬಿ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು