ಮಂಗಳವಾರ, ಫೆಬ್ರವರಿ 25, 2020
19 °C
ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಭೇಟಿ

ಆಹಾರದ ಮೆನು ಬದಲಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಆಹಾರದ ಮೆನು ಬದಲಿಸಲು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಸೂಚನೆ ನೀಡಿದರು. ಮಧುಮೇಹ, ರಕ್ತದೊತ್ತಡದಿಂದ ಬಳಲುವ ರೋಗಿಗಳು ಹಾಗೂ ಬಾಣಂತಿಯರಿಗೆ ನೀಡುವ ಊಟ ಹಾಗೂ ತಿಂಡಿಯ ಮೆನು ಬದಲಾಗಲಿದೆ.

ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳು, ಚಿಕಿತ್ಸೆ ಹಾಗೂ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯಲ್ಲಿ ವೈದ್ಯರ ಸಭೆ ನಡೆಸಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಿದರು.

ಆಸ್ಪತ್ರೆಗೆ ದಾಖಲಾಗುವ ಒಳರೋಗಿಗಳಿಗೆ ಹಾಲು, ಬ್ರೆಡ್‌, ತಿಂಡಿ, ಅನ್ನ, ಸಾಂಬಾರು, ಟೀ ಸೇರಿ ಇತರ ಆಹಾರ ನೀಡಲಾಗುತ್ತದೆ. ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುವ ರೋಗಿಗಳಿಗೆ ಅನ್ನದ ಪದಾರ್ಥ ಕಡಿಮೆ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅನ್ನದ ಬದಲಿಗೆ ಚಪಾತಿ ನೀಡುವುದು ಸೂಕ್ತವೆಂದು ಸಲಹೆ ನೀಡಿದರು. ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸುವಂತೆ ಹೇಳಿದರು.

‘ಅಪೌಷ್ಟಿಕತೆಯಿಂದ ಬಳಲುವ 343 ಮಕ್ಕಳು ಜಿಲ್ಲೆಯಲ್ಲಿದ್ದಾರೆ. ಅಂಗನವಾಡಿ ದಾಖಲಾತಿಗಳ ಪ್ರಕಾರ ಈ ಅಂಶ ಬೆಳಕಿಗೆ ಬಂದಿದೆ. ಆರು ತಿಂಗಳಿಂದ ಆರು ವರ್ಷದ ಒಳಗಿನ ಮಕ್ಕಳಲ್ಲಿ ಕೆಲವು ಕ್ಲಿಷ್ಟಕರ ಪ್ರಕರಣಗಳಿವೆ. ವೈದ್ಯಕೀಯ ಸಲಹೆ ಪಡೆಯಲು ನಿರ್ಧರಿಸಲಾಗಿದೆ. ಆರ್ಥಿಕ ನೆರವು ನೀಡುವಂತೆ ಸರ್ಕಾರವನ್ನು ಕೋರಲಾಗುತ್ತಿದೆ. ನವಜಾತ ಶಿಶುಗಳ ಆರೈಕೆಯಲ್ಲಿ ಹೆಚ್ಚು ನಿಗಾ ಇಡುವ ಅಗತ್ಯವಿದೆ’ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ತಿಳಿಸಿದರು.

ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಹಾಗೂ ಹೆರಿಗೆ ಮಾಡಿಸಿದ ವೈದ್ಯರನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು. ಎಲ್ಲ ರೋಗಿಗಳಿಗೂ ಸಕಾಲದಲ್ಲಿ ಚಿಕಿತ್ಸೆ ನೀಡುವ ತಜ್ಞ ವೈದ್ಯರು ಹಾಗೂ ಪರಿಕರಗಳು ಜಿಲ್ಲಾ ಆಸ್ಪತ್ರೆಯಲ್ಲಿ ಇವೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾಸರ್ಜನ್ ಡಾ.ಎಚ್.ಜೆ.ಬಸವರಾಜಪ್ಪ, ಸ್ಥಾನಿಕ ವೈದ್ಯಾಧಿಕಾರಿ ಡಾ.ಆನಂದಪ್ರಕಾಶ್, ವೈದ್ಯರಾದ ಡಾ.ಈ.ಸತೀಶ್, ಡಾ.ದೇವರಾಜ್, ಡಾ.ರೂಪಶ್ರೀ, ಡಾ.ಮೋಹನ್‍ಕುಮಾರ್, ಡಾ.ಮಲ್ಲಪ್ಪ ಹಾಗೂ ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು