ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ನಿರ್ವಹಣೆ: ಸಮಿತಿಗೆ ಹೊಣೆ, ಸಚಿವ ಬಿ.ಶ್ರೀರಾಮುಲು ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆ
Last Updated 11 ಮೇ 2021, 13:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಉಲ್ಬಣಿಸಿ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬರುವವರಿಗೆ ಸಬೂಬು ಹೇಳಿ ಕಳುಹಿಸದೇ ಖಾಸಗಿ ಆಸ್ಪತ್ರೆಯಲ್ಲಿ ಮೀಸಲಿರುವ ಶೇ 50ರಷ್ಟು ಹಾಸಿಗೆಗೆ ಶಿಫಾರಸು ಮಾಡಬೇಕು. ಇದರ ನಿರ್ವಹಣೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಹಾಸಿಗೆ ಅಲಭ್ಯತೆಯ ಕಾರಣ ನೀಡಿ ಯಾವುದೇ ಸೋಂಕಿತರನ್ನು ಮನೆಗೆ ಕಳುಹಿಸುವಂತಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದಿದ್ದರೆ ಸೂಕ್ತ ವ್ಯವಸ್ಥೆ ಮಾಡಬೇಕು. ಅಧಿಕಾರಿಯೊಬ್ಬರಿಗೆ ಹೊಣೆ ನಿಗದಿ ಮಾಡಿ ಆಸ್ಪತ್ರೆಯ ಬಳಿ ನಿಯೋಜನೆ ಮಾಡಲಾಗುವುದು. ಹಾಸಿಗೆಯ ಲಭ್ಯತೆಯ ಬಗ್ಗೆ ನಿತ್ಯವೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಖಾಸಗಿ ಆಸ್ಪತ್ರೆಯಲ್ಲಿ ಶೇ 50ರಷ್ಟು ಹಾಸಿಗೆಯನ್ನು ಮೀಸಲಿಡುವಂತೆ ಸರ್ಕಾರ ನಿಯಮ ರೂಪಿಸಿದೆ. ಆದರೆ, ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಹಾಸಿಗೆ ಸಿಗುತ್ತಿಲ್ಲ. ಆರೋಗ್ಯ ಇಲಾಖೆ ಯಾರೊಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಲ್ಲ ಏಕೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

‘ಕೆಪಿಎಂಎ ಕಾಯ್ದೆಯಡಿ ನೋಂದಣಿಯಾಗಿರುವ 33 ಆಸ್ಪತ್ರೆಗಳು ಜಿಲ್ಲೆಯಲ್ಲಿವೆ. ಈ ಎಲ್ಲ ಆಸ್ಪತ್ರೆಗಳಲ್ಲಿ 1,317 ಹಾಸಿಗೆ ಇವೆ. ಸರ್ಕಾರದ ನಿಯಮದ ಪ್ರಕಾರ 658 ಹಾಸಿಗೆಗಳು ಜಿಲ್ಲಾಡಳಿತಕ್ಕೆ ಲಭ್ಯವಾಗಲಿವೆ. ಈಗಾಗಲೇ 5 ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಯ ಅನುಮತಿ ಪಡೆದಿರುವ ಕಾರಣಕ್ಕೆ 166 ಹಾಸಿಗೆಗಳು ಸಿಗುತ್ತಿವೆ. ಈ ಹಾಸಿಗೆಯನ್ನು ಬಳಕೆ ಮಾಡಿಕೊಳ್ಳದೇ ಖಾಸಗಿಯವರಿಗೇ ಬಿಟ್ಟಿದ್ದು ತಪ್ಪು’ ಎಂದರು.

ಕೋವಿಡ್‌ ತೀವ್ರತೆ ಇರಲಿಲ್ಲ:ಸರ್ಕಾರದ ನಿಯಮದ ಪ್ರಕಾರ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಟ್ಟಿದ್ದವು. ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ ತೀವ್ರತೆ ಇಲ್ಲದಿರುವುದರಿಂದ ಈ ಹಾಸಿಗೆಗಳನ್ನು ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸ್ಪಷ್ಟನೆ ನೀಡಿದರು.

‘ಹಾಸಿಗೆ ನಿರ್ವಹಣೆಗೆ ಸಮಿತಿ ರಚನೆ ಮಾಡಲಾಗುತ್ತದೆ. ಇದರಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರೂ ಇರಲಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಮೀಸಲಿರುವ ಹಾಸಿಗೆಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸುವಂತೆ ಆದೇಶ ಹೊರಡಿಸಲಾಗುವುದು. ಸರ್ಕಾರಿ ಆಸ್ಪತ್ರೆಗೆ ಬರುವವರನ್ನು ಶಿಫಾರಸು ಮಾಡಿ ಕಳುಹಿಸಲಾಗುವುದು’ ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಷ್ಟೇ ವೆಂಟಿಲೇಟರ್‌:‘ವರ್ಷದ ಹಿಂದೆ ಕೋವಿಡ್‌ ಕಾಣಿಸಿಕೊಂಡಾಗ ಪಿಎಂಕೇರ್‌ ಅನುದಾನದಲ್ಲಿ ಪ್ರತಿ ತಾಲ್ಲೂಕು ಆಸ್ಪತ್ರೆಗೆ ವೆಂಟಿಲೇಟರ್‌ ನೀಡಲಾಗಿತ್ತು. ತಂತ್ರಜ್ಞರು ಹಾಗೂ ತಜ್ಞ ವೈದ್ಯರ ಕೊರತೆಯ ಕಾರಣಕ್ಕೆ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ವೆಂಟಿಲೇಟರ್‌ಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಸಭೆ ತೀರ್ಮಾನಿಸಿದೆ’ ಎಂದುಶ್ರೀರಾಮುಲು ಮಾಹಿತಿ ನೀಡಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ 42 ವೆಂಟಿಲೇಟರ್‌ಗಳಿವೆ. ಇದರಲ್ಲಿ 30 ವೆಂಟಿಲೇಟರ್‌ಗಳನ್ನು ಕೋವಿಡ್‌ಗೆ ಹಾಗೂ 12 ವೆಂಟಿಲೇಟರ್‌ಗಳನ್ನು ಇತರ ರೋಗಿಗಳಿಗೆ ಮೀಸಲಿಡಲಾಗಿದೆ. ತಂತ್ರಜ್ಞರು ಹಾಗೂ ಅರಿವಳಿಕೆ ತಜ್ಞರು ಇರುವ ಕಾರಣಕ್ಕೆ ಎಲ್ಲ ತಾಲ್ಲೂಕಿನ ವೆಂಟಿಲೇಟರ್‌ಗಳನ್ನು ಜಿಲ್ಲಾ ಆಸ್ಪತ್ರೆಗೆ ತರಲಾಗುತ್ತದೆ. ಇದರಿಂದ ವೆಂಟಿಲೇಟರ್‌ ಹಾಸಿಗೆ ಸೌಲಭ್ಯಕ್ಕೆ 60ಕ್ಕೆ ಏರಿಕೆ ಆಗಲಿದೆ’ ಎಂದು ಹೇಳಿದರು.

₹ 25 ಕೋಟಿ ಬಳಕೆಗೆ ಅಸ್ತು:‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಜಿಲ್ಲಾ ಖನಿಜ ನಿಧಿಯಲ್ಲಿ (ಡಿಎಂಎಫ್‌) ಮೀಸಲಿಟ್ಟಿದ್ದ ₹ 25 ಕೋಟಿ ಅನುದಾನವನ್ನು ಕೋವಿಡ್‌ ನಿರ್ವಹಣೆಗೆ ಬಳಸಿಕೊಳ್ಳಲು ಸಭೆ ಅನುಮೋದನೆ ನೋಡಿತು. ಇದರಿಂದ ಇನ್ನಷ್ಟು ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ’ ಎಂದು ವಿವರಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಈಗಿರುವ 175 ಹಾಸಿಗೆಗಳ ಜೊತೆಗೆ 200 ಹೆಚ್ಚುವರಿ ಹಾಸಿಗೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪ್ರತಿನಿತ್ಯ 6 ಸಾವಿರ ಲೀಟರ್ ವೈದ್ಯಕೀಯ ಆಮ್ಲಜನಕದ ಅಗತ್ಯವಿದೆ. ಸಾರ್ವಜನಿಕ ಆಸ್ಪತ್ರೆ, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್‌ ಸೇರಿ 1,654 ಲೀಟರ್ ಆಮ್ಲಜನಕದ ಅಗತ್ಯವಿದೆ. 400 ಜಂಬೋ ಸಿಲಿಂಡರ್‌ ಬೇಕಾಗಿದ್ದು, ಪ್ರಕಾಶ್ ಸ್ಪಾಂಜ್‌ ಹಾಗೂ ಸ್ಟೀಲ್‌ ಕಂಪನಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ’ ಎಂದರು.

ಆಮ್ಲಜನಕ, ರೆಮಿಡಿಸಿವರ್ ಕೊರತೆ:ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಅಗತ್ಯಕ್ಕಿಂತಲೂ ಕಡಿಮೆ ಪ್ರಮಾಣದ ವೈದ್ಯಕೀಯ ಆಮ್ಲಜನಕ ಹಾಗೂ ರೆಮ್‌ಡಿಸಿವಿರ್‌ ಚುಚ್ಚುಮದ್ದು ಲಭ್ಯವಾಗುತ್ತಿವೆ ಎಂಬುದು ಸಭೆಯಲ್ಲಿ ಬಹಿರಂಗವಾಯಿತು.

‘ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ನಿತ್ಯ 300 ವಯಲ್‌ ಹಾಗೂ ಇತರೆಡೆಗೆ 800 ವಯಲ್‌ ಸೇರಿ 1,100 ರೆಮ್‌ಡಿಸಿವಿರ್‌ ಚುಚ್ಚುಮದ್ದು ಅಗತ್ಯವಿದೆ. ಜಿಲ್ಲೆಗೆ ಕೇವಲ 300 ವಯಲ್‌ ರೆಮ್‌ಡಿಸಿವಿರ್‌ ಸರಬರಾಜು ಆಗುತ್ತಿದೆ. ನಿತ್ಯ ಏಳು ಸಾವಿರ ಲೀಟರ್‌ ವೈದ್ಯಕೀಯ ಆಮ್ಲಜನಕದ ಅಗತ್ಯವಿದೆ. ಆದರೆ, ಮೂರು ಸಾವಿರ ಲೀಟರ್‌ ಮಾತ್ರ ಪೂರೈಕೆ ಆಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗುವುದು’ ಎಂದು ಶ್ರೀರಾಮುಲು ಆಶ್ವಾಸನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ಇದ್ದರು.

ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿದೆ. ಹಾಸಿಗೆ ಸೌಲಭ್ಯ ಹೆಚ್ಚಿಸಿದರೆ ಆಮ್ಲಜನಕದ ಪೂರೈಕೆಯೂ ಹೆಚ್ಚಾಗಬೇಕಿದೆ. ಈ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ.

ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ

ಸೋಂಕಿತರು ಸರ್ಕಾರಿ ಆಸ್ಪತ್ರೆಗೆ ಬಂದರೆ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಬಹುದು. ಆಗ ಉಚಿತ ಚಿಕಿತ್ಸೆ ಸಿಗಲಿದೆ. ಬಹುತೇಕರು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

ಖಾಸಗಿ ಆಸ್ಪತ್ರೆಯ ಶೇ 50ರಷ್ಟು ಹಾಸಿಗೆಗಳನ್ನು ಆರೋಗ್ಯ ಇಲಾಖೆ ಸದ್ಬಳಕೆ ಮಾಡಿಕೊಂಡಿಲ್ಲ. ಯಾರೊಬ್ಬರಿಗೂ ಈವರೆಗೆ ಶಿಫಾರಸು ಮಾಡಿಲ್ಲ. ಬಡವರು ಹಾಸಿಗೆಗೆ ಪರದಾಡುತ್ತಿದ್ದಾರೆ.

ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

ಕೋವಿಡ್‌ ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ. ಇದು ಯಾವಾಗ ಬರುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ಆದರೂ, ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

–ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT