ಶನಿವಾರ, ಸೆಪ್ಟೆಂಬರ್ 25, 2021
24 °C
‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಲೇಖಕಿ ಬೀರೂರು ಗೌರಿ ಪ್ರಸನ್ನ

ಹುಟ್ಟಿನಿಂದ ಯಾರೂ ಕನಿಷ್ಠರಲ್ಲ, ಶ್ರೇಷ್ಠರೂ ಅಲ್ಲ; ಲೇಖಕಿ ಬೀರೂರು ಗೌರಿ ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘ಯಾವುದೇ ವ್ಯಕ್ತಿಯನ್ನು ಹುಟ್ಟಿನಿಂದ ಕನಿಷ್ಠ, ಶ್ರೇಷ್ಠ ಎಂದು ಹೇಳಲಾಗದು. ಒಬ್ಬ ಕಳ್ಳ ಮಹಾನ್ ಶಿವಶರಣನೂ ಆಗಬಹುದು ಎನ್ನುವುದಕ್ಕೆ ಉದಾಹರಣೆ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಉರಿಲಿಂಗಪೆದ್ದಿಯ ಬದುಕು–ಬರಹಗಳೇ ಸಾಕ್ಷಿ’ ಎಂದು ಲೇಖಕಿ ಬೀರೂರಿನ ಗೌರಿ ಪ್ರಸನ್ನ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದ 15ನೇ ದಿನವಾದ ಭಾನುವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಉರಿಲಿಂಗಪೆದ್ದಿ’ ವಿಷಯ ಕುರಿತು ಅವರು ಮಾತನಾಡಿದರು.

‘ಉರಿಲಿಂಗ ಪೆದ್ದಿಯ ಮೂಲ ಹೆಸರು ಪೆದ್ದಣ್ಣ. ಆಂಧ್ರಪ್ರದೇಶದಿಂದ ಬಂದವರು. ಕಳ್ಳತನವೇ ಅವರ ಕೆಲಸವಾಗಿತ್ತು. ಈತನ ಪತ್ನಿ ಕಾಳವ್ವೆ. ವಚನಾಂಕಿತ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. ಇವರ 363 ವಚನಗಳು ಲಭ್ಯವಿದೆ. ಒಮ್ಮೆ ಕಳ್ಳತನಕ್ಕೆ ಹೋದಾಗ ಅಲ್ಲಿ ಉರಿಲಿಂಗದೇವರು ಲಿಂಗದೀಕ್ಷೆಯನ್ನು ನೀಡುತ್ತಾ ಶರಣನಾದವನ ಗುಣಲಕ್ಷಣಗಳ ಬಗ್ಗೆ ಹೇಳುವುದನ್ನು ಕೇಳಿ, ನೋಡಿ ಮನಸ್ಸು ಪರಿವರ್ತನೆಯಾಗುತ್ತದೆ. ಶರಣನಾಗಿ ಕಟ್ಟಿಗೆ ಕಡಿದು ಮಾರುವ ಕಾಯಕ ಕೈಗೊಳ್ಳುತ್ತಾರೆ. ಇವನ ಕಾಯಕ ಶ್ರದ್ಧೆ, ನಿಷ್ಠೆಯನ್ನು ಗಮನಿಸಿದ ಉರಿಲಿಂಗದೇವರು ಲಿಂಗದೀಕ್ಷೆ ನೀಡುವರು. ಮುಂದೆ ತಮ್ಮ ಮಠಕ್ಕೆ ಉರಿಲಿಂಗ ಪೆದ್ದಿಗಳ ಹೆಸರಿನಲ್ಲಿ ಪೀಠಾಧಿಪತಿಗಳಾಗುತ್ತಾರೆ. ಹೀಗೆ ಒಬ್ಬ ಕಳ್ಳ ಶರಣನಾಗಿ, ಜ್ಞಾನಿಯಾಗಿ, ವಚನಕಾರನಾಗಿ, ಗುರುವಾದದ್ದು ಜಗತ್ತಿನಲ್ಲಿ ಎಂದೂ ಕೇಳರಿಯದ ಸಂಗತಿ’ ಎಂದು ವಿವರಿಸಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಉರಿಲಿಂಗಪೆದ್ದಿ ಕಳ್ಳತನ ಮಾಡಿ, ಕಟ್ಟಿಗೆ ಕಡಿದು ಜೀವನ ನಡೆಸುತ್ತಿದ್ದ ಕೆಳವರ್ಗದ ವ್ಯಕ್ತಿ. ಪೆದ್ದಿ ಎಂದರೆ ಮೂರ್ಖ. ಒಮ್ಮೆ ಶ್ರೀಮಂತನೊಬ್ಬನ ಮನೆಗೆ ಕಳ್ಳತನಕ್ಕೆ ಹೋದಾಗ ಅಲ್ಲಿ ಉರಿಲಿಂಗದೇವರು ಲಿಂಗದೀಕ್ಷೆ ನೀಡುತ್ತಿರುವ ದೃಶ್ಯವನ್ನು ಕಾಣುತ್ತಾನೆ. ಇದನ್ನು ಕಂಡ ಪೆದ್ದಿಯ ಮನಃಪರಿವರ್ತನೆಯಾಗಿ ತನಗೂ ದೀಕ್ಷೆ ಕರುಣಿಸುವಂತೆ ಪ್ರಾರ್ಥಿಸುತ್ತಾನೆ. ಅವನ ಕಾಟ ತಪ್ಪಿಸಿಕೊಳ್ಳಲು ಒಂದು ಕಲ್ಲನ್ನು ಎಸೆದು ತೆಗೆದುಕೊಂಡು ಹೋಗು ಎನ್ನುವರು. ಪೆದ್ದಿ ಅದನ್ನೇ ಲಿಂಗವೆಂದು ಭಾವಿಸಿ ನಿಷ್ಠೆಯಿಂದ ಪೂಜಿಸುವನು. ಇದನ್ನು ಗಮನಿಸಿದ ಉರಿಲಿಂಗದೇವರು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡು ಸಂಸ್ಕೃತ, ವೇದಗಳನ್ನು ಕಲಿಸುವುದಲ್ಲದೆ ಕೊನೆಗೆ ತಮ್ಮ ನಂತರ ಮಠಕ್ಕೆ ಪೀಠಾಧಿಕಾರಿಗಳನ್ನಾಗಿ ನೇಮಿಸುತ್ತಾರೆ. ತಳಸಮುದಾಯದ ಕಳ್ಳನೊಬ್ಬ ಸಂಸ್ಕಾರದಿಂದ ಬದಲಾಗಿ ಪೀಠಾಧಿಪತಿಯಾದುದು ಬೆರಗುಗೊಳಿಸುವ ಸಂಗತಿ’ ಎಂದು ಬಣ್ಣಿಸಿದರು.

ಬೆಂಗಳೂರಿನ ಮೈಕೋ ಮಂಜು ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನ ಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತ ನಾಟ್ಯ ಶಾಲೆಯ ಡಿ.ಎಸ್‌.ಸುಪ್ರಭೆ ಹಾಗೂ ಡಿ.ಜೆ.ಮುಕ್ತ ವಚನ ನೃತ್ಯ
ಪ್ರದರ್ಶಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು