ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಇಂದು ಕಲಾತಂಡಗಳ ‘ಭೀಮಯಾತ್ರೆ’

ಅಂಬೇಡ್ಕರ್‌ ಜನ್ಮ ದಿನಾಚರಣೆ ಸಮಿತಿ ಸಂಘಟಕ ಶರಣಪ್ಪ ಹೇಳಿಕೆ
Last Updated 13 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಏ. 14ರಂದು ‘ಭೀಮಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚರಣೆ ಸಮಿತಿ ಸಂಘಟಕ ಶರಣಪ್ಪ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ ಅಂಬೇಡ್ಕರ್‌ರವರ 131ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಲು ದಿನಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12.30ಕ್ಕೆ ನಗರದ ಕನಕ ವೃತ್ತದಲ್ಲಿ ‘ಭೀಮಯಾತ್ರೆ’ಗೆ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಚಾಲನೆ ನೀಡಲಿದ್ದಾರೆ. ಕನಕ ವೃತ್ತದಿಂದ ಹೊಳಲ್ಕೆರೆ ರಸ್ತೆ ಮೂಲಕ ಗಾಂಧಿ ವೃತ್ತ, ಪ್ರವಾಸಿಮಂದಿರದಿಂದ ಅಂಬೇಡ್ಕರ್‌ ವೃತ್ತದವರೆಗೆ ನೂರಾರು ಕಲಾ ತಂಡಗಳೊಂದಿಗೆ ಭವ್ಯಯಾತ್ರೆ ಸಾಗಲಿದೆ’ ಎಂದರು.

ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂ ಆಲಿ, ‘ಕೋಟೆನಾಡಿನಲ್ಲಿ ಅಂಬೇಡ್ಕರ್‌ ಜನ್ಮ ದಿನಾಚರಣೆಯನ್ನು ಭಾವೈಕ್ಯತೆಯೊಂದಿಗೆ ಹಬ್ಬದ ರೀತಿ ಆಚರಿಸಲಾಗುತ್ತಿದೆ. ಮಧ್ಯಾಹ್ನ ಪ್ರಾರಂಭವಾಗುವ ಕಲಾ ತಂಡಗಳ ಮೆರವಣಿಗೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಅನುಯಾಯಿಗಳು, ರಾಜಕೀಯ ಮುಖಂಡರು, ದಲಿತ ಹೋರಾಟಗಾರರು, ಸಾಹಿತಿಗಳು, ವಿದ್ಯಾರ್ಥಿಗಳು, ನೌಕರರು ಸೇರಿದಂತೆ ಸಕಲ ಜಾತಿ ಧರ್ಮದವರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಈ ಯಾತ್ರೆಯಲ್ಲಿ ಜಾನಪದ ಕಲಾಮೇಳ, ತಮಟೆ ವಾದ್ಯ, ಖಾಸಬೇಡರ ಪಡೆ, ಲಂಬಾಣಿ ನೃತ್ಯ, ನೃತ್ಯಗಾರರು ಸೇರಿದಂತೆ ಇತರೆ ಕಲಾ ತಂಡಗಳು ಭಾಗವಹಿಸಲಿವೆ. ಸಂಜೆ 4 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದ ಬಳಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಭೂಮಿತಾಯಿ ಬಳಗ ಹಾಗೂ ಶಿವಮೊಗ್ಗದ ಕಲಾದ್ರಿ ಮೆಲೋಡಿಸ್‌ ತಂಡದಿಂದ ಕ್ರಾಂತಿ ಗೀತೆಗಳ ಗಾಯನ ನಡೆಯಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ,ಮಾಜಿ ಸದಸ್ಯ ಕುಮಾರ್‌, ವಕೀಲರಾದ ನರಹರಿ, ರವೀಂದ್ರ, ಬ್ಯಾಲಹಾಳ್‌ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬ್ಯಾಲಹಾಳ್‌ ಜಯಪ್ಪ ಇದ್ದರು.

ಸಾಗಿತು ಬೈಕ್‌ ರ‍್ಯಾಲಿ

ಡಾ.ಬಿ.ಆರ್‌. ಅಂಬೇಡ್ಕರ್‌ ಜನ್ಮದಿನಾಚರಣೆ ಸಮಿತಿಯಿಂದ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದಲ್ಲಿ ಬುಧವಾರ ಬೈಕ್‌ ರ‍್ಯಾಲಿ ನಡೆಯಿತು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ರ‍್ಯಾಲಿಗೆ ಚಾಲನೆ ನೀಡಿದರು. ನೂರಾರು ಬೈಕ್‌ಗಳು, ಆಟೋಗಳಿಗೆ ‘ಜೈ ಭೀಮ’ ಎಂಬ ಬಾವುಟವನ್ನು ಕಟ್ಟಿಕೊಂಡು ಅಂಬೇಡ್ಕರ್‌ಗೆ ಜಯವಾಗಲಿ, ಜೈ ಅಂಬೇಡ್ಕರ್ ಎಂಬ ಘೋಷಣೆಗಳನ್ನು ಕೂಗುತ್ತ ಯುವಕರು ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT