ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಮೇ ತಿಂಗಳ ವಿದ್ಯುತ್ ಬಿಲ್ ದುಬಾರಿ; ಗ್ರಾಹಕರಿಗೆ ಶಾಕ್

Published 8 ಜೂನ್ 2023, 5:55 IST
Last Updated 8 ಜೂನ್ 2023, 5:55 IST
ಅಕ್ಷರ ಗಾತ್ರ

ವಿ.ಧನಂಜಯ

ನಾಯಕನಹಟ್ಟಿ: ಪ್ರತಿ ತಿಂಗಳ ವಿದ್ಯುತ್ ದರಕ್ಕಿಂತ ಮೇ ತಿಂಗಳ ವಿದ್ಯುತ್ ಬಿಲ್ ದರದಲ್ಲಿ ಹೆಚ್ಚಳವಾಗಿರುವುದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಸ್ಕಾಂ ಸಿಬ್ಬಂದಿ ಬುಧವಾರ ಮನೆಮನೆಗೂ ತೆರಳಿ ಮೀಟರ್ ರೀಡಿಂಗ್‌ ಮಾಡಿ ಬಿಲ್ ನೀಡಿದಾಗ, ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೆಚ್ಚಿನ ದರ ನಮೂದಾಗಿದೆ. ಬಿಲ್‌ ಕಂಡ ಗ್ರಾಹಕರು ದಂಗಾಗಿ ಹೋಗಿದ್ದಾರೆ. 

1 ರಿಂದ 50 ಯುನಿಟ್‌ವರೆಗೂ ₹4.15, 50ರಿಂದ 100 ಯುನಿಟ್‌ಗೆ ₹5.60, 100ಕ್ಕಿಂತ ಹೆಚ್ಚು ಯುನಿಟ್ ಬಳಸಿದರೆ ₹7.15 ದರವನ್ನು ಈ ಹಿಂದೆ ನಿಗದಿ ಮಾಡಲಾಗಿತ್ತು. ಆದರೆ ಮೇ ತಿಂಗಳ ಬಿಲ್‌ನಲ್ಲಿ ಈ ಮೂರೂ ಹಂತಗಳನ್ನು ಕೈಬಿಡಲಾಗಿದೆ. 100ಕ್ಕಿಂತ ಕಡಿಮೆ ಯುನಿಟ್‌ ಹಾಗೂ 100ಕ್ಕಿಂತ ಹೆಚ್ಚು ಯುನಿಟ್ ಎಂಬ ಎರಡು ಹಂತಗಳನ್ನು ಮಾಡಲಾಗಿದೆ. ಮೊದಲ ಹಂತದಲ್ಲಿ ₹4.75 ಹಾಗೂ ಎರಡನೇ ಹಂತದಲ್ಲಿ ₹7 ದರ ನಿಗದಿಯಾಗಿದೆ. ಹಾಗೆಯೇ ಇತರೆ ಶುಲ್ಕ ಎಂದು ಹೊಸದೊಂದು ಕಾಲಂ ಸೃಜಿಸಿ ಅಲ್ಲಿಯೂ ಸಹ ಹೆಚ್ಚಿನ ದರ  ನಮೂದಿಸಲಾಗಿದೆ. ಆದರೆ ಇತರೆ ಶುಲ್ಕಕ್ಕೆ ಯಾವುದೇ ವಿವರಣೆ ನೀಡಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ. 

ಹೀಗಾಗಿ ಮೇ ತಿಂಗಳ ವಿದ್ಯುತ್ ಬಿಲ್ ಬಲು ದುಬಾರಿಯಾಗಿದೆ. ಈ ಬಗ್ಗೆ ಮೀಟರ್‌ ರೀಡರ್, ಬೆಸ್ಕಾಂ ಅಧಿಕಾರಿಗಳಿಗೆ ವಿಚಾರಿಸಿದರೆ ಯಾರೂ ಸಮರ್ಪಕವಾದ ಉತ್ತರಗಳನ್ನು ನೀಡುತ್ತಿಲ್ಲ. ಏಕಾಏಕಿ ಇಷ್ಟೊಂದು ಬಿಲ್ ನೀಡಿದರೆ ಪಾವತಿಸುವುದಾದರೂ ಹೇಗೆ ಎಂದು ಪಟ್ಟಣದ ನಾಗರಿಕರಾದ ಮಾರುತೇಶ್, ನಾಗರಾಜ್, ಶ್ರೀನಿವಾಸ್, ಅಪ್ಪಣ ಆಕ್ರೋಶ ವ್ಯಕ್ತಪಡಿಸಿದರು.

‘ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೇ 12ರಂದು ಗೃಹಬಳಕೆಯ ಪ್ರತಿ ಯುನಿಟ್‌ಗೆ ಸರಾಸರಿ 70 ಪೈಸೆಯಷ್ಟು ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಹಾಗಾಗಿ ಮೇ ತಿಂಗಳ ವಿದ್ಯುತ್ ಬಿಲ್ ಕೊಂಚ ಹೆಚ್ಚಾಗಿದೆ. ಅಷ್ಟೆ ಅಲ್ಲದೇ ವಿದ್ಯುತ್‌ ದರ ಹೆಚ್ಚಳವನ್ನು ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದರ ಹೆಚ್ಚಾಗಿರುವ ಬಾಕಿ ಬಿಲ್ ಮೊತ್ತವನ್ನು ಇತರೆ ಶುಲ್ಕದಲ್ಲಿ ಸೇರಿಸಲಾಗಿದೆ’ ಎಂದು ಬೆಸ್ಕಾಂ ತಳಕು ಉಪವಿಭಾಗೀಯ ಕಚೇರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಜು ಅವರು ವಿವರಣೆ ನೀಡಿದ್ದಾರೆ. 

ಕೆಇಆರ್‌ಸಿ ಹೊಸ ನಿಯಮದಂತೆ, ಗೃಹಬಳಕೆಯ 1 ರಿಂದ 99 ಯುನಿಟ್‌ವರೆಗೆ ₹4.75 ಮತ್ತು 100 ಯುನಿಟ್‌ಗಿಂತ ಹೆಚ್ಚು ಬಳಕೆಗೆ ₹7 ದರ ನಿಗದಿಪಡಿಸಲಾಗಿದೆ. ಹೀಗಾಗಿ ಮೇ ತಿಂಗಳ ಬಿಲ್‌ ಮೊತ್ತವೂ ಹೆಚ್ಚಾಗಿದ್ದು, ಗ್ರಾಹಕರು ಬೆಸ್ಕಾಂ ಸಿಬ್ಬಂದಿ ಜತೆ ಸಹಕರಿಸಬೇಕು’ ಎಂದು ಅವರು ಹೇಳಿದ್ದಾರೆ.

...
...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT