ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಚಿವ ಸ್ಥಾನಕ್ಕೆ ತೆರೆಮರೆ ಲಾಬಿ

ಐವರು ಬಿಜೆಪಿ ಶಾಸಕರಲ್ಲಿದೆ ಸಚಿವರಾಗುವ ಬಯಕೆ
Last Updated 28 ಜುಲೈ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ಸಾಧ್ಯತೆ ಇದೆ. ಐವರು ಬಿಜೆಪಿ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಮೊಳಕಾಲ್ಮುರು ಕ್ಷೇತ್ರ ಪ್ರತಿನಿಧಿಸುತ್ತಿರುವ ಬಿ.ಶ್ರೀರಾಮುಲು ಸಚಿವರಾಗಿದ್ದರು. ಆರೋಗ್ಯ ಹಾಗೂ ಸಮಾಜ ಕಲ್ಯಾಣ ಖಾತೆಯನ್ನು ನಿರ್ವಹಿಸಿದ್ದಾರೆ. ನೂತನವಾಗಿ ರಚನೆಯಾಗುತ್ತಿರುವ ಸರ್ಕಾರದಲ್ಲಿ ಇವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ. ಇವರು ಬಳ್ಳಾರಿಯ ಮನೆಗೆ ಬುಧವಾರ ಬೆಂಗಳೂರಿನಿಂದ ಮರಳಿದ್ದಾರೆ.

ಚಿತ್ರದುರ್ಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಚಿವ ಸಂಪುಟದ ಸದಸ್ಯರಾಗುವ ನಿರೀಕ್ಷೆಯಲ್ಲಿದ್ದಾರೆ. ಇವರೆಲ್ಲರೂ ಬೆಂಗಳೂರಿನಲ್ಲಿದ್ದು, ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ.

2018ರ ವಿಧಾನಸಭಾ ಚುನಾವಣೆಯ ಬಳಿಕ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಕಾಣಿಸಿಕೊಂಡಿದೆ. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಲೋಕಸಭೆ, ವಿಧಾನಪರಿಷತ್ತಿಗೆ ನಡೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿಗೆ ಅತಿ ಹೆಚ್ಚು ಮತಗಳು ಸಿಕ್ಕಿವೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಗೆ ಭಾರಿ ಜನಬೆಂಬಲ ಸಿಕ್ಕಿದೆ. ಇದು ಸಹಜವಾಗಿಯೇ ಬಿಜೆಪಿಯ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಬಿ.ಶ್ರೀರಾಮುಲು ಮೂಲತಃ ಬಳ್ಳಾರಿಯವರು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಇವರು, ಜಿಲ್ಲಾ ಪ್ರಾತಿನಿಧ್ಯದಲ್ಲಿ ಚಿತ್ರದುರ್ಗ ಶಾಸಕರಿಗೆ ತೊಡಕಾಗಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ನಾಯಕ ಸಮುದಾಯದ ಮುಖಂಡರೂ ಆಗಿರುವ ಶ್ರೀರಾಮುಲು ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಇನ್ನಾರಿಗೆ ಅದೃಷ್ಟ ಒಲಿಯಬಹುದು ಎಂಬ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಜಿ.ಎಚ್‌.ತಿಪ್ಪಾರೆಡ್ಡಿ ಹಾಗೂ ಎಂ.ಚಂದ್ರಪ್ಪ ಬಿಜೆಪಿಯ ಹಿರಿಯ ಶಾಸಕರು. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಹಾಗೂ ಸಂಪುಟ ವಿಸ್ತರಣೆಯ ಸಮಯದಲ್ಲಿ ಇಬ್ಬರ ಹೆಸರು ಮುನ್ನೆಲೆಗೆ ಬಂದಿದ್ದವು. ಸಚಿವ ಸ್ಥಾನ ನೀಡದ ಬಿಜೆಪಿ, ಎಂ.ಚಂದ್ರಪ್ಪ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ತಿಪ್ಪಾರೆಡ್ಡಿ ತಿರಸ್ಕರಿಸಿದ್ದರು. ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ದಶಕದ ಹಿಂದೆಯೇ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸಿದ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರ ಮೇಲೆ ಮುನಿಸಿಕೊಂಡಿದ್ದ ಶಾಸಕರು, ಆಗಾಗ ಬೇಸರ ತೋರಿಸಿಕೊಂಡಿದ್ದರು. ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಹೈಕಮಾಂಡ್‌ ಇವರನ್ನು ಪರಿಗಣಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಅವರು ಮಹಿಳಾ ಕೋಟಾದಲ್ಲಿ ಸಚಿವ ಸ್ಥಾನ ಕೇಳಿದ್ದರು. ಶಶಕಲಾ ಜೊಲ್ಲೆ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದರಿಂದ ಇವರಿಗೆ ಅವಕಾಶ ಕೈತಪ್ಪಿತ್ತು. ಮೊಟ್ಟೆ ಟೆಂಡರ್‌ನಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಜೊಲ್ಲೆ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಹೀಗಾಗಿ, ಪೂರ್ಣಿಮಾ ಅವರ ಹೆಸರು ಮಂಚೂಣಿಗೆ ಬಂದಿದೆ. ಯಾದವ ಸಮುದಾಯ ಪ್ರತಿನಿಧಿಸುತ್ತಿರುವ ಶಾಸಕಿಗೆ ಹಿಂದುಳಿದ ವರ್ಗಗಳ ಕೋಟಾದಲ್ಲಿ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಪಕ್ಷ ಸಂಘಟನೆಗೆ ಅನುಕೂಲ’

ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಯ ಶಾಸಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದರೆ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ. ಇನ್ನಷ್ಟು ಅಭಿವೃದ್ಧಿಯನ್ನು ನಿರೀಕ್ಷಿಸಬಹುದಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಅಭಿಪ್ರಾಯಪಟ್ಟರು.

‘ಒಂದೂವರೆ ವರ್ಷದ ಬಳಿಕ ವಿಧಾನಸಭಾ ಚುನಾವಣೆ ಎದುರಾಗಲಿದೆ. ಇದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕಿದೆ. ಎಲ್ಲ ಚಟುವಟಿಕೆಗಳನ್ನು ನಾಯಕರು ಗಮನಿಸುತ್ತಿದ್ದಾರೆ. ವಲಯ, ಪ್ರದೇಶ ಹಾಗೂ ಜಾತಿವಾರು ಪ್ರಾತಿನಿಧ್ಯ ನೀಡಲಾಗುತ್ತದೆ. ನೂತನ ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT