ಚಳ್ಳಕೆರೆ: ‘ಚಳ್ಳಕೆರೆ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ನಗರಸಭೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಸೇವಾ ಅಭಿಯಾನಕ್ಕೆ ನ್ಯಾಯಾಧೀಶೆ ಎಚ್.ಆರ್. ಹೇಮಾ ಕಸಗುಡಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
‘ಪರಿಸರ ಸ್ವಚ್ಛವಾಗಿದ್ದರೆ ಮನಸ್ಸು ಸಹ ಸ್ವಚ್ಛವಾಗಿರುತ್ತದೆ. ಹೀಗಾಗಿ ಮನೆಯ ಸುತ್ತಲಿನ ಆವರಣ ಸ್ವಚ್ಛವಾಗಿಸಿಕೊಳ್ಳುವುದಲ್ಲದೇ ಪ್ರತಿಯೊಬ್ಬ ನಾಗರಿಕರಲ್ಲಿಯೂ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ಆಗಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ್ ಹೇಳಿದರು.
ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ನಾಗರಾಜ, ‘ಒಣಕಸ, ಹಸಿ ಕಸ ಪ್ರತ್ಯೇಕವಾಗಿರಿಸಿ ವಿಲೇವಾರಿ ಕೆಲಸಕ್ಕೆ ನಗರಸಭೆ ಜೊತೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಇದರಿಂದ ಇಡೀ ನಗರ ಸುಂದರವಾಗಿರುತ್ತದೆ’ ಎಂದು ಹೇಳಿದರು.
ಉಪಾಧ್ಯಕ್ಷ ಡಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ರುದ್ರಯ್ಯ, ಪೌರಾಯುಕ್ತ ಜಗ್ಗರೆಡ್ಡಿ, ಪರಿಸರ ಎಂಜಿನಿಯರ್ ನರೇಂದ್ರಬಾಬು ಮಾತನಾಡಿದರು.
ಬೇವು, ಹೊಂಗೆ ಸೇರಿದಂತೆ ನ್ಯಾಯಾಲಯದ ಆವರಣದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಆರೋಗ್ಯ ನಿರೀಕ್ಷಕ ಸುನಿಲ್, ಗಣೇಶ್, ಗೀತಾ, ವಕೀಲ ಒ.ಪಾಪಣ್ಣ ಇದ್ದರು.