ಧರ್ಮಪುರ: ಸಮೀಪದ ಗೂಳ್ಯ ಗ್ರಾಮದಿಂದ ಯರಬಳ್ಳಿ ಮತ್ತು ಹಿರಿಯೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ಇದೆ.
ಧರ್ಮಪುರದಿಂದ ಹರಿಯಬ್ಬೆ, ಗೂಳ್ಯ, ಶಿಡ್ಲಯ್ಯನ ಕೋಟೆ, ರಂಗೇನಹಳ್ಳಿ, ಕಂದಿಕೆರೆಯಿಂದ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ 20 ಕಿ.ಮೀ ಹಾಗೂ ರಂಗೇನಹಳ್ಳಿ ಮಾರ್ಗವಾಗಿ ಅಂಬಲಗೆರೆ ಮೂಲಕ ಹಿರಿಯೂರಿಗೆ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಮೂರು ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು ವಾಹನಗಳು ಓಡಾಡುವುದೇ ದುಸ್ತರವಾಗಿದೆ.
ಹಿರಿಯೂರು ಮಾರ್ಗವಾಗಿ ಚಳ್ಳಕೆರೆಗೆ ಹೋಗಲು 80 ಕಿ.ಮೀ. ಪ್ರಯಾಣಿಸಬೇಕು. ಅದೇ ಧರ್ಮಪುರದಿಂದ ಹರಿಯಬ್ಬೆ ಮಾರ್ಗವಾಗಿ ಗೂಳ್ಯ, ರಂಗೇನಹಳ್ಳಿ, ಕಂದಿಕೆರೆಯಿಂದ ಬೀದರ್ ರಸ್ತೆ ಹಾಗೂ ವದ್ದೀಕೆರೆ, ಐಮಂಗಲ ಮೂಲಕ ಚಿತ್ರದುರ್ಗಕ್ಕೆ ತೆರಳಲು ಹೆಚ್ಚಾಗಿ ಇದೇ ಮಾರ್ಗ ಅನುಸರಿಸುತ್ತಾರೆ. ಇದರಿಂದ 30 ಕಿ.ಮೀ. ಉಳಿತಾಯವಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಧರ್ಮಪುರದಿಂದ ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಹೋಗುವ ಹಾಗೂ ದಾವಣಗೆರೆಗೆ ಹೋಗುವ ಬಹುತೇಕ ವಾಹನಗಳು ಈ ಮಾರ್ಗದ ಮೂಲಕ ಸಂಚರಿಸುತ್ತವೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಡಾಂಬರ್ ಕಿತ್ತು ಹೋಗಿದ್ದು, ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನಗಳು ಸಂಚರಿಸುವುದು ಕಷ್ಟವಾಗಿದೆ. ವಾಹನ ಸವಾರರು ರಾತ್ರಿ ವೇಳೆ ಗುಂಡಿಗಳ ಆಳ ಅರಿಯದೆ ಬಿದ್ದಿರುವ ಅನೇಕ ಉದಾಹರಣೆಗಳಿವೆ’ ಎಂದು ರಂಗೇನಹಹಳ್ಳಿ ಗಡಾರಿ ತಿಮ್ಮಣ್ಣ ಹೇಳಿದರು.
ಮಳೆ ಬಂತೆಂದರೆ ಈ ಸಂಪರ್ಕ ರಸ್ತೆಯ ಮೂಲಕ ಜಮೀನುಗಳಿಗೆ ಹೋಗುವ ರೈತರ ಪಾಡು ಹೇಳತೀರದಾಗಿದೆ ಎಂದು ರಂಗೇನಹಳ್ಳಿ ಮಂಜುನಾಥ್ ತಿಳಿಸಿದರು.
ದುರಸ್ತಿಗೆ ಆಗ್ರಹ: ಶಿಡ್ಲಯ್ಯನ ಕೋಟೆಯಿಂದ ರಂಗೇನಹಳ್ಳಿಗೆ ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಸಂಪೂರ್ಣ ಕೊರಕಲು ಬಿದ್ದಿದೆ. ಕಂದಕ ನಿರ್ಮಾಣವಾದಂತೆ ಬಾಸವಾಗುತ್ತದೆ. ದ್ವಿಚಕ್ರ ವಾಹನಗಳ ಸವಾರರು ತಿರುವಿನಲ್ಲಿ ರಸ್ತೆ ಹಾಳಾಗಿರುವುದನ್ನು ಅರಿಯದೇ ರಾತ್ರಿ ವೇಳೆ ಬಿದ್ದಿದ್ದು, ಗಾಯಗಳಾಗಿವೆ. ಮಳೆಯ ನೀರು ಇಲ್ಲಿ ರಭಸವಾಗಿ ಹರಿಯುತ್ತಿದ್ದ ವೇಳೆ ಕಾರೊಂದು ಸಿಲುಕಿಕೊಂಡು ಪ್ರಯಾಣಿಕರು ಹೊರಬರಲು ಪ್ರಯಾಸ ಪಟ್ಟ ನಿದರ್ಶನವೂ ಇಕದೆ ಎಂದು ಧರ್ಮಪುರದ ಗಿರೀಶ್ ವಿವರಿಸಿದರು
ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಹಾಳಾಗಿರುವ ರಸ್ತೆ ದುರಸ್ತಿಪಡಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲಿ ಎಂದು ರಂಗೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.