ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಚೊಂಬು ನೀರು ನಿಲ್ಲದ ಚೆಕ್‌ಡ್ಯಾಂ

ಅವೈಜ್ಞಾನಿಕ ಕಾಮಗಾರಿ ಒಪ್ಪಿಕೊಂಡ ಜಿಲ್ಲಾ ಪಂಚಾಯಿತಿ
Last Updated 11 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಲ ಸಂರಕ್ಷಣೆಗಾಗಿ ನರೇಗಾ ಯೋಜನೆಯಡಿ ನಿರ್ಮಿಸಿದ ಚೆಕ್‌ಡ್ಯಾಂಗಳಲ್ಲಿ ಚೊಂಬು ನೀರು ನಿಲ್ಲುತ್ತಿಲ್ಲ ಎಂಬ ಸಂಗತಿಯನ್ನು ಜಿಲ್ಲಾ ಪಂಚಾಯಿತಿ ಬುಧವಾರ ಬಹಿರಂಗವಾಗಿ ಒಪ್ಪಿಕೊಂಡಿತು. ಚೆಕ್‌ಡ್ಯಾಂ ನಿರ್ಮಿಸದಂತೆ ಕೃಷಿ ಇಲಾಖೆಗೆ ಮತ್ತೊಮ್ಮೆ ಸೂಚನೆ ನೀಡಿತು.

ಜಿಲ್ಲಾ ಪಂಚಾಯಿತಿಯ ಮಾಸಿಕ ಕೆಡಿಪಿ ಸಭೆಯಲ್ಲಿ ಚೆಕ್‌ಡ್ಯಾಂಗಳ ವಿಚಾರ ಚರ್ಚೆಗೆ ಬಂದಿತು. ಜಲಸಂರಕ್ಷಣೆಗೆ ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಗಮನ ಹರಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

ನರೇಗಾ ಯೋಜನೆಯಡಿ ಚೆಕ್‌ಡ್ಯಾಂ ನಿರ್ಮಿಸುವ ಹೊಣೆ ಕೃಷಿ ಇಲಾಖೆಗೆ ನೀಡಿಲ್ಲ. ಕೃಷಿ ಹೊಂಡ ಹಾಗೂ ಬದು ನಿರ್ಮಾಣ ಮಾಡಿದರೆ ಸಾಕು. ನಿರ್ಮಾಣವಾಗಿರುವ ಹಲವು ಚೆಕ್‌ಡ್ಯಾಂಗಳಲ್ಲಿ ಚೊಂಬು ನೀರು ಕೂಡ ನಿಲ್ಲುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸಿ.ಸತ್ಯಭಾಮ ಹೇಳಿದರು.

ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳಿಗೆ ನಿರ್ಬಂಧ ವಿಧಿಸಿದ್ದು ಸರಿಯಲ್ಲ. ಗ್ರಾಮೀಣ ಪ್ರದೇಶದಲ್ಲಿ ಚರಂಡಿ ಹಾಗೂ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿವೆ. ಯಾವ ಕಾಮಗಾರಿಗೆ ಅವಕಾಶ ಇದೆ ಎಂಬುದು ಸ್ಪಷ್ಟ ಪಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಪ್ರಶ್ನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಸ್‌. ರಂಗಸ್ವಾಮಿ ಮಾತನಾಡಿ, ‘ನರೇಗಾ ಯೋಜನೆಯಡಿ 70 ಲಕ್ಷ ಮಾನವ ದಿನ ಸೃಜಿಸುವ ಗುರಿಯನ್ನು ಹೊಂದಲಾಗಿತ್ತು. ಈವರೆಗೆ 42 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, ₹ 134 ಕೋಟಿ ವೆಚ್ಚ ಮಾಡಲಾಗಿದೆ. ಸಾಮಗ್ರಿಗಳಿಗೆ ಮಾಡಿದ ವೆಚ್ಚವನ್ನು ಪಾವತಿ ಮಾಡುವುದು ಬಾಕಿ ಇದೆ’ ಎಂದು ಹೇಳಿದರು.

ನರೇಗಾ ಯೋಜನೆ ಬಗ್ಗೆ ಗಹನ ಚರ್ಚೆಗೆ ಇದು ಇಂಬು ಮಾಡಿಕೊಟ್ಟಿತು. ಕೂಲಿ ಹಾಗೂ ಸಾಮಗ್ರಿಗೆ 60:40ರ ಅನುಪಾತವನ್ನು ಸರ್ಕಾರ ನಿಗದಿಪಡಿಸಿದೆ. ಸಾಮಗ್ರಿಗೆ ನಿಗದಿಪಡಿಸಿದ ಅನುಪಾತವನ್ನು ಮೀರಿದ್ದರಿಂದ ₹ 40 ಕೋಟಿ ಅನುದಾನ ಬಿಡುಗಡೆ ಬಾಕಿ ಉಳಿದಿದೆ ಎಂಬ ವಿಷಯವನ್ನು ಅಧಿಕಾರಿಗಳು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.

ಹೊಸದುರ್ಗ ತಾಲ್ಲೂಕಿನಲ್ಲಿ ಮಳೆ ಹೆಚ್ಚಾಗಿದ್ದರಿಂದ ಚರಂಡಿಗಳು ಹಾಳಾಗಿವೆ. ತುರ್ತು ಕಾಮಗಾರಿಗೆ ಅನುಪಾತ ಲೆಕ್ಕಾ ಹಾಕುವುದು ಸರಿಯಲ್ಲ. ನರೇಗಾ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನಂತು ಒತ್ತಾಯಿಸಿದರು.

ಮಳೆ ನೀರು ಸಂಗ್ರಹಕ್ಕೆ ಒತ್ತು:ಸರ್ಕಾರಿ ಶಾಲೆಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಲು ಜಿಲ್ಲಾ ಪಂಚಾಯಿತಿ ಒಲವು ತೋರಿತು. ಅಗತ್ಯ ಶಾಲೆಗಳ ಪಟ್ಟಿಯನ್ನು ಶೀಘ್ರವೇ ಸಲ್ಲಿಸುವಂತೆ ಡಿಡಿಪಿಐ ಕೆ. ರವಿಶಂಕರ ರೆಡ್ಡಿ ಅವರಿಗೆ ಸೂಚನೆ ನೀಡಿತು.

ಜಿಲ್ಲೆಯ 189 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ₹ 1 ಲಕ್ಷ ಅನುದಾನವನ್ನು ಇದಕ್ಕೆ ಮೀಸಲು ಇಡಲಾಗಿದೆ. ಪಶು ವೈದ್ಯಕೀಯ ಆಸ್ಪತ್ರೆ, ಗ್ರಾಮ ಪಂಚಾಯಿತಿ ಕಟ್ಟಡ ಸೇರಿ ಯಾವುದೇ ಕಟ್ಟಡದಲ್ಲಿ ಮಳೆ ನೀರು ಸಂಗ್ರಹಿಸಲು ಅವಕಾಶವಿದೆ ಎಂಬುದನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಮಧ್ಯಪ್ರವೇಶಿಸಿದ ಅನಂತು, ‘ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿವೆ. ನಿತ್ಯ ಮಧ್ಯಾಹ್ನದ ಬಿಸಿಯೂಟಕ್ಕೆ ಟ್ಯಾಂಕರ್‌ ನೀರು ಪೂರೈಸುವ ಪರಿಸ್ಥಿತಿ ಇದೆ. ಶಾಲೆಗಳಲ್ಲಿ ಈ ಕಾರ್ಯ ಮೊದಲು ಆಗಬೇಕಿದೆ’ ಎಂದು ಗಮನ ಸೆಳೆದರು.

ಆರ್‌ಒಗೆ ಹೊಣೆ ನಿಗದಿ:ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್‌ಒ) ನಿರ್ವಹಣೆಯ ಹೊಣೆಯನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಗೆ ವಹಿಸಿರುವ ಸಂಗತಿಯನ್ನು ಸತ್ಯಭಾಮ ಅವರು ಮತ್ತೊಮ್ಮೆ ಸಭೆಗೆ ಮಾಹಿತಿ ನೀಡಿದರು.

ಹಲವು ಮೂಲದಿಂದ ಬಂದ ಅನುದಾನ ಬಳಸಿಕೊಂಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಕ್ರೆಡಾಲ್‌ ಸ್ಥಾಪಿಸಿದ 478 ಘಟಕಗಳ ಪೈಕಿ 412 ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೀಡಲಾಗಿದೆ. ದುರಸ್ತಿ ಹಾಗೂ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಇಲಾಖೆ ನಿಭಾಯಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಎಸ್. ಸುಶೀಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT