ಶುಕ್ರವಾರ, ಫೆಬ್ರವರಿ 21, 2020
17 °C

ಬಜೆಟ್ 2020 | ಚಿತ್ರದುಗ್ರ ಜನರ ಅಭಿಪ್ರಾಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿತ್ರದುರ್ಗ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಸಾಧಕ ಬಾಧಕಗಳ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಆರಂಭವಾಗಿದೆ. ಬಜೆಟ್‌ ಬಗೆಗಿನ ನಿರೀಕ್ಷೆಗಳು ಹಾಗೂ ಘೋಷಣೆ ಮಾಡಲಾದ ಯೋಜನೆಗಳ ಬಗ್ಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಜನರು, ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಮುಖಂಡರ ಅಭಿಪ್ರಾಯಗಳು ಹೀಗಿವೆ.

ರಾಜ್ಯಕ್ಕೆ ವಿಶೇಷ ಕೊಡುಗೆ ಕಾಣುತ್ತಿಲ್ಲ

ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ ಹಾಗೂ ಜಿಡಿಪಿ ಬೆಳವಣಿಗೆ ದರವನ್ನು ನಿರ್ವಹಿಸಲು ಮಾಡಿರುವ ಕ್ರಮಗಳು ವಿಶೇಷವಾಗೇನು ಇಲ್ಲ. ಕೃಷಿ ಮತ್ತು ಕಾರ್ಪೊರೇಟ್‌ ವಲಯಕ್ಕೆ ಒತ್ತು ಕೊಡಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ರಫ್ತು ಕ್ರಮಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಹಸಿರು ಕ್ರಾಂತಿ, ಗೃಹ ನಿರ್ಮಾಣ, ಬೆಳೆ ವಿಮೆ, ಗ್ರಾಮೀಣ ರಸ್ತೆ ಸೇರಿ ಹಲವು ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ರಿಯಾಯಿತಿ, ಸಹಕಾರಿ ಸಂಘಗಳಿಗೆ ಆದಾಯ ತೆರಿಗೆ ಕಡಿತ ಮಾಡಿರುವುದು ಸ್ವಾಗತಾರ್ಹ. ಒಂದೇ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಅನುಕೂಲ ಎನ್ನುವ ಮಾತು ಸತ್ಯ ಮಾಡುವ ಯೋಜನೆಗಳು ಕಾಣುತ್ತಿಲ್ಲ.

–ಜಿ.ಎನ್‌.ಮಲ್ಲಿಕಾರ್ಜುನಪ್ಪ, ಆರ್ಥಿಕ ವಿಶ್ಲೇಷಕ

***

ಜನಪರ ಬಜೆಟ್‌

ಆರ್ಥಿಕ ಹಿಂಜರಿತ ತಡೆದು ಜಿಡಿಪಿ ದರ ಬೆಳವಣಿಗೆಗೆ ಬಜೆಟ್‌ನಲ್ಲಿ ಒತ್ತು ಸಿಕ್ಕಿದೆ. ಎಲ್ಲ ಜಿಲ್ಲೆಗೂ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದು ಸ್ವಾಗತಾರ್ಹ. ರೈಲ್ವೆ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಹಾಗೂ ರೈಲ್ವೆ ಅಭಿವೃದ್ಧಿಗೆ ಒತ್ತು ಸಿಕ್ಕಿದ್ದು ಜನರಿಗೆ ಅನುಕೂಲವಾಗಿದೆ. ಆದಾಯ ತೆರಿಗೆ ಕಡಿತಕ್ಕೆ ಇದ್ದ ಮಾನದಂಡಗಳನ್ನು ಬದಲಾವಣೆ ಮಾಡಿದ್ದು ಮಧ್ಯಮ ವರ್ಗದಲ್ಲಿ ಹರ್ಷ ಮೂಡಿಸಿದೆ.

–ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕರು

***

ಜಿಡಿಪಿ ಕ್ಷೀಣಿಸುವ ಸಾಧ್ಯತೆ

ಬಜೆಟ್‌ನಲ್ಲಿ ಘೋಷಣೆಯಾದ ಎಲ್ಲ ಕಾರ್ಯಕ್ರಮಗಳು ಅನುಷ್ಠಾನಗೊಂಡಾಗ ಮಾತ್ರ ಆಶಾದಾಯಕವಾಗಲಿದೆ. ಇಲ್ಲವಾದರೆ ಜಿಡಿಪಿ ಇನ್ನಷ್ಟು ಕ್ಷೀಣಿಸುವ ಸಾಧ್ಯತೆ ಇದೆ.

ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ರಾಷ್ಟ್ರೀಯ ವಿಪತ್ತು ಸುಂಕದಿಂದ ದಿನಬಳಕೆಯ ವಸ್ತುಗಳನ್ನು ತುಟ್ಟಿ ಆಗಲಿದೆ. ಆರೋಗ್ಯ ಕ್ಷೇತ್ರ ಇನ್ನಷ್ಟು ದುಬಾರಿ ಆಗಲಿದ್ದು, ಖಾಸಗೀಕರಣಕ್ಕೆ ಇರುವ ಅವಕಾಶ ಹೆಚ್ಚಾಗಿದೆ. ಜಿಎಸ್‌ಟಿಯಲ್ಲಿ ಅಲ್ಪಮಟ್ಟಿನ ಸುಧಾರಣೆ ತರಲಾಗಿದೆ. ಬ್ಯಾಂಕ್‌ ಠೇವಣಿದಾರರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ಬ್ಯಾಂಕುಗಳ ಪುನಃಶ್ಚೇತನಕ್ಕೆ 16 ಅಂಶಗಳ ಕಾರ್ಯಕ್ರಮ ಜಾರಿಗೆ ತರಲಾಗಿದೆ.

–ಡಾ.ಕೆ.ಕೆ.ಕಾಮಾನಿ, ಆರ್ಥಿಕ ವಿಶ್ಲೇಷಕ

***

ಉದ್ಯೋಗ ಸೃಷ್ಟಿಗೆ ಒತ್ತು ಸಿಕ್ಕಿಲ್ಲ

ಕ್ಷೀಣಿಸುತ್ತಿರುವ ಕೃಷಿ ವಲಯ, ಮಹಿಳೆ ಮತ್ತು ಮಕ್ಕಳ ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಹಲವು ವಿಷಯಗಳಿಗೆ ಬಜೆಟ್‌ನಲ್ಲಿ ಪ್ರಾಮುಖ್ಯತೆ ಸಿಕ್ಕಿದೆ. ಆದಾಯ ತೆರಿಗೆ ಪಾವತಿಸುವವರಿಗೆ ಅನುಕೂಲವಾಗಿದೆ.

ಆದರೆ, ವಿತ್ತೀಯ ಕೊರತೆ ಸರಿದೂಗಿಸುವ ಬಗ್ಗೆ ಸರಿಯಾದ ಸ್ಪಷ್ಟತೆ ಕಾಣುತ್ತಿಲ್ಲ. ಉದ್ಯೋಗ ಸೃಷ್ಟಿ ಹಾಗೂ ಉದ್ಯೋಗಾವಕಾಶ ಹೆಚ್ಚುಗೊಳಿಸುವ ವಲಯಕ್ಕೆ ಸರಿಯಾದ ಆದ್ಯತೆ ಸಿಕ್ಕಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನೀಡಿದ ಅನುದಾನ ಕಡಿಮೆ. ಇಂಧನ, ಹಾಲು ಸೇರಿ ಬಹು ಜನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನರ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

–ಪ್ರೊ.ಜಿ.ಪರಮೇಶ್ವರಪ್ಪ, ಚಿಂತಕ

***

ಸೌರಶಕ್ತಿ ಬಳಕೆಗೆ ಮೆಚ್ಚುಗೆ

ಪ್ರಕೃತಿದತ್ತವಾಗಿ ಸಿಗುವ ಸೌರಶಕ್ತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಮುಂದಡಿ ಇಟ್ಟಿರುವುದು ಬಜೆಟ್‌ನಲ್ಲಿ ಗೋಚರಿಸುತ್ತಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಹೊರೆಯನ್ನು ತಗ್ಗಿಸಲು ಇದರಿಂದ ಸಾಧ್ಯವಾಗಲಿದೆ. ಜನೌಷಧ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆದು ಕಡಿಮೆ ಬೆಲೆಗೆ ಔಷಧ ಸಿಗುವಂತೆ ಮಾಡುತ್ತಿರುವುದು ಶ್ಲಾಘನೀಯ. ಆದಾಯ ತೆರಿಗೆ ಪಾವತಿಸುವವರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ.

–ಶ್ಯಾಮಲಾ ಶಿವಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ, ಬಿಜೆಪಿ

***

ರೈತರ ನಿರ್ಲಕ್ಷ್ಯ

ಕೖಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಹಾಗೂ ವೈಜ್ಞಾನಿಕ ದರ ನೀಡದ ಹೊರತು ಅನ್ನದಾತರ ಅಭಿವೖದ್ಧಿ ಅಸಾಧ್ಯ. ತೋಟಗಾರಿಕೆ ಬೆಳೆಗಾರರು ವಿಮಾನದಲ್ಲಿ ಹೋಗಿ ಉತ್ಪನ್ನ ಮಾರಾಟ ಮಾಡುವ ಅವಕಾಶಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ವಿಮಾನ ನಿಲ್ದಾಣಗಳು ದೇಶದಲ್ಲಿ ಎಷ್ಟಿವೆ? ಅವು ರೈತರ ಕೈಗೆಟಕುವ ದರದಲ್ಲಿ ಲಭ್ಯ ಇವೆಯೇ ಎಂಬುದನ್ನು ವಿತ್ತ ಸಚಿವರು ಮನಗಾಣಬೇಕಿತ್ತು.

ಎರಡು ಲಕ್ಷ ರೈತರಿಗೆ ಸೋಲಾರ್ ಪಂಪ್‌ಸೆಟ್‌ ಹಾಗೂ ವಿದ್ಯುತ್ ಉತ್ಪಾದನೆಗೆ ಸೋಲಾರ್ ಘಟಕ ಸ್ಥಾ‍‍ಪಿಸಲು ರೈತರಿಗೂ ನೆರವು ನೀಡಲಾಗುವುದೆಂದು ಹೇಳಲಾಗಿದೆ. ಇದು ಎಷ್ಟರ ಮಟ್ಟಿಗೆ ಸಾಧುವೆಂದು ಗೊತ್ತಿಲ್ಲ. ಜೀವ ವಿಮಾ ನಿಗಮ (ಎಲ್‌ಐಸಿ) ಮಾರಾಟಕ್ಕೆ ಕೈಹಾಕಿದ್ದು ಅಘಾತಕಾರಿ ಸಂಗತಿ.
–ಟಿ.ನುಲೇನೂರು ಎಂ.ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)