ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ಕ್ಕೆ ಬಿಜೆಪಿ ಜನಸೇವಕ ಸಮಾವೇಶ

ಉಪಮುಖ್ಯಮಂತ್ರಿಗಳಾದ ಅಶ್ವತ್ಥ್‌ ನಾರಾಯಣ, ಲಕ್ಷ್ಮಣ ಸವದಿ ಭಾಗಿ
Last Updated 8 ಜನವರಿ 2021, 12:14 IST
ಅಕ್ಷರ ಗಾತ್ರ

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾಗಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸುವ ಉದ್ದೇಶದಿಂದ ‘ಜನಸೇವಕ ಸಮಾವೇಶ’ವನ್ನು ಜ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ತಿಳಿಸಿದರು.

‘ಕಮ್ಮಾ ರೆಡ್ಡಿ ಸಮುದಾಯ ಭವನದಲ್ಲಿ ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭವಾಗಲಿದೆ. ಉಪಮುಖ್ಯಮಂತ್ರಿಗಳಾದ ಅಶ್ವತ್ಥ್‌ ನಾರಾಯಣ ಹಾಗೂ ಲಕ್ಷ್ಮಣ ಸವದಿ ಪಾಲ್ಗೊಳ್ಳಲಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ವಿವೇಕಾನಂದ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌ ಭಾಗವಹಿಸಲಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆ ಮೀರಿದ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯ 3,421 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ 1,964 ಸದಸ್ಯರು ಬಿಜೆಪಿ ಬೆಂಬಲಿತರು. 127 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುತ್ತೇವೆ. ಮೀಸಲಾತಿ ನಿಗದಿಯಾದ ಬಳಿಕ ಇನ್ನೂ ಹೆಚ್ಚಿನ ಪಂಚಾಯಿತಿಗಳು ಬಿಜೆಪಿ ತೆಕ್ಕೆಗೆ ಬರಲಿವೆ’ ಎಂದರು.

‘ಗ್ರಾಮ ಸ್ವರಾಜ್ ಸಮಾವೇಶದಿಂದ ಪಕ್ಷಕ್ಕೆ ಅನುಕೂಲವಾಯಿತು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ರಾಜ್ಯದ ಎಲ್ಲೆಡೆ ಗೆದ್ದಿರುವ ಪಕ್ಷ ಬೆಂಬಲಿತ ಸದಸ್ಯರನ್ನು ಅಭಿನಂದಿಸಲು ಬಿಜೆಪಿ ತೀರ್ಮಾನಿಸಿದೆ. ಐದು ತಂಡಗಳು ರಾಜ್ಯದಲ್ಲಿ ಪ್ರವಾಸ ಮಾಡಲಿವೆ. ಉಪಮುಖ್ಯಮಂತ್ರಿಗಳ ನೇತೃತ್ವದ ತಂಡ ಚಿತ್ರದುರ್ಗಕ್ಕೆ ಬರಲಿದೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷ ರೂಪಿಸಿದ ಕಾರ್ಯತಂತ್ರ ಯಶಸ್ವಿಯಾಗಿದೆ. ಸಮಾವೇಶಕ್ಕೆ ಸುಮಾರು ಐದು ಸಾವಿರ ಜನರು ಸೇರುವ ನಿರೀಕ್ಷೆ ಇದೆ. ನಗರ ಸ್ಥಳೀಯ ಸಂಸ್ಥೆಯಲ್ಲಿ ವಿಜೇತರಾದ ಪಕ್ಷದ ಅಭ್ಯರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ಉತ್ತಮ ಆಡಳಿತ ನಡೆಸುವ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ’ ಎಂದು ವಿವರಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಬಳ್ಳಾರಿ ವಿಭಾಗೀಯ ಪ್ರಭಾರಿ ಸಿದ್ದೇಶ್ ಯಾದವ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಸುರೇಶ್, ಜಯಪಾಲ್, ಮುಖಂಡರಾದ ನಾಗರಾಜ್ ಬೇದ್ರೆ, ಶಶಿಧರ್, ದಗ್ಗೆ ಶಿವಪ್ರಕಾಶ್, ಶಿವಣ್ಣಾಚಾರ್ ಇದ್ದರು.

***

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದವರ ಬಗ್ಗೆ ಕಾಂಗ್ರೆಸ್‌ ತಪ್ಪು ಮಾಹಿತಿ ನೀಡುತ್ತಿದೆ. ಪಕ್ಷ ಬೆಂಬಲಿತ ಅಭ್ಯರ್ಥಿಗಳು ಪ್ರವಾಸಕ್ಕೆ ತೆರಳಿಲ್ಲ. ಸಮಾವೇಶದಲ್ಲಿ ಎಲ್ಲರೂ ಭಾಗಿಯಾಗುತ್ತಾರೆ.

–ಎ.ಮುರುಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT