ಮಂಗಳವಾರ, ಏಪ್ರಿಲ್ 20, 2021
29 °C
ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ

ಸೂಕ್ಷ್ಮ ಬರಹಗಾರರು ಅಸಮಾನತೆ ಸಹಿಸುವುದಿಲ್ಲ: ಪ್ರೊ.ಡಿ. ಅಂಜಿನಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಸೂಕ್ಷ್ಮ ನೆಲೆ ಇರುವ ಬರಹಗಾರರು ಮಾತ್ರ ಶೋಷಣೆ, ಹಸಿವು, ಬಡತನ, ನೋವು, ಅಸಮಾನತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಓದುಗರನ್ನು ತಲುಪಲು ಪ್ರಯತ್ನಿಸುತ್ತಾರೆ’ ಎಂದು ಚಳ್ಳಕೆರೆಯ ಎಚ್‌ಪಿಪಿಸಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಡಿ. ಅಂಜಿನಪ್ಪ ಹೇಳಿದರು.

ಸರಸ್ವತಿ ಕಾನೂನು ಕಾಲೇಜು, ಮುಕ್ತ ವೇದಿಕೆಯಿಂದ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜಿ.ಎಸ್. ಉಜ್ಜನಪ್ಪ ಅವರ ‘ಗೌನಳ್ಳಿ ಎಂಬ ಗ್ರಾಮ ಭಾರತ’ ಮತ್ತು ‘ನೆನಪೆಂಬ ನಿಧಿ’ ಪುಸ್ತಕಗಳ ಕುರಿತು ಮಾತನಾಡಿದರು.

‘ಹಿರಿಯೂರು ಸೀಮೆಯ ದೇಸಿಯ ಸೊಗಡನ್ನು ಕಟ್ಟಿಕೊಡುವ ಪ್ರಯತ್ನ ಈ ಎರಡು ಕೃತಿಗಳಲ್ಲಿ ಅಡಗಿದೆ. ಗೌನಹಳ್ಳಿ ಮೂಲಕವೇ ಲೋಕವನ್ನು ನೋಡುವ, ಅದರೊಳಗಿನ ನೈಜ ಚಿತ್ರಣವನ್ನು ಪರಿಚಯಿಸುವ ಸೃಜನಶೀಲತೆಯನ್ನು ಕೃತಿಕಾರ ಕರಗತ ಮಾಡಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದ ಎಲ್ಲ ಗ್ರಾಮಗಳು ನೋಡಲು ಒಂದೇ ರೀತಿ ಕಂಡರೂ ಅದರೊಳಗೆ ಪ್ರವೇಶಿಸುತ್ತಿದ್ದಂತೆ ಬೆಂಕಿಯ ಉಂಡೆಗಳು ಅಸಮಾನತೆಯ ರೂಪದಲ್ಲಿ ಕಾಣಿಸುತ್ತವೆ. ಮೇಲ್ನೋಟಕ್ಕೆ ಜಾತ್ಯತೀತವಾಗಿ ಬದುಕುತ್ತಿದ್ದರು ಬಡವ–ಬಲ್ಲಿದರ ಮಧ್ಯೆ ಸಾಕಷ್ಟು ಅಂತರ ಈಗಲೂ ಮುಂದುವರೆದಿದೆ. ಇವುಗಳನ್ನು ಘಟನೆಗಳ ಮೂಲಕ ಕಟ್ಟಿಕೊಡುವಲ್ಲಿ ಕೃತಿಗಾರರು ಸಫಲರಾಗಿದ್ದಾರೆ’ ಎಂದರು.

‘ದುಡ್ಡು ಸೇರಿ ಇತರೆ ಯಾವುದೇ ರೀತಿಯ ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಇತರರ ನೋವು, ಸಮಸ್ಯೆಗೆ ಸ್ಪಂದಿಸುವ ಮತ್ತು ಉತ್ತಮ ಮಾತುಗಳೊಂದಿಗೆ ಧೈರ್ಯ ತುಂಬುವ ಮಾನವೀಯತೆ, ಭಾವನಾತ್ಮಕತೆ ಬೆಳೆಸಿಕೊಳ್ಳಿ ಎಂಬುದು ಈ ಕೃತಿಗಳ ಮೂಲ ಕೇಂದ್ರವಾಗಿವೆ. ಸಕಲ ಜೀವಿಗಳನ್ನು ಪ್ರೀತಿಸುವ ಕರುಳಿನ ಬಳ್ಳಿಯಂತೆ ಹೊರಹೊಮ್ಮಿರುವ ಒಂದೊಂದು ಕಥೆಗಳು ಘಟನಾತ್ಮಕ ಲೇಖನಗಳಾಗಿ ಹೊರಹೊಮ್ಮಿವೆ’ ಎಂದು ಬಣ್ಣಿಸಿದರು.

‘ವೈಯಕ್ತಿಕ ಹಕ್ಕು ಕಸಿದುಕೊಳ್ಳುವಂತಿಲ್ಲ’

‘ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯವಿದೆ. ಸಂವಿಧಾನ ಹಕ್ಕುಗಳನ್ನು ಕೂಡ ನೀಡಿದೆ. ಆದ್ದರಿಂದ ಯಾರ ವೈಯಕ್ತಿಕ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಬಾರದು’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಸಲಹೆ ನೀಡಿದರು.

‘ನೆಲ, ಜಲ, ಭಾಷೆ ಹೆಸರಿನಲ್ಲಿ ಹೋರಾಟಗಳು ನಡೆದಿವೆ. ಪ್ರಸ್ತುತ ನಡೆಯುತ್ತಲೂ ಇವೆ. ಈ ವಿಚಾರದಲ್ಲಿ ನ್ಯಾಯಯುತ, ಕಾನೂನಾತ್ಮಕವಾಗಿ ಹಕ್ಕು ಪಡೆಯುವುದರಲ್ಲಿ ತಪ್ಪಿಲ್ಲ. ಆದರೆ, ಬಲವಂಥದಿಂದ ಕಸಿಯುವ ಪ್ರಯತ್ನ ಸಲ್ಲದು’ ಎಂದು ಹೇಳಿದರು.

‘ಭಾರತ ಸ್ವಾತಂತ್ರ್ಯ ಪಡೆದು 74ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿವೆ. ರಾಷ್ಟ್ರದ ಸಂಪತ್ತು ಮತ್ತು ಆಸ್ತಿಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ’ ಎಂದರು.

ಇದೇ ವೇಳೆ ಡಾ. ಚನ್ನವೀರೇಗೌಡರನ್ನು ಸನ್ಮಾನಿಸಲಾಯಿತು. ಸಾಹಿತಿ ಪ್ರೊ.ಸಿ.ವಿ. ಪಾಟೀಲ ಅವರು ಡಾ.ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಅವರ ‘ಒಳದನಿ’, ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್‌. ಚಂದ್ರಶೇಖರ್ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಅವರ ‘ವರ್ತಮಾನ’ ಕೃತಿಗಳ ಕುರಿತು ಮಾತನಾಡಿದರು.

ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎಸ್. ಸುಧಾದೇವಿ, ಮುಕ್ತ ವೇದಿಕೆ ಸಂಚಾಲಕ ಪ್ರೊ.ಟಿ.ಎಚ್. ಕೃಷ್ಣಮೂರ್ತಿ, ಆಕಾಶವಾಣಿಯ ಅರಕಲಗೂಡು ವಿ. ಮಧುಸೂದನ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.