ವಿ.ವಿ.ಸಾಗರಕ್ಕೆ ತಲುಪಲಿದೆ ಭದ್ರಾ ನೀರು

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ನದಿಯ ನೀರು ಹಿರಿಯೂರಿನ ‘ವಾಣಿವಿಲಾಸ ಸಾಗರ ಜಲಾಶಯ’ ತಲುಪಲು ನಾಲ್ಕರಿಂದ ಐದು ದಿನ ಬೇಕಾಗಬಹುದು. ಮುಖ್ಯ ಕಾಲುವೆ ಮಾರ್ಗವಾಗಿ ನೀರು ಹರಿಯುವ ವಿಚಾರ ಈ ಭಾಗದ ರೈತ ಸಮುದಾಯದ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ನೀರು ಹರಿಸಲು ಈ ಮೊದಲು ಆ. 27, ಸೆ. 2 ನಂತರ 4 ಹೀಗೆ ದಿನಾಂಕ ನಿಗದಿಪಡಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಬೇಕಿತ್ತು. ಆದರೆ, ಕಾರಣಾಂತರದಿಂದ ಸೆ. 6ರಂದು ಚಾಲನೆ ಸಿಕ್ಕಿದೆ. ಈ ವಿಷಯ ತಿಳಿದ ಅನೇಕ ರೈತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಮುಖ್ಯ ಕಾಲುವೆ ಮಾರ್ಗವಾಗಿ ‘ವೇದಾವತಿ’ ನದಿ ಪಾತ್ರದ ಗ್ರಾಮಗಳಾದ ಹೆಬ್ಬೂರು, ಕಾಟಿಗನೆರೆ ಬೆಣ್ಣೆ ಕುಣಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು ಎಚ್.ತಿಮ್ಮಾಪುರ, ಹನುಮನಹಳ್ಳಿ, ಕಲ್ಕೆರೆ, ಚೌಳ ಹಿರಿಯೂರು ಗ್ರಾಮಗಳ ವ್ಯಾಪ್ತಿಯ ಹಳ್ಳದಲ್ಲಿ ನೀರು ಹರಿಯಲಿದೆ. ಕುಕ್ಕೇಸಮುದ್ರ ಕೆರೆ ಮೂಲಕ ವೇದಾವತಿ ನದಿ ಸೇರಲಿದೆ. ನಂತರ ಚಿಕ್ಕಬಳ್ಳೇಕೆರೆ, ಬಾಗಶೆಟ್ಟಿ ಹಳ್ಳಿ, ಕೊರಟಕೆರೆ, ಬಲ್ಲಾಳಸಮುದ್ರ, ಮೆಟ್ಟಿನಹೊಳೆ, ಕೆಲ್ಲೋಡು, ಲಿಂಗದಳ್ಳಿ, ಕಾರೆಹಳ್ಳಿ, ಹತ್ತಿಮಗ್ಗೆ, ಬೇವಿನಹಳ್ಳಿ ಮೂಲಕ ವಿ.ವಿ.ಸಾಗರಕ್ಕೆ ಸೆ.11 ಅಥವಾ 12ರೊಳಗೆ ಹರಿದು ಬರಬಹುದು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ನೀರು ಹರಿಯುವ ಭರವಸೆಯೂ ಸಾಕಾರಗೊಳ್ಳುವ ವಿಶ್ವಾಸ ಮೂಡಿದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಶಾಂತಿಪುರ ಹಾಗೂ ಬೆಟ್ಟದತಾವರೆಕೆರೆ ಬಳಿಯ ಎರಡನೇ ಹಂತದ ಪಂಪ್‌ಹೌಸ್ ಬಳಿ ರೈತರು ಜಮಾಯಿಸಿದ್ದರು. ಭದ್ರಾ ನೀರನ್ನು ಮೇಲೆತ್ತಿ ಕಾಲುವೆಗೆ ಹರಿಸುತ್ತಿದ್ದಂತೆ ನೆರೆದಿದ್ದವರಲ್ಲಿ ಸಂಭ್ರಮ ಹೆಚ್ಚಾಯಿತು.
ಭದ್ರಾ ನೀರು ಹರಿದು ಬಂದರೆ ವಿ.ವಿ.ಸಾಗರ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲಿದೆ. ಕುಡಿಯುವ ನೀರಿಗಾಗಿ ಚಿತ್ರದುರ್ಗ ಹಾಗೂ ಹಿರಿಯೂರಿನ ಜನ ಅನುಭವಿಸುತ್ತಿರುವ ತೊಂದರೆ ನೀಗಲಿದ್ದು, ಎರಡೂ ತಾಲ್ಲೂಕುಗಳ ವಿವಿಧ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಜನತೆ ಮತ್ತಷ್ಟು ಸಂತಸಗೊಳ್ಳಲು ಕಾರಣವಾಗಲಿದೆ.
‘ನೀರು ಹರಿಸಲಿಕ್ಕಾಗಿ ಮೂರು ದಿನ ನಡೆದ ತಾಂತ್ರಿಕ ಪ್ರಯತ್ನದೊಂದಿಗೆ ವಿದ್ಯುತ್ ಸಂಪರ್ಕದ ಕಾರ್ಯಕ್ಷಮತೆ ಪರೀಕ್ಷಿಸಲಾಯಿತು. ಅಂತಿಮವಾಗಿ ವಿಜೆಎನ್‌ಎಲ್ ಮತ್ತು ಕೆಪಿಟಿಸಿಎಲ್ ನಿಗಮದ ಅಧಿಕಾರಿಗಳ ಕಾರ್ಯವೈಖರಿಯಿಂದ ನೀರನ್ನು ಮೇಲೆತ್ತಿ ಹರಿಸಲಾಗುತ್ತಿದೆ’ ಎಂದು ಸಂಸದ ಎ. ನಾರಾಯಣಸ್ವಾಮಿ ತಿಳಿಸಿದರು.
‘ಪ್ರಸ್ತುತ ಭಾಗಶಃ ಪ್ರದೇಶಕ್ಕೆ ನೀರು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡ್ಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಲೋಕಸಭಾ ಕ್ಷೇತ್ರದ ನನ್ನ ಎಲ್ಲಾ ಶಾಸಕರು, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ಲಕ್ಷ್ಮಣರಾವ್ ಪೇಶ್ವೆ, ಹಾಸನ ಮತ್ತು ತುಮಕೂರು ಕೆಪಿಟಿಸಿಎಲ್‌ನ ಮುಖ್ಯ ಎಂಜಿನಿಯರ್ ಆದಿನಾರಾಯಣ್, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವನ್, ಅನೇಕ ರೈತರು ಕೈಜೋಡಿಸಿ ಸಹಕರಿಸಿದ್ದಾರೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.