ಶನಿವಾರ, ಮೇ 15, 2021
29 °C
ಉತ್ತಮ ಆದಾಯ ಗಳಿಸುತ್ತಿರುವ ಚಿಕ್ಕಜಾಜೂರಿನ ಯುವರೈತ ಸಂದೀಪ್‌

ಕುಟುಂಬದ ನಿರ್ವಹಣೆಗೆ ಕೈಹಿಡಿದ ಹೂವಿನ ಕೃಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

- ಜೆ. ತಿಮ್ಮಪ್ಪ

ಚಿಕ್ಕಜಾಜೂರು: ಹೂವಿನ ಕೃಷಿಯಲ್ಲಿ ಕಳೆದ ಒಂದು ವರ್ಷದಿಂದ ಉತ್ತಮ ಇಳುವರಿ ಪಡೆದು ಬೆಲೆ ಏರಿಳಿತದ ನಡುವೆಯೂ ಉತ್ತಮ ಆದಾಯ ಗಳಿಸುತ್ತಿದ್ದಾರೆ ಗ್ರಾಮದ ಟೈಲರ್‌ ಸಿದ್ದಪ್ಪ ಅವರ ಮಗ ಸಂದೀಪ್‌.

‘ಹೂವಿನ ಕೃಷಿ ಕೈಗೊಳ್ಳಲು ನಮ್ಮ ಮಾವ ಚಿದಾನಂದ ಅವರೇ ಪ್ರೇರಣೆ. ನಮಗೆ ಎರಡೂವರೆ ಎಕರೆ ಜಮೀನು ಇದ್ದು, ಕೊಳವೆಬಾವಿ ಕೊರೆಸಿದ್ದೇವೆ. ಎರಡು ಇಂಚಿನಷ್ಟು ನೀರು ಬರುತ್ತದೆ. ಕಳೆದ ವರ್ಷದ ಮಾರ್ಚ್‌ ತಿಂಗಳಿನಲ್ಲಿ 6 ಸಾವಿರ ಸೇವಂತಿ ಸಸಿಗಳನ್ನು ತಂದು ನಾಟಿ ಮಾಡಿದೆ. ಐದೂವರೆ ತಿಂಗಳ ನಂತರ ಕೊಯಿಲು ಆರಂಭಿಸಿದೆವು. ವಾರದಲ್ಲಿ ಎರಡು ಬಾರಿ ಕೊಯಿಲು ಮಾಡಿ, ನಾವೇ ಹೂವನ್ನು ಕಟ್ಟಿ, ಮಾರು ಲೆಕ್ಕದಲ್ಲಿ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಸಂದೀಪ್‌.

ಆದಾಯ–ಖರ್ಚು: ‘ಆರಂಭದ ಎರಡು ತಿಂಗಳು 250 ಕೆ.ಜಿ. ಹೂವನ್ನು ಕಟ್ಟಿ ಒಂದು ಮಾರಿಗೆ
₹ 20ರಂತೆ ಹೊಸದುರ್ಗ, ಚಿಕ್ಕಜಾಜೂರಿನ
ಹೂವಿನ ಅಂಗಡಿಗಗಳಲ್ಲಿ ಮಾರಾಟ ಮಾಡಿದೆವು. ದಸರಾ ಹಬ್ಬದ ಸಂದರ್ಭದಲ್ಲಿ ₹ 40 ಸಾವಿರ, ದೀಪಾವಳಿ ಹಬ್ಬದ ಸಮಯದಲ್ಲಿ ₹ 30 ಸಾವಿರ ಆದಾಯ ಗಳಿಸಿದೆ. ಸಸಿ ತಂದದ್ದು, ನಾಟಿ, ಗೊಬ್ಬರ, ಔಷಧ, ಕಳೆ, ಕೊಯಿಲು ಖರ್ಚಿಗಾಗಿ ₹ 30 ಸಾವಿರ ಖರ್ಚು ಮಾಡಲಾಗಿದೆ. ಬೆಲೆ ಏರಿಳಿತದ ನಡುವೆಯೂ ಉತ್ತಮ ಲಾಭವಾದ್ದರಿಂದ ಕುಟುಂಬವನ್ನು ಸರಿದೂಗಿಸಲು
ಸಹಕಾರಿಯಾಯಿತು’ ಎಂದು ಮಾಹಿತಿ
ನೀಡುತ್ತಾರೆ ಅವರು.

‘ದೀಪಾವಳಿ ನಂತರ ಹೂವು ಕಡಿಮೆ ಆಗಿದ್ದರಿಂದ ಸೇವಂತಿಗೆ ಗಿಡಗಳ ಬುಡದ ಮೇಲ್ಭಾಗವನ್ನು ಕಟಾವು ಮಾಡಿದೆವು. ಮೂರೂವರೆ ತಿಂಗಳ ನಂತರ ಹೂವು
ಮತ್ತೆ ಕಟಾವಿಗೆ ಬಂದಿದ್ದು, ವಾರದಲ್ಲಿ ಎರಡು ಬಾರಿ ಖಟಾವು ಮಾಡಿ, ಹೂವನ್ನು ಕಟ್ಟಿ ಮಾರಾಟ ಮಾಡುತ್ತಿದ್ದೇವೆ. ಖರ್ಚು ಕಳೆದು ₹ 30 ಸಾವಿರ ಆದಾಯ ಬಂದಿದೆ. ಸೇವಂತಿ ಹೂವಿನ ಜತೆಗೆ 9 ತಿಂಗಳ ಹಿಂದೆ 5 ಸಾವಿರ ಕನಕಾಂಬರ ಹೂವಿನ ಸಸಿಗಳನ್ನು ತಂದು ನಾಟಿ ಮಾಡಿದೆವು. ಸಸಿ ನಾಟಿ, ಗೊಬ್ಬರ, ಔಷಧ ಸೇರಿ ಈವರೆಗೆ ₹ 30 ಸಾವಿರ ಖರ್ಚು ಮಾಡಿದ್ದೇನೆ. ಹೂವು ಉತ್ತಮವಾಗಿ ಬಂದಿದೆ. ಬೇಸಿಗೆಯಲ್ಲಿ ಬೆಲೆ ಕಡಿಮೆ ಇದ್ದು,
₹ 35 ಸಾವಿರ ಆದಾಯ ಬಂದಿದೆ. ಇನ್ನೂ ಹೂವು ಇದ್ದು, ಮಳೆಗಾಲದ ವೇಳೆಗೆ ಉತ್ತಮ ಬೆಲೆ ಸಿಕ್ಕಲ್ಲಿ
₹ 40 ಸಾವಿರದಿಂದ ₹ 45 ಸಾವಿರದವರೆಗೂ ಆದಾಯದ ನಿರೀಕ್ಷೆ ಇದೆ’ ಎನ್ನುತ್ತಾರೆ ರೈತ ಸಂದೀಪ್‌.

‘ಹೂವಿನ ಕೃಷಿಗೆ ನನ್ನ ತಾಯಿ ಸುಶೀಲಮ್ಮ ಬೆನ್ನೆಲುಬಾಗಿದ್ದಾರೆ. ಹೊಲದಲ್ಲಿ ಕಳೆ, ಕೊಯಿಲು, ಹೂವನ್ನು ಕಟ್ಟುವುದಕ್ಕೆ ಕೂಲಿಗಳನ್ನು ಕರೆದುಕೊಳ್ಳುವುದು, ನಾನು ಹೂವನ್ನು ಮಾರಾಟ ಮಾಡಲು ಹೋದಾಗ ಜಮೀನಿನ ಜವಾಬ್ದಾರಿಯನ್ನು ನನ್ನ ತಾಯಿಯೇ ನೋಡಿಕೊಳ್ಳುತ್ತಾರೆ. ಅವರ ಸಹಕಾರದಿಂದ ಉತ್ತಮ ಆದಾಯ ಕಾಣಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.