ಭಾನುವಾರ, ಸೆಪ್ಟೆಂಬರ್ 19, 2021
24 °C

ಚಿತ್ರದುರ್ಗ: ಖಾಸಗಿ ಬಸ್‌ ಸೇವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಸಂಚಾರ ಸ್ಥಗಿತಗೊಳಿಸಿದ್ದ ಖಾಸಗಿ ಬಸ್‌ಗಳು ಸೋಮವಾರ ಸೇವೆ ಆರಂಭಿಸಿವೆ. ಮೊದಲ ದಿನ 10ಕ್ಕೂ ಹೆಚ್ಚು ಬಸ್‌ಗಳು ಜಿಲ್ಲೆಯ ಹಲವು ಮಾರ್ಗಗಳಲ್ಲಿ ಸಂಚರಿಸಿವೆ.

ಅ.5ರಿಂದ ಇನ್ನಷ್ಟು ಬಸ್‌ಗಳು ರಸ್ತೆಗೆ ಇಳಿಯಲಿವೆ. ಖಾಸಗಿ ಬಸ್‌ ಮಾಲಿಕರ ಸಂಘ ಪ್ರಯಾಣಿಕರಿಗೆ ಸೇವೆ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಸೇವೆ ಆರಂಭಕ್ಕೂ ಮುನ್ನ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಸ್‌ ನಿಲ್ದಾಣವನ್ನು ಸಂಪೂರ್ಣ ಶುಚಿಗೊಳಿಸಲಾಯಿತು. ನಿಲ್ದಾಣಕ್ಕೆ ಬಂದ ಬಸ್‌ಗಳ ಒಳ ಹಾಗೂ ಹೊರಭಾಗಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಬಳಿಕ ಪ್ರಯಾಣಿಕರಿಗೆ ಪ್ರವೇಶ ಕಲ್ಪಿಸಲಾಯಿತು.

ಅಂತರ ಕಾಪಾಡಿಕೊಳ್ಳುವ ಅಗತ್ಯ ಇರುವುದರಿಂದ ಪ್ರತಿ ಬಸ್‌ಗೆ 30 ಪ್ರಯಾಣಿಕರಿಗೆ ಮಿತಿಗೊಳಿಸಲಾಗಿದೆ. ಮಾಸ್ಕ್‌ ಧರಿಸಿದವರಿಗೆ ಮಾತ್ರ ಸೇವೆ ಒದಗಿಸಲಾಗುತ್ತದೆ. ಬಸ್‌ ನಿಲ್ದಾಣಕ್ಕೆ ಬಂದ ಪ್ರಯಾಣಿಕರ ದೇಹದ ಉಷ್ಣತೆಯನ್ನು ಸಿಬ್ಬಂದಿ ಪರಿಶೀಲಿಸಲಿದ್ದಾರೆ. ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಳ್ಳುವಂತೆ ಸೂಚನೆ ನೀಡಲಿದ್ದಾರೆ. ನಿಯಮ ಪಾಲನೆ ಮಾಡಿದವರಿಗಷ್ಟೇ ಅವಕಾಶ ನೀಡಲಾಗುತ್ತದೆ.

ಶಿವಮೊಗ್ಗ, ಜಗಳೂರು, ನಾಯಕನಹಟ್ಟಿ, ಚಳ್ಳಕೆರೆ, ಹೊಸದುರ್ಗ ಮಾರ್ಗವಾಗಿ ಬಸ್‌ಗಳು ಸಂಚರಿಸಿದವು. ಬೆಳಿಗ್ಗೆ 6ರಿಂದ ರಾತ್ರಿ 7.30ರವರೆಗೆ ಸೇವೆ ಒದಗಿಸಲಿವೆ. ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಮಾರ್ಚ್‌ 24ರಿಂದ ಖಾಸಗಿ ಬಸ್‌ ಸೇವೆ ಸ್ಥಗಿತಗೊಂಡಿತ್ತು. ಗ್ರಾಮೀಣ ಪ್ರದೇಶದ ಜೀವನಾಡಿಯಾಗಿರುವ ಖಾಸಗಿ ಬಸ್‌ ಸಂಚಾರ ಇಲ್ಲದಿದ್ದರಿಂದ ಸಂಪರ್ಕ ವ್ಯವಸ್ಥೆ ಸಂಪೂರ್ಣ ಕಡಿತಗೊಂಡಿತ್ತು. ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಖಾಸಗಿ ಬಸ್‌ ಮಾಲೀಕರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು