ಬುಧವಾರ, ಮೇ 25, 2022
22 °C
ಮಕ್ಕಳ ಹಬ್ಬ ಸಮಾರೋಪ ಸಮಾರಂಭ

ಮಕ್ಕಳೆಂಬ ಚೀಲದಲ್ಲಿ ಒಳ್ಳೆಯ ಗುಣ ತುಂಬಿ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಾಣೇಹಳ್ಳಿಯ ಎಸ್‌ಎಸ್ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಹಬ್ಬ-2022 ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ. ಅದರಲ್ಲಿ ಯಾವ ಹರಳು ಹಾಕಿದರೂ ಹಿಡಿದುಕೊಳ್ಳುತ್ತದೆ. ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮಕ್ಕಳನ್ನು ಈಗ ತಾನೇ ಫ್ಯಾಕ್ಟರಿಯಿಂದ ಬಂದ ಹೊಸ ಖಾಲಿ ಚೀಲಗಳೆಂದು ಹೇಳುತ್ತಿದ್ದರು. ಅದರಲ್ಲಿ ಮಣ್ಣು, ಕಲ್ಲು, ಮುತ್ತು, ರತ್ನ, ವಜ್ರ, ವೈಢೂರ್ಯ ಹೀಗೆ ಏನನ್ನಾದರೂ ತುಂಬಬಹುದು. ತುಂಬುವವರಿಗೆ ಏನನ್ನು ತುಂಬಬೇಕು ಎನ್ನುವ ವಿವೇಕ ಇರಬೇಕು. ಮಕ್ಕಳೆಂಬ ಚೀಲದಲ್ಲಿ ಒಳ್ಳೆಯ ಮಾನವೀಯ ಗುಣಗಳನ್ನು ತುಂಬಿದರೆ ಭವಿಷ್ಯದಲ್ಲಿ ಸುಸಂಸ್ಕೃತ ನಾಗರಿಕರಾಗಲು ಸಾಧ್ಯ’ ಎಂದು ಹೇಳಿದರು.

‘ಮಕ್ಕಳ ಹಬ್ಬಕ್ಕೆ ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಬರುವ ಪ್ರತಿ ಮಕ್ಕಳ ಆಚಾರ, ವಿಚಾರ, ಮನೋಭಾವವೂ ಭಿನ್ನ. ಅವರೆಲ್ಲರನ್ನೂ ಒಟ್ಟಿಗೆ ಸೇರಿಸಿ ತರಬೇತಿ ನೀಡುವುದು ಸುಲಭದ ಮಾತಲ್ಲ. ಮಕ್ಕಳು ದೇವರೂ ಹೌದು, ಮಂಗಗಳೂ ಹೌದು. ತರಬೇತಿ ಕೊಟ್ಟರೆ ಮಂಗತನವನ್ನು ಕಳೆದುಕೊಂಡು ದೈವತ್ವ ರೂಢಿಸಿಕೊಳ್ಳುತ್ತವೆ’ ಎಂದು ಹೇಳಿದರು.

‘ಶಿಬಿರದ ಹಿಂದೆ 25-30 ಮಂದಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಅಳು, ನಗು, ತಮಾಷೆ, ಕಪಿಚೇಷ್ಟೆಗಳೆಲ್ಲವೂ ಮುಗ್ಧತನದಿಂದ ಕೂಡಿರುತ್ತವೆ. ಮಕ್ಕಳಿಗೆ ಒಳ್ಳೆಯ ಮಾನವೀಯ ಗುಣಗಳನ್ನು ನೀಡುವುದೇ ಶಿಬಿರದ ಮುಖ್ಯ ಉದ್ದೇಶ’ ಎಂದು ಹೇಳಿದರು.

ಕವಿ ಚಂದ್ರಶೇಖರ್ ತಾಳ್ಯ ಮಾತನಾಡಿ, ‘ಸಾಣೇಹಳ್ಳಿಯ ಮಕ್ಕಳ ಹಬ್ಬ ವಿಶೇಷವಾದದ್ದು. ಇಲ್ಲಿಯ ನೂರಾರು ಕಾರ್ಯಕರ್ತರು ಮಕ್ಕಳನ್ನು ತರಬೇತುಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳನ್ನು ಮಾನವೀಯ ನೆಲೆಗಟ್ಟಿನ ಮೇಲೆ ತಯಾರು ಮಾಡುವುದು, ಸಾಂಸ್ಕೃತಿಕ ಮನಸ್ಸುಗಳನ್ನು ರೂಪಿಸುವುದೇ ಉದ್ದೇಶವಾಗಿದೆ’ ಎಂದು ಹೇಳಿದರು.

ಸಂಗೀತ ಶಿಕ್ಷಕ ಎಚ್.ಎಸ್. ನಾಗರಾಜ್ ಮಾರ್ಗದರ್ಶನದಲ್ಲಿ ಶಿಬಿರದಲ್ಲಿ ಕಲಿತ ವಚನ ಗೀತೆಗಳನ್ನು ಮಕ್ಕಳು ಹಾಡಿದರು. ಯೋಗ ಶಿಕ್ಷಕ ಬಿ.ಸಿ. ದೇವೇಂದ್ರಪ್ಪ ಮಾರ್ಗದರ್ಶನದಲ್ಲಿ ಕಲಿತ ಯೋಗ ನೃತ್ಯ ಪ್ರದರ್ಶನ ನೀಡಿದರು. ಸಹನ ಚೇತನ್ ನಿರ್ದೇಶನದಲ್ಲಿ ಬಸವ ವಚನ ಕೀರ್ತನೆ, ನೃತ್ಯರೂಪಕವನ್ನು ಅತ್ಯಾಕರ್ಷಕವಾಗಿ ಪ್ರದರ್ಶಿಸಿದರು. ಮತ್ತೊಂದು ತಂಡ ರಘುಪತಿ ಬುರುಡೇಕಟ್ಟೆಯವರ ನಿರ್ದೇಶನದಲ್ಲಿ ‘ಪ್ರೀತಿಯ ಕಾಳು’ ನಾಟಕ ಪ್ರದರ್ಶಿಸಿತು. ಮೂರನೆಯ ತಂಡ ಎಸ್.ಕೆ. ಮಾಧವರಾವ್ ರಚಿಸಿದ ‘ಒಬ್ಬ ರಾಜನ ಕಥೆ’ ರಂಜನಿ ನಿರ್ದೇಶನ, ಶೃತಿ ಸಹನಿರ್ದೇಶನದಲ್ಲಿ ಮೂಡಿ ಬಂತು. ನಾಲ್ಕನೆಯ ತಂಡ ಎಚ್.ಎಸ್. ವೆಂಕಟೇಶಮೂರ್ತಿ ಅವರ ಕಂಸಾಯಣ ನಾಟಕವನ್ನು ರಾಜೇಶ್‍ ಸಾಣೇಹಳ್ಳಿಯವರ ನಿರ್ದೇಶನದಲ್ಲಿ ಪ್ರದರ್ಶಿಸಿತು. ಐದನೆಯ ತಂಡ ವಿಜಯಕುಮಾರ್ ದೊಡ್ಮನಿ ನಿರ್ದೆಶನದಲ್ಲಿ ಪಾರಿತೋಷ ನಾಟಕವನ್ನು ಪ್ರದರ್ಶಿಸಿತು. ಆರನೆಯ ತಂಡ ಲಾಲ್‌ಸಾಬ್ ನಿರ್ದೇಶನದಲ್ಲಿ ಜನಪದ ಕಥೆಗಳ ‘ರಾಕ್ಷಸ’ ನಾಟಕ ಪ್ರದರ್ಶಿಸಿತು.

ಏ. 24ರಿಂದ ಆರಂಭವಾದ ಮಕ್ಕಳ ಬೇಸಿಗೆ ಶಿಬಿರ (ಮಕ್ಕಳ ಹಬ್ಬ) ದಲ್ಲಿ ರಾಜ್ಯದ 10 ಜಿಲ್ಲೆಗಳ 150 ಮಕ್ಕಳು ಭಾಗವಹಿಸಿದ್ದರು. ಒಟ್ಟು ಆರು ತಂಡಗಳು ನಾಟಕ ಮತ್ತು ನೃತ್ಯರೂಪಕಗಳನ್ನು ಪ್ರದರ್ಶಿಸಿದವು. ಬೆಳಿಗ್ಗೆ 10ಕ್ಕೆ ಆರಂಭವಾದ ಮಕ್ಕಳ ನಾಟಕ, ನೃತ್ಯ, ಯೋಗ, ವಚನಗೀತೆ ಮುಂತಾದ ಪ್ರದರ್ಶನಗಳು ಸಂಜೆ 5ರವರೆಗೂ ನಡೆದವು. ಮಕ್ಕಳು ಮತ್ತು ಅವರ ಪೋಷಕರ ಕಲರವ ಎಲ್ಲೆಡೆ ತುಂಬಿತ್ತು. ಸಂಗೀತ ಸಂಯೋಜಕ ಜಗದೀಶ್‌ ಆರ್‌., ನೃತ್ಯ ನಿರ್ದೇಶಕಿ ಸಹನಾ ಚೇತನ, ಶಿಬಿರದ ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷರು ಚಂದ್ರಪ್ಪ ಸೇರಿದಂತೆ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು