ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ರಾಷ್ಟ್ರೀಯತೆ ಮಾರುಕಟ್ಟೆ ಸರಕಾಗಿದೆ

ಸಿಎಎ ಜನಜಾಗೃತಿ ಅಭಿಯಾನದಲ್ಲಿ ಕಾದಂಬರಿಕಾರ ಡಾ.ಬಿ.ಎಲ್. ವೇಣು
Last Updated 8 ಫೆಬ್ರುವರಿ 2020, 13:32 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕೋಮುವಾದಿ ಮನಸ್ಥಿತಿಯುಳ್ಳ ಬಿಜೆಪಿ ಅವರಿಂದ ದೇಶದಲ್ಲಿ ರಾಷ್ಟ್ರೀಯತೆ ಮಾರುಕಟ್ಟೆ ಸರಕಾಗಿದೆ’ ಎಂದು ಕಾದಂಬರಿಕಾರ ಡಾ.ಬಿ.ಎಲ್. ವೇಣು ದೂರಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಇಲ್ಲಿ ಶನಿವಾರ ಆಯೋಜಿಸಿದ್ದ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ‘ನಮ್ಮದು ಮೂಲತಃ ಸಿಂಧೂ ರಾಷ್ಟ್ರ. ಆದರೆ, ಬ್ರಿಟಿಷರು ಹಿಂದೂ ಎಂಬುದಾಗಿ ತಪ್ಪಾಗಿ ಉಚ್ಛರಿಸಿದರು. ಅದನ್ನೇ ಮುಂದಿಟ್ಟುಕೊಂಡು ಬಿಜೆಪಿ, ಆರ್‌ಎಸ್‌ಎಸ್‌ ಜಾತಿ, ಧರ್ಮ ವಿಂಗಡಿಸಲು ಕುತಂತ್ರ ರೂಪಿಸಿದೆ’ ಎಂದು ಆರೋಪಿಸಿದರು.

‘70 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಮುಸ್ಲಿಂ ಧರ್ಮೀಯರನ್ನು ಒಲೈಸಿಕೊಂಡು ಮತಬ್ಯಾಂಕ್‌ ರಾಜಕಾರಣ ಮಾಡಿರಬಹುದು. ಆದರೆ, ಬಿಜೆಪಿಯವರಂತೆ ದ್ವೇಷದ ಬೀಜ ಬಿತ್ತಿಲ್ಲ. 60ಸಾವಿರಕ್ಕೂ ಹೆಚ್ಚು ಮುಸಲ್ಮಾನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವುದು ದಾಖಲಾಗಿದೆ. ಆದರೆ, ಆರ್‌ಎಸ್‌ಎಸ್‌ನ ಮುಖಂಡರು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ದಾಖಲೆ ನೀಡಲಿ’ ಎಂದು ಪ್ರಶ್ನಿಸಿದರು.

‘ಪೌರತ್ವ ಕಾಯ್ದೆ ದೇಶದ ಪ್ರತಿಯೊಬ್ಬ ಪ್ರಜೆಗೂ ತಲೆನೋವಾಗಿ ಪರಿಣಮಿಸಲಿದೆ. ಆರ್‌ಎಸ್‌ಎಸ್‌ ಹಿಡಿತದಲ್ಲಿರುವ ಬಿಜೆಪಿಯವರು ರಾಷ್ಟ್ರದಲ್ಲಿ ಜನಿಸಿರುವ ಕುರಿತು ದಾಖಲೆ ಕೇಳುತ್ತಿದ್ದಾರೆ. ಹಾಗಾದರೆ, ನಾವೆಲ್ಲರೂ ರಫೇಲ್ ಹಗರಣದ ದಾಖಲೆ ಕೇಳಿದರೆ ಕೊಡುತ್ತಾರಾ’ ಎಂದು ಪ್ರಶ್ನಿಸಿದರು.

‘ಧಾರ್ಮಿಕ ಕ್ಷೇತ್ರದಲ್ಲಿರುವ ಸ್ವಾಮೀಜಿಗಳು ಕಾಯ್ದೆಗಳ ಕುರಿತು ಚಕಾರ ಎತ್ತುತ್ತಿಲ್ಲ. ಅವರ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಾರೆ ಹೊರತು ನಿಮ್ಮ ಬೆಂಬಲಕ್ಕೆ ಯಾರಾದರು ನಿಂತಿದ್ದಾರಾ? ಖಂಡಿತ ಇಲ್ಲ. ಬೇಕಾದರೆ ಮುಖ್ಯಮಂತ್ರಿಗೆ ಗುಟುರು ಹಾಕಿ ಧಾರ್ಮಿಕ ರಂಗದವರು ದಬ್ಬಾಳಿಕೆ ನಡೆಸುತ್ತಾರೆ. ಆದ್ದರಿಂದ ನಿಮಗೆ ತೊಂದರೆಯಾದರೆ ನೀವೇ ಮೆಟ್ಟಿ ನಿಲ್ಲಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿನ ಕೈಗಾರಿಕೆಗಳು ಮುಚ್ಚಲ್ಪಡುತ್ತಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆ ತಡೆಯಲು ಸಾಧ್ಯವಾಗಿಲ್ಲ. ಮಾತುಕೊಟ್ಟಂತೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ಬಿಎಸ್‌ಎನ್‌ಲ್, ರೈಲ್ವೆ, ಏರ್ ಇಂಡಿಯಾ ಮಾರಾಟಕ್ಕಿಟ್ಟಿದ್ದಾರೆ. ಎಲ್‌ಐಸಿ ಷೇರುಗಳ ಕೆಲ ಭಾಗವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಬಡವರ್ಗದ ಹಾಗೂ ಯಾವೊಬ್ಬ ಸಾಮಾನ್ಯ ಪ್ರಜೆಯ ತಲಾ ಆದಾಯವೂ ಏರಿಕೆಯಾಗಿಲ್ಲ. ನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿ ಹೇಳಿದ ಅಚ್ಛೆ ದಿನ್ ಇದೇನಾ’ ಎಂದು ವ್ಯಂಗ್ಯವಾಡಿದರು.

‘ಸಿಎಎ, ಎನ್ಆರ್‌ಸಿ, ಎನ್‌ಪಿಆರ್ ಈ ಮೂರು ಕಾಯ್ದೆಗಳ ವಿರುದ್ಧ ಹೋರಾಟದ ಕಾವು ಮುಂದುವರೆಯಬೇಕು. ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಗಾಂಧಿ ಅನುಯಾಯಿಗಳಾದ ನಾವೆಲ್ಲರೂ ಶಾಂತಿಯುತ ಪ್ರತಿಭಟನೆ ಮೂಲಕ ದ್ವೇಷ ಅಳಿಸಿ, ಪ್ರೀತಿ ಉಳಿಸುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.

ಎಐಡಿವೈಒ ಅಖಿಲ ಭಾರತ ಸಂಘಟನೆಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ‘ಕಾಂಗ್ರೆಸ್, ಕಮ್ಯುನಿಸ್ಟ್ ವರ್ಸಸ್ ಬಿಜೆಪಿ ಹಾಗೂ ಹಿಂದೂ ವರ್ಸಸ್ ಮುಸ್ಲಿಂ ಎನ್ನುವಷ್ಟರ ಮಟ್ಟಿಗೆ ಕಾಯ್ದೆಗಳನ್ನು ಮುಂದಿಟ್ಟುಕೊಂಡು ದೇಶದ ಚುಕ್ಕಾಣಿ ಹಿಡಿದವರು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.

‘ದೇಶದ ಬಹುತೇಕ ಎಲೆಕ್ಟ್ರಾನಿಕ್ ಮೀಡಿಯಾಗಳು ಬಿಜೆಪಿ ಪರವಾಗಿವೆ. ಕಾಯ್ದೆಗಳಿಂದ ಉಂಟಾಗುವ ತೊಂದರೆ ಕುರಿತು ಬಿತ್ತರಿಸುವ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಜನರಲ್ಲಿ ಅರಿವು ಮೂಡಿಸಲು ಮನೆ ಮನೆ ತಲುಪುವ ಕೆಲಸವಾಗಬೇಕು. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲಬಾರದು’ ಎಂದರು.

ಪ್ರಗತಿಪರ ಚಿಂತಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಜೆ. ಯಾದವರೆಡ್ಡಿ, ವಕೀಲ ಬಿ.ಕೆ. ರಹಮತ್‌ವುಲ್ಲಾ, ರೈತ ಮುಖಂಡ ಬಸ್ತಿಹಳ್ಳಿ ಸುರೇಶ್‌ಬಾಬು, ಕಾರ್ಮಿಕ ಮುಖಂಡ ಸಿ.ಕೆ. ಗೌಸ್‌ಪೀರ್, ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಎಚ್. ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT