ಶನಿವಾರ, ಜನವರಿ 16, 2021
24 °C
ಪ್ರಶಿಕ್ಷಣ ವರ್ಗ ಕಾರ್ಯಾಗಾರದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ಬಿಜೆಪಿ ಹೆಮ್ಮರವಾಗಿದೆ: ಮತ್ತಷ್ಟು ಬಲಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ದೇಶದೊಳಗೆ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಆದರೂ ಮತ್ತಷ್ಟು ಬಲಪಡಿಸಬೇಕಾದ ಜವಾಬ್ದಾರಿ ಪಕ್ಷದಲ್ಲಿರುವ ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲದಿಂದ ಹೊರವಲಯದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಬಿಜೆಪಿಗೆ ದೇಶ ಮುಖ್ಯವೇ ಹೊರತು ಅಧಿಕಾರವಲ್ಲ. ಆದರೆ, ಸ್ವಾತಂತ್ರ್ಯಾ ನಂತರ ಒಂದು ಮನೆತನಕ್ಕೆ ಸೀಮಿತವಾಗಿರುವ ಕಾಂಗ್ರೆಸ್‌ಗೆ ಅಧಿಕಾರ ಇಲ್ಲದಿರುವುದೇ ದೊಡ್ಡ ಚಿಂತೆಯಾಗಿದೆ. ಹೀಗಾಗಿ, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಕಾಲ ಕಳೆಯುತ್ತಿದ್ದಾರೆ. ನಮಗೂ ಅವರಿಗೂ ಇರುವಂತಹ ಅಜಗಜಾಂತರ ವ್ಯತ್ಯಾಸವಿದು’ ಎಂದರು.

‘ಸ್ವಾತಂತ್ರ ಪಡೆಯಲು ಸ್ಥಾಪನೆಗೊಂಡ ಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಲು ಪಕ್ಷವಾಗಿ ಪರಿವರ್ತನೆಯಾಯಿತು. ಆದರೆ, ಆ ಪಕ್ಷಕ್ಕೀಗ ದೇಶದ ಜನರು ಮನ್ನಣೆ ನೀಡುತ್ತಿಲ್ಲ. ಪ್ರಸ್ತುತ ಬಿಜೆಪಿಯತ್ತ ಜನರ ಒಲವು ಹೆಚ್ಚುತ್ತಿದೆ. ಇಂತಹ ಉತ್ತಮ ಸಂದರ್ಭದಲ್ಲಿ ಬಿಜೆಪಿಯ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

‘ಶ್ಯಾಂಪ್ರಸಾದ್ ಮುಖರ್ಜಿ, ದೀನ್‌ ದಯಾಳ್ ಉಪಾಧ್ಯಾಯ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ, ಮಾಜಿ ಉಪಪ್ರಧಾನಿ ಆಡ್ವಾಣಿ ಅವರು ಸಾವಿರಾರು ಕಿ.ಮೀ. ನಡೆದಾಡಿ ಸಂಘಟಿಸಿದ್ದಾರೆ. ಅನೇಕ ಹಿರಿಯರ ತ್ಯಾಗ, ಬಲಿದಾನ, ತತ್ವ-ಸಿದ್ಧಾಂತಗಳ ಮೇಲೆ ಪಕ್ಷ ನಿಂತಿದೆ. ಪ್ರಧಾನಿ ಮೋದಿ ಅವರು ಆಕ್ರಮಿತ ಕಾಶ್ಮೀರ ಪ್ರದೇಶವನ್ನು ವಶಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ. ಇಂತಹ ಪಕ್ಷದಲ್ಲಿರುವುದೇ ಹೆಮ್ಮೆಯ ಸಂಗತಿ ಅಂದುಕೊಂಡು ಪಕ್ಷಕ್ಕಾಗಿ ದುಡಿಯೋಣ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ‘ಪಕ್ಷದ ನಾಯಕರು ತಿಳಿಸುವ ವಿಚಾರಗಳನ್ನು ಬೂತ್‌ಮಟ್ಟಕ್ಕೆ ತಲುಪಿಸುವುದೇ ಪ್ರಶಿಕ್ಷಣ ವರ್ಗದ ಉದ್ದೇಶ. ಈ ಪ್ರಕ್ರಿಯೆ ಬೇರೆ ಪಕ್ಷಗಳಲ್ಲಿ ನಡೆಯುವುದಿಲ್ಲ. ಪಕ್ಷ ಸಂಘಟನೆಗಾಗಿ ಕಾರ್ಯಕರ್ತರು ಸಮಯ ಮೀಸಲಿಡಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಎಂ.ಸುರೇಶ್, ನಂದಿ ನಾಗರಾಜ್, ಸಿದ್ದೇಶ್ ಯಾದವ್, ಕಲ್ಲಂ ಸೀತಾರಾಮರೆಡ್ಡಿ, ಭೀಮಸಮುದ್ರದ ಅನಿತ್, ವೀರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಟಿ.ಗುರುಮೂರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.