ಗುರುವಾರ , ಮೇ 13, 2021
26 °C
ಹೊಸದುರ್ಗ ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆ ಸಾರಿಗೆ ಸಮಸ್ಯೆ

ವಿದ್ಯಾರ್ಥಿಗಳಿಗೆ ಟಾಪ್ ಪಯಣವೇ ಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

- ಎಸ್. ಸುರೇಶ್ ನೀರಗುಂದ

ಹೊಸದುರ್ಗ: ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆ ಸಾರಿಗೆ ಸಮಸ್ಯೆ ತೀವ್ರವಾಗಿದ್ದು, ಶಾಲಾ–ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಖಾಸಗಿ ಬಸ್ ಟಾಪ್ ಪಯಣವೇ ಗತಿ ಎಂಬಂತಾಗಿದೆ.

ಪಟ್ಟಣ ಸೇರಿ 300ಕ್ಕೂ ಹೆಚ್ಚು ಹಳ್ಳಿ, 2.60 ಲಕ್ಷಕ್ಕೂ ಅಧಿಕ ಜನರು ವಾಸಿಸುವ ತಾಲ್ಲೂಕು ಇದಾಗಿದೆ. ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಸುಮಾರು 30 ಕಿ.ಮೀವರೆಗೆ ಇರುವ ತಾಲ್ಲೂಕಿನ ಗಡಿಭಾಗದ ಜನರು ಪಟ್ಟಣಕ್ಕೆ ಬರಲು ಬಸ್ಸಿಗೆ ಪರದಾಡುವಂತಾಗಿದೆ.

‘ಮತ್ತೋಡು, ಕಂಚೀಪುರ, ಚಿಕ್ಕಬ್ಯಾಲದಕೆರೆ, ದೊಡ್ಡಕಿಟ್ಟದಹಳ್ಳಿ, ಅತ್ತಿಮಗ್ಗೆ, ಜಾನಕಲ್, ಹೆಬ್ಬಳ್ಳಿ, ಬಲ್ಲಾಳಸಮುದ್ರ, ಗುಡ್ಡದನೇರಲಕೆರೆ, ದೊಡ್ಡತೇಕಲವಟ್ಟಿ, ಕಾರೇಹಳ್ಳಿ, ಕಂಗುವಳ್ಳಿ, ಆನಿವಾಳ, ಬಾಗೂರು, ಸಾಣೇಹಳ್ಳಿ ಸೇರಿ ಇನ್ನಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳ ಜನರಿಗೆ ಸಕಾಲಕ್ಕೆ ಕೆಎಸ್‌ಆರ್‌ಟಿಸಿ ಅಥವಾ ಖಾಸಗಿ ಬಸ್ ಸೌಲಭ್ಯವಿಲ್ಲ. ಪಟ್ಟಣದಲ್ಲಿ 2016ರಲ್ಲಿ ಸರ್ಕಾರಿ ಬಸ್‌ ಡಿಪೊ ಆದಾಗ ಗ್ರಾಮೀಣ ಸಾರಿಗೆ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಜನರಲ್ಲಿ ಮೂಡಿದ್ದ ನಿರೀಕ್ಷೆ 5 ವರ್ಷ ಕಳೆದರೂ ಈಡೇರಿಕೆಯಾಗಿಲ್ಲ’ ಎನ್ನುತ್ತಾರೆ ಮತ್ತೋಡು ಸಂತೋಷ್‌.

‘ಒಂದೆಡೆ ಕೊರೊನಾ ಸೋಂಕು 2ನೇ ಅಲೆ ಕೇಕೆ ಹಾಕುತ್ತಿದೆ. ಮತ್ತೊಂದೆಡೆ ರಾಜ್ಯ ರಸ್ತೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ಸರ್ಕಾರಿ ಬಸ್‌ ಸೇವೆಯೂ ಸ್ಥಗಿತವಾಗಿದೆ. ಖಾಸಗಿ ಬಸ್ ಸಂಚರಿಸಿದರೂ ಹಳ್ಳಿಗಳಿಗೆ ಸರಿಯಾಗಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದಿಂದ ಪಟ್ಟಣದ ಶಾಲಾ–ಕಾಲೇಜಿಗೆ ಬರಲಿಕ್ಕೆ ತುಂಬಾ ತೊಂದರೆಯಾಗಿದೆ. ಶಿಕ್ಷಕರು 10ನೇ ತರಗತಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ತಯಾರಿ ಮಾಡಲು ವಿಶೇಷ ತರಗತಿ, ಘಟಕ ಪರೀಕ್ಷೆ ನಡೆಸುತ್ತಿದ್ದಾರೆ. ಪ್ರಥಮ ಪಿಯು ಅರ್ಧ ವಾರ್ಷಿಕ ಪರೀಕ್ಷೆ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ಪರೀಕ್ಷೆಗಳು ಸಹ ನಡೆಯುತ್ತಿವೆ. ಇದರಿಂದಾಗಿ ಹಳ್ಳಿಗಳಿಂದ ವಿದ್ಯಾರ್ಥಿಗಳು ಮನೆಯಿಂದ ಪಟ್ಟಣದ ಶಾಲಾ–ಕಾಲೇಜಿಗೆ ಬರಲು ಬಸ್ಸಿಗಾಗಿ ಗಂಟೆಗಟ್ಟಲೆ ಕಾದರೂ ಬಸ್ಸುಗಳು ಬರುತ್ತಿಲ್ಲ’ ಎಂದು ಪಿಯು ವಿದ್ಯಾರ್ಥಿ ಕುಮಾರ್ ಅಳಲು ತೋಡಿಕೊಂಡರು.

‘ಎಷ್ಟೋ ಹೊತ್ತಿಗೆ ಬರುವ ಖಾಸಗಿ ಬಸ್ಸಿಗೆ ನಾ ಮುಂದು ತಾ ಮುಂದು ಎಂದು ಮುನ್ನುಗ್ಗಿ ಹತ್ತಲು ಹೋಗುತ್ತಾರೆ. ಬಸ್ಸಿನ ಒಳಗಡೆ ಪ್ರಯಾಣಿಕರು ಕಿಕ್ಕಿರಿದು ತುಂಬಿರುತ್ತಾರೆ. ಬಸ್ ಕಂಡಕ್ಟರ್, ಒಳಗೆ ನಿಲ್ಲಲು ಜಾಗವಿಲ್ಲ. ಮೇಲೆ ಹತ್ತುವುದಿದ್ದರೆ ಮಾತ್ರ ಬನ್ನಿ
ಎನ್ನುತ್ತಾರೆ. ಬಸ್ಸುಗಳ ಅಭಾವ ಇರುವುದರಿಂದ ಸಮಯಕ್ಕೆ ಸರಿಯಾಗಿ ಶಾಲಾ–ಕಾಲೇಜಿಗೆ ಹೋಗಲು ಸಾಧ್ಯವಿಲ್ಲ ಎಂದು ವಿಧಿ ಇಲ್ಲದೇ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಬಸ್ ಟಾಪ್ ಏರುತ್ತಾರೆ. ಕೆಲವು ಖಾಸಗಿ ಬಸ್ಸುಗಳಲ್ಲಿ ಟಾಪ್ ಮೇಲೆ ಕೂರಲಿಕ್ಕೆ ಸಾಧ್ಯವಾಗದಷ್ಟು ಜನರು ಕುಳಿತಿರುತ್ತಾರೆ’ ಎಂದು ವಿವರಿಸಿದರು.

‘ಕೊರೊನಾ ಸಂಕಷ್ಟದಲ್ಲಿಯೂ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಟಾಪ್ ಮೇಲೆ ಪಯಣಿಸುತ್ತಾರೆ.
ಹೆಚ್ಚು ಜನರನ್ನು ತುಂಬಿಕೊಂಡು ಹೋಗುವ ಬಸ್ಸುಗಳು ಒಂದು ಕಡೆ ವಾಲಿಕೊಂಡಂತೆ ಸಾಗುತ್ತಿವೆ. ಕೆಲವು ಬಸ್ಸುಗಳು ಹಳೆಯ ವಾಹನಗಳಾಗಿವೆ. ಇಂತಹ ಬಸ್ಸಿನಲ್ಲಿ ನೂರಾರು ಜನರು ಸಂಚರಿಸುತ್ತಿದ್ದಾರೆ. ದುರದೃಷ್ಟವಷಾತ್ ಬಸ್ ಅಪಘಾತಕ್ಕೆ ತುತ್ತಾದರೆ ದೊಡ್ಡ ದುರಂತ ಸಂಭವಿಸಬಹುದು. ಹಾಗಾಗಿ ಈ ಬಗ್ಗೆ ತಾಲ್ಲೂಕು ಆಡಳಿತ ಎಚ್ಚರ ವಹಿಸಬೇಕು’ ಎಂದು ತಾಲ್ಲೂಕಿನ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ.

30 ಬಸ್‌ಗಳಿಗೆ ಬೇಡಿಕೆ

ಹೊಸದುರ್ಗ ಡಿಪೊದಲ್ಲಿ 57 ಬಸ್ಸುಗಳಿವೆ. ಇನ್ನೂ 30 ಬಸ್‌ಗಳಿಗೆ ಬೇಡಿಕೆ ಇದೆ. ಇರುವ ಬಸ್ಸಿನಲ್ಲಿಯೇ ಕೆಲವೆಡೆ ಗ್ರಾಮೀಣ ಭಾಗಕ್ಕೆ ಬಿಡಲಾಗಿದೆ. ಆದರೆ, ಅನಿರ್ದಿಷ್ಟಾವಧಿ ಮುಷ್ಕರ ಇರುವುದರಿಂದ ಬಹುತೇಕ ಬಸ್‌ ಸೇವೆ ಸ್ಥಗಿತವಾಗಿದೆ. ಹೊಸದುರ್ಗದಿಂದ ಚಿತ್ರದುರ್ಗಕ್ಕೆ ಕೆಲವೇ ಬಸ್‌ಗಳನ್ನು ಬಿಡಲಾಗುತ್ತಿದೆ ಎಂದು ಇಲ್ಲಿನ ಡಿಪೊ ವ್ಯವಸ್ಥಾಪಕ ಮೂರ್ತಿ
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ಸರ್ಕಾರ ಸಾರಿಗೆ ವ್ಯವಸ್ಥೆ ಕಲ್ಪಿಸಿ ಮಕ್ಕಳ ಹಿತ ಕಾಪಾಡಬೇಕು.

ನಾಗರಾಜು, ಮತ್ತೋಡು

ನಮ್ಮೂರಿಗೆ ಸರ್ಕಾರಿ ಹಾಗೂ ಖಾಸಗಿ ಬಸ್‌ ಸೌಲಭ್ಯವಿಲ್ಲ. ಪಟ್ಟಣಕ್ಕೆ ಹೋಗಿ ಬರಲು ಜನರಿಗೆ ಟಾಟಾ ಏಸ್, ಲಗೇಜ್ ಆಟೊ, ದ್ವಿಚಕ್ರ ವಾಹನಗಳೇ ಗತಿ.

- ಶ್ರೀನಿವಾಸ್‌, ಸಣ್ಣಕಿಟ್ಟದಹಳ್ಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.