ಚಿತ್ರದುರ್ಗ: ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಂದ ಅಪಾರ ಆದಾಯ ಗಳಿಸುತ್ತಿವೆ. ಆದರೆ, ಆಯಾ ಬಡಾವಣೆಗಳಿಗೆ ಮೂಲ ಸೌಲಭ್ಯ ಒದಗಿಸದ ಕಾರಣ ಅಲ್ಲಿ ವಾಸಿಸುವ ಜನರು ನಗರದೊಳಗಿದ್ದರೂ ಸೌಲಭ್ಯಗಳಿಂದ ವಂಚಿತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಭಾಗವಾಗಿಯೇ ಇರುವ ಮೆದೇಹಳ್ಳಿ, ಚೋಳಗಟ್ಟ, ಮದಕರಿಪುರ, ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿಗಳು ಜಿಲ್ಲೆಯಲ್ಲೇ ಹೆಚ್ಚು ಆದಾಯ ಪಡೆಯುತ್ತಿವೆ. ಎಲ್ಲೆಡೆ ಖಾಸಗಿ ಲೇಔಟ್ಗಳು ತಲೆ ಎತ್ತಿದ್ದು ನಿವೇಶನಗಳ ಬೆಲೆ ಗಗನಕ್ಕೇರಿದೆ. ಬಹುತೇಕ ಬಡಾವಣೆಗಳು ನಗರದೊಳಗೇ ಇದ್ದರೂ ನಗರಸಭೆಯಿಂದ ಯಾವುದೇ ಸೌಲಭ್ಯ ಒದಗಿಸಿಲ್ಲ. ಗ್ರಾಮ ಪಂಚಾಯಿತಿಗಳೇ ಅವುಗಳಿಗೆ ಸೌಲಭ್ಯ ಒದಗಿಸಬೇಕಾಗಿದೆ.

ಆಸ್ತಿಗಳ ಕಂದಾಯ, ಖಾತೆ, ಇ–ಸ್ವತ್ತು ಮುಂತಾದ ಮೂಲಗಳಿಂದ ಗ್ರಾಮ ಪಂಚಾಯಿತಿಗಳಿಗೆ ಆದಾಯ ಹರಿದು ಬರುತ್ತದೆ. ಆದರೆ ಬಡಾವಣೆಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ಮಂಡಳಿ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು ಜನರು ಸೌಲಭ್ಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಜನರು ಸಮರ್ಪಕವಾಗಿ ಕಂದಾಯ ಕಟ್ಟಿದ್ದರೂ ಈ ಬಡಾವಣೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ನಗರದ ಪ್ರಮುಖ ವಾಣಿಜ್ಯ ಕೇಂದ್ರದಂತಿರುವ ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಕವಾಗಿ ಬೆಳೆಯುತ್ತಿದೆ. ನಗರವಾಸಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಒಮ್ಮೆ ಖರೀದಿ ಮಾಡಿದವರು ಮತ್ತೆ ಮತ್ತೆ 2, 3ನೇ ಕೈ ಮಾರಾಟ ಮಾಡುತ್ತಿರುವ ಕಾರಣ ಗ್ರಾಮ ಪಂಚಾಯಿತಿಗೆ ಹೆಚ್ಚು ಆದಾಯ ಬರುತ್ತಿದೆ.

ನಗರದ ಪ್ರತಿಷ್ಠಿತ ಬಡಾವಣೆ ಎಂದೇ ಪ್ರಖ್ಯಾತಿ ಪಡೆದಿರುವ, ಬಹುತೇಕ ಉದ್ಯಮಿಗಳೇ ಮನೆಕಟ್ಟಿಕೊಟ್ಟಿಕೊಂಡಿರುವ ವಿದ್ಯಾನಗರ, ತಮಟಗಲ್ಲು ರಸ್ತೆಯ ಭಾಗ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಹಳೇ ರಾಷ್ಟ್ರೀಯ ಹೆದ್ದಾರಿಯ ಎಪಿಎಂಸಿ ಮೇಲ್ಸೇತುವೆ ಬಳಿಯಿಂದ ಮೇಗಲಹಳ್ಳಿವರೆಗೂ ಪಂಚಾಯಿತಿ ಚಾಚಿಕೊಂಡಿದೆ. ಆದರೆ, ಮೆದೇಹಳ್ಳಿಯ ವಿವಿಧ ರಸ್ತೆಗಳಲ್ಲಿ ತೆರದ ಚರಂಡಿಗಳ ಹಾವಳಿಯಿಂದ ಜನರು ದುರ್ವಾಸನೆ ನಡುವೆ ಬದುಕುವ ಪರಿಸ್ಥಿತಿ ಇದೆ.

ಸ್ವಚ್ಛತೆ ಮರೀಚಿಕೆಯಾಗಿದ್ದು ನಿತ್ಯ ಜನರು ತ್ಯಾಜ್ಯದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಸದ ಗಾಡಿ ನಿಯಮಿತವಾಗಿ ಬಾರದ ಕಾರಣ ಸಾರ್ವಜನಿಕರು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುವುದು ಸಾಮಾನ್ಯವಾಗಿದೆ. ಮೆಡಿಕಲ್ ಸ್ಟೋರ್, ಖಾಸಗಿ ಕ್ಲಿನಿಕ್, ಆಸ್ಪತ್ರೆಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಬೆಂಕಿ ಹಚ್ಚಿ ಸುಡುತ್ತಿದ್ದು ಜನರಿಗೆ ರೋಗಭೀತಿ ಅನುಭವಿಸುತ್ತಿದ್ದಾರೆ.

ಮೆದೇಹಳ್ಳಿ ವ್ಯಾಪ್ತಿಯ ಖಾಸಗಿ ಲೇಔಟ್ಗಳಲ್ಲಿ ನಿವೇಶನ ಖರೀದಿ ಮಾಡಿದವರು ನರಕಸದೃಶ ಜೀವನ ನಡೆಸುವಂತಾಗಿದೆ. ನಿವೇಶನ ಖರೀದಿ ಮಾಡಿ ಮನೆ ನಿರ್ಮಿಸುವ ವೇಳೆಗೆ ಅಲ್ಲಿಯ ರಸ್ತೆಗಳು ಗಿಡಗಂಟಿಯೊಳಗೆ ಮುಳುಗುತ್ತಿವೆ. ಬೆರಳೆಣಿಕೆಯಷ್ಟು ಮನೆಗಳು ಅಲ್ಲಿ ನಿರ್ಮಾಣಗೊಂಡಿದ್ದರೂ ಅಲ್ಲಿಗೆ ತೆರಳಲು ನಿವಾಸಿಗಳು ಕಷ್ಟ ಪಡುತ್ತಾರೆ. ಮಳೆಗಾಲದಲ್ಲಿ ಕೆಸರಿನ ನಡುವೆಯೇ ಜನರು ಬದುಕುವ ಪರಿಸ್ಥಿತಿ ಇದೆ.

‘ಮೆದೇಹಳ್ಳಿ ಗ್ರಾಮ ಪಂಚಾಯಿತಿಗೆ ನಾವು ನೀರಿನ ಕರವನ್ನು ತಪ್ಪದೇ ಪಾವತಿ ಮಾಡುತ್ತೇವೆ. ಆದರೆ ಅಧಿಕಾರಿಗಳು ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಕಚೇರಿಗೆ ತೆರಳಿದರೆ ಅಧಿಕಾರಿಗಳೂ ಕೈಗೆ ಸಿಗುತ್ತಿಲ್ಲ. ಎಲ್ಲೆಡೆ ಕಸ ಬಿದ್ದು ಚೆಲ್ಲಾಡುತ್ತಿದ್ದು ಸ್ವಚ್ಛ ಮಾಡುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ವಿದ್ಯಾನಗರ ಬಡಾವಣೆ ನಿವಾಸಿಗಳು ಆರೋಪಿಸಿದರು.

ಚೋಳಗಟ್ಟ ಕತೆ: ಚೋಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಳಪ್ಪನಹಟ್ಟಿ, ಕಿರುಬನಕಲ್ಲು, ಗಾರೆಹಟ್ಟಿ ಬಡಾವಣೆಗಳು ನಗರಕ್ಕೆ ಹತ್ತಿರದಲ್ಲಿವೆ. ಈ ಬಾಗದಲ್ಲಿ ಹೆಚ್ಚು ಖಾಸಗಿ ಲೇಔಟ್ಗಳಿದ್ದು ಗ್ರಾಮ ಪಂಚಾಯಿತಿಗೆ ಹೆಚ್ಚು ಆದಾಯ ಬರುತ್ತದೆ. ಆದರೆ ಬಹುತೇಕ ಬಡಾವಣೆಗಳಿಗೆ ಗ್ರಾಮ ಪಂಚಾಯಿತಿಯಿಂದ ಸೌಲಭ್ಯ ದೊರೆಯುತ್ತಿಲ್ಲ. ಇಲ್ಲಿ ಕುಡಿಯುವ ನೀರಿನ ವ್ಯತ್ಯಯ ಹೆಚ್ಚಾಗಿದ್ದು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಬಹುತೇಕ ಕಡೆಗಳಲ್ಲಿ ಜಲಜೀವನ ಮಿಷನ್ ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಅದನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಹೀಗಾಗಿ ಜನರು ರಸ್ತೆಯಲ್ಲಿ ಓಡಾಡಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲಿಯ ಕನಕ ಬೀದಿಯಲ್ಲಿ ರಸ್ತೆಗಳಲ್ಲಿ ದೊಡ್ಡ ತಗ್ಗುಗಳು ಬಿದ್ದಿದ್ದು ಜನರು, ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿಯ ಜನರು ಆರೊಪಿಸುತ್ತಾರೆ.

ಮಾಳಪ್ಪನಹಟ್ಟಿಯಲ್ಲಿರುವ ಐತಿಹಾಸಿಕ ಖಾದಿ ಕೇಂದ್ರ ಕಸದ ತೊಟ್ಟಿಯಂತಾಗಿದೆ. ಸಾರ್ವಜನಿಕರು ಕಸ ತಂದು ಈ ಕೇಂದ್ರದ ಮುಂದೆಯೇ ಸುರಿಯುತ್ತಾರೆ. 6 ತಿಂಗಳಾದರೂ ಸ್ವಚ್ಛ ಮಾಡದ ಕಾರಣ ದುರ್ವಾಸನೆ ಸಾರ್ವಜನಿಕರನ್ನು ಕಾಡುತ್ತಿದೆ. ಬಡಾವಣೆಗಳಿಗೆ ಕಸದ ವಾಹನವೂ ಬಾರದ ಕಾರಣ ಜನರು ಕಸ ಎಲ್ಲಿಗೆ ಹಾಕಬೇಕು ಎಂದು ಪ್ರಶ್ನಿಸುತ್ತಾರೆ.

ಮದಕರಿಪುರದಲ್ಲೂ ಇದೇ ಸಮಸ್ಯೆ; ಮದಕರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಬಡಾವಣೆಗಳು ನಗರಕ್ಕೆ ಹೊಂದಿಕೊಂಡಂತಿವೆ. ಚಳ್ಳಕೆರೆ ರಸ್ತೆಯಲ್ಲಿರುವ ಹಲವು ಖಾಸಗಿ ಲೇಔಟ್ಗಳು ಮದಕರಿಪುರ ಗ್ರಾ.ಪಂ ವ್ಯಾಪ್ತಿಗೆ ಬರುತ್ತವೆ. ಬಹುತೇಕ ಬಡಾವಣೆಗಳನ್ನು ನಗರಸಭೆ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಆದರೂ ಹಲವು ಹೊಸ ಬಡಾವಣೆಗಳನ್ನು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲೇ ಇವೆ.

ವೆಂಕಟೇಶ್ವರ ಬಡಾವಣೆ, ವಿನಾಯಕ ಸಮುದಾಯ ಭವನದ ಭಾಗ, ಆದಿಚುಂಚನಗಿರಿ ಕಾಲೇಜು ವ್ಯಾಪ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಇದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ಈ ಭಾಗದ ಜನರು ಕುಡಿಯುವ ನೀರಿನ ಕೊರತೆಯನ್ನೂ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ದೂರುಗಳಿಗೆ ಸ್ಪಂದಿಸುವುದಿಲ್ಲ ಎಂದು ಈ ಭಾಗದ ಜನರು ಆರೋಪಿಸುತ್ತಾರೆ. ಮಠದ ಕುರುಬರ ಹಟ್ಟಿ ಗ್ರಾ. ಪಂ ವ್ಯಾಪ್ತಿಯ ಬಡಾವಣೆಗಳಲ್ಲೂ ಇದೇ ಪರಿಸ್ಥಿತಿ ಇದೆ.

‘ನಗರದ ಸಮೀಪದಲ್ಲಿರುವ ಗ್ರಾಮ ಪಂಚಾಯಿತಿಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಅಧಿಕಾರಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಇ–ಖಾತೆ ನೀಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ. ₹ 5,000 ಕೊಟ್ಟರೆ ಅರ್ಧ ಗಂಟೆಯಲ್ಲಿ ಇ–ಖಾತೆ ಕೊಡುತ್ತಾರೆ. ಹಣ ಕೊಡದಿದ್ದರೆ 6 ತಿಂಗಳು ಅಲೆದಾಡಿಸುತ್ತಾರೆ’ ಎಂದು ವಕೀಲ ಬಿ.ಮಂಜುನಾಥ್ ಆರೋಪಿಸಿದರು.

ನಗರ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಬಡಾವಣೆಗಳ ಜನರಿಗೆ ಸೌಲಭ್ಯ ನೀಡುವಂತೆ ಜಾಗೃತಿ ಮೂಡಿಸಲಾಗುವುದು. ಬರುವ ಆದಾಯದ ಸದುಪಯೋಗ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗುವುದು
ಟಿ.ವೆಂಕಟೇಶ್ ಜಿಲ್ಲಾಧಿಕಾರಿ

ಗ್ರಾ.ಪಂ– ನಗರಸಭೆ ನಡುವೆ ತಿಕ್ಕಾಟ

-ಸುವರ್ಣಾ ಬಸವರಾಜ್

ಹಿರಿಯೂರು: ನಗರಕ್ಕೆ ಹೊಂದಿಕೊಂಡಿರುವ ಬಬ್ಬೂರು ಉಡುವಳ್ಳಿ ಆದಿವಾಲ ಹಾಗೂ ಮೇಟಿಕುರ್ಕೆ ಗ್ರಾಮ ಪಂಚಾಯಿತಿಗಳು ವಿವಿಧ ಮೂಲಗಳಿಂದ ಆದಾಯ ಗಳಿಸುತ್ತವೆ. ಬಡಾವಣೆ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ನಿವೇಶನ ಹಂಚಿಕೆಗಳ ನಂತರ ಪ್ರತಿ ನಿವೇಶನದ ಖಾತೆಗೆ ನಂತರ ಪ್ರತಿವರ್ಷ ನಿವೇಶನ ಕಂದಾಯದಿಂದ ಆದಾಯವಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿರುವ ಕಾರಣ ನಗರಸಭೆ ಹಾಗೂ ಗ್ರಾ.ಪಂ ನಡುವೆ ತಿಕ್ಕಾಟ ಆರಂಭವಾಗಿದೆ. ‘ನಗರಸಭೆ ವಶಕ್ಕೆ ಹೋಗಿರುವ ಬಡಾವಣೆ ಹಾಗೂ ಪ್ರದೇಶವನ್ನು ನಗರಸಭೆಯವರು ಸ್ವಚ್ಛಗೊಳಿಸಬೇಕು. ಆದರೆ ನಗರಸಭೆಗೆ ಸೇರಿದ ಜಾಗದ ತ್ಯಾಜ್ಯ ಮಳೆಯ ನೀರು ಗ್ರಾಮ ಪಂಚಾಯಿತಿ ಪ್ರದೇಶಕ್ಕೆ ಸೇರುತ್ತಿರುವ ಕಾರಣ ಸ್ವಚ್ಛತೆ ಸವಾಲಾಗಿದೆ. ಶೀಘ್ರದಲ್ಲಿಯೇ ನಗರಕ್ಕೆ ಹೊಂದಿಕೊಂಡಿರುವ ಎಲ್ಲಾ ಗ್ರಾಮ ಪಂಚಾಯಿತಿಗಳವರು ನಗರಸಭೆ ಪೌರಾಯುಕ್ತರ ಗಮನಕ್ಕೆ ತರುತ್ತೇವೆ. ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ನೌಕರರು ಸಿಗುವುದೇ ಕಷ್ಟ ಎನ್ನುತ್ತಾರೆ’ ಎಂದು ಸದಸ್ಯರು ಹೇಳುತ್ತಾರೆ.‘ನಗರಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳ ಯಾವ ಭಾಗವನ್ನು ನಗರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿ ಗಡಿ ಗುರುತು ಮಾಡಬೇಕು. ನಗರಸಭೆ–ಗ್ರಾಮಪಂಚಾಯಿತಿ ಆಡಳಿತದ ನಡುವಿನ ತಿಕ್ಕಾಟದಿಂದ ಸ್ವಚ್ಛತಾ ಕಾರ್ಯಕ್ಕೆ ಅಡ್ಡಿಯಾಗಿದೆ. ಆದಷ್ಟು ಬೇಗ ಸರಿಯಾದ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕು. ರಸ್ತೆಚರಂಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು’ ಎನ್ನುತ್ತಾರೆ ಬಬ್ಬೂರಿನ ಎಂ.ಟಿ. ಸುರೇಶ್.

ಗ್ರಾ.ಪಂ.ಗೆ ಆದಾಯ ನಗರಸಭೆಗೆ ನಷ್ಟ

-ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ : ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಕನಹಟ್ಟಿ ರಸ್ತೆ ವೆಂಕಟೇಶ್ವರನಗರ ಮತ್ತು ಬೆಂಗಳೂರು ರಸ್ತೆ ನರಹರಿನಗರ ಖಾತೆ ಹೊಂದಿರುವ ಕೆಲ ನಿವಾಸಿಗಳು ವಾಸವಿರುವ ಪ್ರದೇಶಕ್ಕೆ ನಗರಸಭೆ ರಸ್ತೆ ಚರಂಡಿ ಶುದ್ಧ ಕುಡಿಯುವ ನೀರು ವಿದ್ಯುತ್ ಶೌಚಾಲಯ ಕಸವಿಲೇವಾರಿ ಮುಂತಾದ ಸೌಲಭ್ಯ ಒದಗಿಸುತ್ತಿದೆ. ಮನೆಖಾತೆ ನೀರಿನ ತೆರಿಗೆ ಹೀಗೆ ವಿವಿಧ ಮೂಲಗಳಿಂದ ಗ್ರಾಮ ಪಂಚಾಯಿತಿಗೆ ಅಧಿಕ ಸಂಪನ್ಮೂಲ ಸಂಗ್ರಹವಾಗುತ್ತಿದ್ದರೂ ಇದರಿಂದ ನಗರಪ್ರದೇಶಕ್ಕೆ ಯಾವುದೇ ರೀತಿಯ ಆದಾಯ ಬರುತ್ತಿಲ್ಲ ನಗರಸಭೆ ಸೌಲಭ್ಯ ಬಳಸಿಕೊಂಡು ವಿವಿಧ ತೆರಿಗೆ ಆಯಾ ಗ್ರಾಮ ಪಂಚಾಯಿತಿಗೆ ಪಾವತಿಸುತ್ತಾರೆ. ಇದರಿಂದ ನಗರಸಭೆ ಸಾಕಷ್ಟು ನಷ್ಟವಾಗುತ್ತಿದೆ. ಅಲ್ಲದೆ ಗಾಂಧಿನಗರ ಅಂಬೇಡ್ಕರ್ ನಗರ ಜನತಾ ಕಾಲೊನಿ ರಹೀಂ ನಗರದಲ್ಲಿ 15–20 ವರ್ಷದಿಂದ ನೂರಾರು ಮನೆ ನಗರಸಭೆಯಲ್ಲಿ ಖಾತೆಯಾಗಿಲ್ಲದಿದ್ದರೂ ಮಾನವೀಯತೆಯಿಂದ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ. ಈ ನಗರದಿಂದ ಬಿಡಿಗಾಸು ತೆರಿಗೆ ನಗರಸಭೆಗೆ ಪಾವತಿಯಾಗುತ್ತಿಲ್ಲ. ಹೀಗಾಗಿ ನಗರಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲ ಗ್ರಾಮಗಳ ನಗರಸಭೆ ಸೇರ್ಪಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಗರದ ನಿವಾಸಿ ತಿಪ್ಪೇಸ್ವಾಮಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.