ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಕೆರೆಗಳಂತಾಗಿವೆ ರೈಲ್ವೆ ಕೆಳ ಸೇತುವೆ

Published 27 ಮೇ 2024, 5:47 IST
Last Updated 27 ಮೇ 2024, 5:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂಚಾರ ದಟ್ಟಣೆ ಹಾಗೂ ಅಪಘಾತ ನಿಯಂತ್ರಣದ ಉದ್ದೇಶದಿಂದ ಜಿಲ್ಲೆಯಲ್ಲಿ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಗಳು ಸಮಸ್ಯೆಗಳ ಕೂಪಗಳಾಗಿವೆ. ಮಳೆ ಬಂತೆಂದರೆ ಚಿಕ್ಕ..ಚಿಕ್ಕ ಕೆರೆಗಳು ಸೃಷ್ಟಿಯಾಗುತ್ತವೆ!

ವರ್ಷಧಾರೆಯಾದಾಗ ಸಂಭ್ರಮಿಸುವ ಜನರಿಗೆ ಕೆರೆ, ಹೊಂಡ, ಹಳ್ಳಗಳ ಸ್ವರೂಪ ಪಡೆಯುವ ಕೆಳ ಸೇತುವೆಗಳನ್ನು ದಾಟುವುದು ಸವಾಲಾಗಿದೆ. ನೀರಿನಮಟ್ಟ ಅಂದಾಜಿಸಲು ಸಾಧ್ಯವಾಗದೆ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವುದು ತೀರ ಸಾಮಾನ್ಯವಾಗಿದೆ.

ಬೆಂಗಳೂರು–ಮುಂಬೈ ರೈಲು ಮಾರ್ಗ ಚಿಕ್ಕಜಾಜೂರು ಮೂಲಕ ಹಾಗೂ ಕರ್ನಾಟಕ–ಆಂಧ್ರಪ್ರದೇಶ–ಬಳ್ಳಾರಿ ಸಂಪರ್ಕಿಸುವ ರೈಲು ಮಾರ್ಗ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು ಮೂಲಕ ಹಾದುಹೋಗಿದೆ. ಜಿಲ್ಲೆಯ ಈ ಮಾರ್ಗದಲ್ಲಿ 30ಕ್ಕೂ ಹೆಚ್ಚು ರೈಲ್ವೆ ಕೆಳಸೇತುವೆಗಳಿವೆ.

ರಾಜ್ಯ ಹೆದ್ದಾರಿ, ಗ್ರಾಮೀಣ ರಸ್ತೆಗಳಿಗೆ ಸಾಮಾನ್ಯವಾಗಿ ಕೆಳ ಸೇತುವೆಗಳೇ ಆಸರೆ. ಸಂಚಾರ ಸುಗಮಗೊಳಿಸುವ ಆಶಯದೊಂದಿಗೆ ನಿರ್ಮಾಣವಾಗಿರುವ ಈ ಸೇತುವೆಗಳು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಸಣ್ಣ ಮಳೆ ಸುರಿದರೂ ಸಾಕು ಸೇತುವೆಯ ಕೆಳಭಾಗದಲ್ಲಿ ಆಳೆತ್ತರದಷ್ಟು ನೀರು ನಿಲ್ಲುತ್ತದೆ.

ಜಿಲ್ಲಾ ಕೇಂದ್ರದಿಂದ ನಾಯಕನಹಟ್ಟಿ, ತುರುವನೂರು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸಣ್ಣ ಮಳೆಗೂ ಸಂಪರ್ಕ ಕಡಿತಗೊಳ್ಳುತ್ತದೆ. ಮಳೆ ಸುರಿದರೆ ವಾಹನ ಸವಾರರಿಗೆ ಹಳ್ಳಿ ರಸ್ತೆಯೇ ಆಸರೆಯಾಗಿದೆ. ಹತ್ತಾರು ಕಿ.ಮೀ ಸುತ್ತಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ.

ಸೇತುವೆ ಕೆಳಭಾಗದಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಿಸಿದ ಚರಂಡಿಯೇ ಕಂಟಕವಾಗಿದೆ. ಮಳೆ ನಿಂತು ಹಲವು ದಿನ ಕಳೆದರೂ ಇಲ್ಲಿರುವ ನೀರು ಮಾತ್ರ ಕರಗುವುದಿಲ್ಲ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಒತ್ತಡ ಹೆಚ್ಚಾದಾಗ ಮೋಟಾರು ಇಟ್ಟು ನೀರು ಹೊರತೆಗೆಯಲಾಗುತ್ತದೆ. ಶಾಶ್ವತ ಪರಿಹಾರಕ್ಕೆ ಈವರೆಗೆ ಪ್ರಯತ್ನ ನಡೆದಿಲ್ಲ.

ಚಿತ್ರದುರ್ಗ–ಚಳ್ಳಕೆರೆ– ಹೊಸಪೇಟೆ–ಗುಂತ್ಕಲ್‌ ರೈಲು ಮಾರ್ಗಕ್ಕೆ ತುರುವನೂರು ರಸ್ತೆ ಬಳಿ ಗೇಟು ಇತ್ತು. ರೈಲು ಸಂಚರಿಸುವ ಸಂದರ್ಭದಲ್ಲಿ ವಾಹನಗಳು ಕಿ.ಮೀ ದೂರದವರೆಗೆ ನಿಲುಗಡೆ ಆಗುತ್ತಿದ್ದವು. ಸಂಚಾರ ಸಮಸ್ಯೆಯನ್ನು ನೀಗಿಸುವ ಉದ್ದೇಶದಿಂದ ಕೆಲ ವರ್ಷಗಳ ಹಿಂದೆ ಇಲ್ಲಿ ಸೇತುವೆ ನಿರ್ಮಿಸಲಾಯಿತು. ಚಿತ್ರದುರ್ಗ–ತುರುವನೂರು ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂಬ ಭಾವನೆ ಇತ್ತು. ಆದರೆ, ಈ ಸೇತುವೆಯೇ ಸಂಚಾರಕ್ಕೆ ತೊಡಕಾಗಿದೆ.

ತುರುವನೂರು ರಸ್ತೆ ಮಾರ್ಗವಾಗಿ ಗೋನೂರು, ಹೋ.ಚಿ. ಬೋರಯ್ಯ ಬಡಾವಣೆ, ಬಚ್ಚಬೋರನಹಟ್ಟಿ, ಬೊಮ್ಮೆನಹಳ್ಳಿ, ಹಂಪಯ್ಯನಮಾಳಿಗೆ, ಹಾಯ್ಕಲ್, ಬೆಳಗಟ್ಟ, ತುರುವನೂರು, ನಾಯಕನಹಟ್ಟಿ ಸೇರಿ ಹಲವು ಗ್ರಾಮಗಳಿಗೆ ತೆರಳಬಹುದಾಗಿದೆ. ನಿತ್ಯ ಸಾವಿರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ.

ನಗರ ಸಮೀಪದ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಬರುತ್ತಾರೆ. ಈ ಭಾಗದ ರೈತರು ಹೂವು, ತರಕಾರಿ, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಸೇತುವೆ ಆಚೆಗೂ ನಗರ ವಿಸ್ತರಿಸಿದೆ. ಹಲವು ಬಡಾವಣೆಗಳು ನಿರ್ಮಾಣವಾಗಿವೆ. ಸಣ್ಣ ಮಳೆ ಸುರಿದರೂ ಇಲ್ಲಿನ ನಿವಾಸಿಗಳಿಗೆ ಸಂಪರ್ಕ ಕಡಿತಗೊಳ್ಳುವ ಆತಂಕ. ನಗರಕ್ಕೆ ಬಂದವರು ಮನೆಗೆ ಮರಳಲು ಹತ್ತಾರು ಕಿ.ಮೀ ಸುತ್ತಬೇಕು. ನಗರಕ್ಕೆ ಬರುವವರೂ ಇದೇ ಸಮಸ್ಯೆ ಎದುರಿಸಬೇಕು.

ಸೇತುವೆ ನಿರ್ಮಾಣವಾದರೂ ಮಳೆಗಾಲದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ ಎಂಬ ಅಳಲು ಈ ಮಾರ್ಗದ ಪ್ರಯಾಣಿಕರದ್ದು. ಇನ್ನೂ ಸಂಚಾರ ಸಮಸ್ಯೆ ನಿಯಂತ್ರಿಸಲೆಂದೇ ಮೆದೇಹಳ್ಳಿ ರಸ್ತೆ ಮಾರ್ಗದಲ್ಲಿ ನಿರ್ಮಿಸಿರುವ ರೈಲ್ವೆ ಕೆಳಸೇತುವೆ ಸಮಸ್ಯೆಯಿಂದ ಹೊರತಾಗಿಲ್ಲ.

ಜಿಲ್ಲೆಯ ಬಹುತೇಕ ರೈಲ್ವೆ ಕೆಳಸೇತುವೆಗಳ ವಿನ್ಯಾಸವೇ ಅವೈಜ್ಞಾನಿಕವಾಗಿದೆ. ವಾಹನ ಸಂಚಾರ ದಟ್ಟಣೆಯನ್ನು ಗಮನಿಸದೇ ಇವುಗಳನ್ನು ನಿರ್ಮಿಸಿದಂತೆ ಕಾಣುತ್ತಿದೆ. ಅತ್ಯಂತ ಕಿರಿದಾಗಿರುವ ಈ ಸೇತುವೆಗಳಲ್ಲಿ ದೊಡ್ಡ ವಾಹನ ಸಂಚಾರ ಅಸಾಧ್ಯ ಎನ್ನುವಂತೆ ಇದೆ. ಎಷ್ಟೋ ಸ್ಥಳಗಳಲ್ಲಿ ಬಸ್‌, ಟ್ರ್ಯಾಕ್ಟರ್‌ ಕೂಡ ಸಂಚರಿಸುವುದಿಲ್ಲ. ಜಮೀನಿಗೆ ತೆರಳುವ ರೈತರು ಇಂತಹ ಸಮಸ್ಯೆಗಳನ್ನು ನಿತ್ಯವೂ ಎದುರಿಸುತ್ತಿದ್ದಾರೆ.

ಚಿಕ್ಕಜಾಜೂರು ಸಮೀಪದ ಅಮೃತಾಪುರದ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ಸಿಲುಕಿದ ಕಾರನ್ನು ಟ್ರ್ಯಾಕ್ಟರ್ ಮೂಲಕ ಎಳೆಯುತ್ತಿರುವುದು
ಚಿಕ್ಕಜಾಜೂರು ಸಮೀಪದ ಅಮೃತಾಪುರದ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ಸಿಲುಕಿದ ಕಾರನ್ನು ಟ್ರ್ಯಾಕ್ಟರ್ ಮೂಲಕ ಎಳೆಯುತ್ತಿರುವುದು
ಚಿಕ್ಕಜಾಜೂರು ಸಮೀಪದ ಹನುಮನಕಟ್ಟೆ ಗ್ರಾಮದ ಬಳಿ ನೀರಿನಲ್ಲಿ ಸಿಲುಕಿದ ಆಟೋ
ಚಿಕ್ಕಜಾಜೂರು ಸಮೀಪದ ಹನುಮನಕಟ್ಟೆ ಗ್ರಾಮದ ಬಳಿ ನೀರಿನಲ್ಲಿ ಸಿಲುಕಿದ ಆಟೋ
ಜಿಲ್ಲೆಯಲ್ಲಿರುವ ರೈಲ್ವೆ ಕೆಳಸೇತುವೆಗಳಲ್ಲಿ ಮಳೆ ನೀರು ನಿಂತು ಜನರು ಅನುಭವಿಸುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಈಗಾಗಲೇ ಮಾಹಿತಿ ಪಡೆಯಲಾಗಿದೆ. ಶೀಘ್ರ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ.
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ
ಜಿಲ್ಲೆಯ ಬಹುತೇಕ ರೈಲ್ವೆ ಕೆಳಸೇತುವೆಗಳ ಮಾರ್ಗಗಳಲ್ಲಿ ಮಳೆ ಸುರಿದಾಗ ಸುಗಮವಾಗಿ ಜನ ಸಂಚರಿಸಲು ಸಾಧ್ಯವಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
-ಅಶೋಕ್‌ ಬೆಳಗಟ್ಟ ವಕೀಲರು ಚಿತ್ರದುರ್ಗ
ಸೋಮಗುದ್ದು ಬುಡ್ನಹಟ್ಟಿ ಚಿಕ್ಕಹಳ್ಳಿ ಗ್ರಾಮದ ರೈಲ್ವೆ ಕೆಳ ಸೇತುವೆಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತ ಸಾಮಾನ್ಯವಾಗಿವೆ. ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸೂಕ್ತ ನಿರ್ವಹಣೆ ಮೂಲಕ ಸಮಸ್ಯೆ ಬಗೆಹರಿಸಬೇಕು.
- ಬಸವರಾಜ ಚಳ್ಳಕೆರೆ ನಿವಾಸಿ
ಜನರ ಅನುಕೂಲಕ್ಕೆಂದು ನಿರ್ಮಿಸಿರುವ ಕೆಳ ಸೇತುವೆಗಳು ಸಮಸ್ಯೆಯ ಕೂಪಗಳಾಗಿವೆ. ಸೇತುವೆಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಬೇಕು. ಅವೈಜ್ಞಾನಿಕ ಕಾಮಗಾರಿಗಳನ್ನು ಗುರುತಿಸಿ ಸಮಸ್ಯೆ ಬಗೆಹರಿಸಬೇಕು. ಮೊದಲ ಆದ್ಯತೆಯಾಗಿ ಗುಂಡಿಗಳನ್ನು ಮುಚ್ಚಿ ಜನರ ಜೀವ ಉಳಿಸಬೇಕು.
.ನೇತ್ರಾವತಿ ಚಳ್ಳಕೆರೆ ನಿವಾಸಿ

ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ

ರೈಲ್ವೆ ಹಳಿಗಳಿಗೆ ನಿರ್ಮಿಸಿದ ಕೆಳಸೇತುವೆಗಳ ಅವಾಂತರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಅವರು ಐದು ವರ್ಷಗಳಲ್ಲಿ ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಮೆದೇಹಳ್ಳಿ ರಸ್ತೆ ತುರುವನೂರು ರಸ್ತೆ ಕಾಟೀಹಳ್ಳಿ ಪಣಜನಹಳ್ಳಿ ಹನುಮನಕಟ್ಟೆ ಪಾಡಿಗಟ್ಟೆ ಕೆಳಸೇತುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕಿದೆ.

ಅಧಿಕಾರಿಗಳು ಅಧ್ಯಯನ ಮಾಡಿ ಸಮಸ್ಯೆ ಪತ್ತೆ ಮಾಡಬೇಕು. ತಾಂತ್ರಿಕ ನೆರವು ಪಡೆದು ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಸಹ ಸೂಚಿಸಿದ್ದರು. ಜತೆಗೆ ರೈಲ್ವೆ ನಗರ ಸ್ಥಳೀಯ ಸಂಸ್ಥೆ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿದ್ದರು ಸಹ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿವೆ.

ವಾಹನ ಸಂಚಾರಕ್ಕೆ ಸಂಚಕಾರ

ಚಳ್ಳಕೆರೆ: ತಾಲ್ಲೂಕಿನ ರೈಲ್ವೆ ಕೆಳ ಸೇತುವೆಗಳು ಜನ ಹಾಗೂ ವಾಹನಗಳ ಸಂಚಾರಕ್ಕೆ ಸಂಚಕಾರ ತಂದಿವೆ. ನಗರ ಪ್ರದೇಶದಿಂದ ಗ್ರಾಮೀಣ ಭಾಗದ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ತಾಲ್ಲೂಕಿನ ಸೋಮಗುದ್ದು ನಗರಂಗೆರೆ ನರಹರಿ ನಗರ ಸಮೀಪ ತಳಕು ಬುಡ್ನಹಟ್ಟಿ ಚಿಕ್ಕಮ್ಮನಹಳ್ಳಿ ಚಿಕ್ಕಹಳ್ಳಿ ಗಿರಿಯಮ್ಮನಹಳ್ಳಿ ಮನ್ನೆಕೋಟೆ ಹಾಗೂ ಕೋಡಿಹಳ್ಳಿ ಬಳಿ ಕೆಳ ಸೇತುವೆ ನಿರ್ಮಿಸಲಾಗಿದೆ. ಇವು ಸಂಪೂರ್ಣ ಅವೈಜ್ಞಾನಿಕವಾಗಿರುವ ಕಾರಣ ಮಳೆ ಬಂದರೆ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಇದರಿಂದ ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

ನಿರ್ವಹಣೆ ಇಲ್ಲದ ಕಾರಣ ಮುಳ್ಳು ಜಾಲಿಗಿಡಗಳು ದಟ್ಟವಾಗಿ ಬೆಳೆದಿವೆ. ಜತೆಗೆ ಗುಣಮಟ್ಟದ ಡಾಂಬರ್ ಹಾಕಿಸದಿರುವುದರಿಂದ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ಮಳೆನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಅಲ್ಪ ಮಳೆ ಬಂದರೂ ಸಹ ನೀರು ಒಂದೆರಡು ತಿಂಗಳ ತನಕ ಕೆಳ ಸೇತುವೆಗಳಲ್ಲಿ ನಿಲ್ಲುತ್ತಿದೆ. ರಸ್ತೆ ಬಳಿ ಆಯಾ ಮಾರ್ಗದ ಸೂಚನಾ ಫಲಕ ಬೆಳಕಿನ ವ್ಯವಸ್ಥೆ ದೂರದ ಮಾತಾಗಿದೆ. ಇದರಿಂದ ಬೈಕ್‌ ಸವಾರರು ಬಿದ್ದು ಕೈ ಕಾಲು ಮುರಿದು ಕೊಳ್ಳುವುದು ಸಾಮಾನ್ಯವಾಗಿದೆ. 3-4 ಘಟನೆಗಳಲ್ಲಿ ಜನರು ಮೃತಪಟ್ಟಿದ್ದಾರೆ. ಸರಣಿ ಅವಘಡಗಳು ನಡೆಯುತ್ತಿದ್ದರೂ ರೈಲ್ವೆ ಇಲಾಖೆ ಕ್ರಮವಹಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷಿ ಚಟುವಟಿಕೆಗೆ ತೊಂದರೆ

ಹೊಸದುರ್ಗ: ತಾಲ್ಲೂಕಿನ ಹೊಸದುರ್ಗ ರಸ್ತೆಯ ರೈಲ್ವೆ ನಿಲ್ದಾಣದ ಬಳಿ ವಾಹನಗಳ ಸಂಚಾರಕ್ಕಾಗಿ ಕೆಳ ಸೇತುವೆ ನಿರ್ಮಿಸಿದ್ದು ಮಳೆಗಾಲದಲ್ಲಿ ಇವು ಇದ್ದೂ ಇಲ್ಲದಂತಾಗಿವೆ. ಇಲ್ಲಿನ ಅವಾಂತರಗಳು ನಿತ್ಯ ನಿರಂತರ. ಕಳೆದೊಂದು ವಾರದಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಸತತ ಮಳೆಯ ಪರಿಣಾಮ ರೈಲ್ವೆ ಕೆಳ ಸೇತುವೆಯಲ್ಲಿ ನೀರಿನ ಸಂಗ್ರಹ ಅಧಿಕವಾಗಿದೆ.

ಬಿದರಕೆರೆ ನವಣೆಕೆರೆ ರಾಮಗಿರಿ ಮುದ್ದಾಪುರ ಅರಬಘಟ್ಟ ಸೇರಿದಂತೆ ಹಲವು ಹಳ್ಳಿಗಳ ಸಂಪರ್ಕಕ್ಕೆ ಇರುವುದು ಇದೊಂದೇ ಮಾರ್ಗ. ಮಳೆಯಾದರೆ ಇಲ್ಲಿ ನೀರು ನಿಂತು ಕೆಸರು ಗದ್ದೆ ನಿರ್ಮಾಣವಾಗುತ್ತದೆ. ಗ್ರಾಮದ ವಿದ್ಯಾರ್ಥಿಗಳು ಮಾರುಕಟ್ಟೆಗೆ ಬರುವವರು ಪ್ರತಿ ಬುಧವಾರ ಸಂತೆಗೆ ಬರುವ ಜನರು ಪ್ರಯಾಸ ಪಡುವಂತಾಗಿದೆ. ಮಳೆ ಬಂದಾಗ ಈ ಮಾರ್ಗ ಬಂದ್‌ ಆಗುತ್ತದೆ. ಕೆಲವರು ವಿಧಿಯಿಲ್ಲದೇ ಆ ಮಳೆ ನೀರಿನಲ್ಲೇ ಮುಂದೆ ಸಾಗಲು ಹರಸಾಹಸ ಪಡುತ್ತಾರೆ. ‘ಸೇತುವೆ ನಿರ್ಮಾಣ ಆದ ದಿನದಿಂದಲೂ ಇದೇ ಸಮಸ್ಯೆ. ಮಣ್ಣಿನ ರಸ್ತೆಯಿದ್ದು ಸ್ವಲ್ಪ ಮಳೆ ಬಂದರೂ  ಓಡಾಡಲು ತೊಂದರೆಯಾಗುತ್ತದೆ.

ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ಮಲ್ಲಪ್ಪನಹಳ್ಳಿ ಕೆ.ಕಾಂತ್‌ರಾಜ್. ರೈತರು ಜಮೀನುಗಳಿಗೆ ಇದೇ ಮಾರ್ಗವಾಗಿ ಸಂಚರಿಸಬೇಕು. ಕೆಳ ಸೇತುವೆಯಲ್ಲಿ ಗುಂಡಿಗಳು ಬಿದ್ದ ಪರಿಣಾಮ ಬಿರುಸಿನ ಮಳೆಯಾದರೆ ಕೃಷಿ ಕಾರ್ಯಕ್ಕೂ ತೊಂದರೆಯಾಗುತ್ತಿದೆ.

ನೀರಿನಲ್ಲಿ ಸಿಲುಕುತ್ತಿವೆ ವಾಹನಗಳು

ಚಿಕ್ಕಜಾಜೂರು: ಮಳೆ ಬಂದರೆ ಸಾಕು ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಗಳು ಸಂಪೂರ್ಣ ಜಲಾವೃತವಾಗುತ್ತವೆ. ಪ್ರತಿ ವರ್ಷ ಮಳೆಗಾಲ ಆರಂಭವಾಯಿತೆಂದರೆ ವಾಹನ ಸವಾರರು ಹಾಗೂ ಚಾಲಕರು ರೈಲ್ವೆ ಇಲಾಖೆ ಎಂಜಿನಿಯರ್‌ಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

ರೈಲ್ವೆ ಇಲಾಖೆಯಿಂದ ಚಿಕ್ಕಜಾಜೂರು–ಚಿತ್ರದುರ್ಗ ಚಿಕ್ಕಜಾಜೂರು–ಬೀರೂರು ಚಿಕ್ಕಜಾಜೂರು–ದಾವಣಗೆರೆ ರೈಲ್ವೆ ಮಾರ್ಗದ ಭಾಗಗಳಲ್ಲಿ ಜನ ಹಾಗೂ ವಾಹನಗಳ ಸಂಚಾರಕ್ಕೆಂದು ಕೆಳ ಸೇತುವೆ ನಿರ್ಮಿಸಲಾಗಿದೆ. ಆದರೆ ಅಂದಾಜು 10ಕ್ಕೂ ಹೆಚ್ಚು ಕೆಳ ಸೇತುವೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಸಂಚಾರ ಸಂಪೂರ್ಣ ಸ್ಥಗಿತವಾಗುತ್ತಿದೆ. ಚಿಕ್ಕಜಾಜೂರಿನ ಹೊಸನಗರ ಹಾಗೂ ಸಿದ್ದರಾಮೇಶ್ವರ ಬಡಾವಣೆಗಳಿಗೆ ಹೋಗುವ ಜನರು ಅನಿವಾರ್ಯವಾಗಿ ಒಂದೂವರೆ ಕಿಲೋ ಮೀಟರ್‌ ದೂರ ಕ್ರಮಿಸಿ ಮನೆ ತಲುಪುವ ಸ್ಥಿತಿ ನಿರ್ಮಾಣವಾಗುತ್ತದೆ. ಸಮೀಪದ ಚಿಕ್ಕಂದವಾಡಿ ಗ್ರಾಮಸ್ಥರು ಅಕ್ಷರಶಃ ಜಲ ದಿಗ್ಭಂಧನಕ್ಕೆ ಒಳಗಾಗುತ್ತಿದ್ದಾರೆ.

ನೀರು ಕೆರೆಯಂತೆ ನಿಲ್ಲುತ್ತಿರುವ ಪರಿಣಾಮ ಗ್ರಾಮದಿಂದ ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಚಿಕ್ಕಜಾಜೂರು ರೈಲ್ವೆ ನಿಲ್ದಾಣದ ಸಮೀಪದ ಕೋಟೆಹಾಳ್‌ ಗ್ರಾಮದ ಕೆಳಸೇತುವೆಯ ತಡೆಗೋಡೆಯ ರಂದ್ರಗಳ ಮೂಲಕ ಜಲಪಾತದಂತೆ ನೀರು ಸುರಿಯುತ್ತಿರುತ್ತದೆ. ಇದರಿಂದಾಗಿ ಕೋಟೆಹಾಳ್‌ ಕೊಡಗವಳ್ಳಿ ಕೊಡಗವಳ್ಳಿಹಟ್ಟಿ ಚಿಕ್ಕ ಎಮ್ಮಿಗನೂರು ಹಿರೇಎಮ್ಮಿಗನೂರು ಕಾಮನಹಳ್ಳಿ ಗ್ರಾಮಗಳಿಗೆ ಕಡೂರು ಮಾರ್ಗದ ಮೂಲಕ ಹೋಗಿ ಊರು ಸೇರುವ ಸ್ಥಿತಿ ನಿರ್ಮಾಣವಾಗುತ್ತದೆ. ಹೊಸಹಳ್ಳಿ ಹುಲೇಮಳಲಿ ಶಿವಪುರ ಕೆಂಗುಂಟೆ ರಾಮಘಟ್ಟ ಚಿಕ್ಕನಕಟ್ಟೆ ಮಲ್ಲಾಡಿಹಳ್ಳಿಗಳಿಗೆ ಕೆಳಸೇತುವೆಯಿಂದಾಗಿ ಕೇವಲ 4 ರಿಂದ 14 ಕಿ.ಮೀ. ದೂರವಾಗುತ್ತದೆ. ಆದರೆ ಸೇತುವೆಯಲ್ಲಿ ನೀರು ನಿಂತಾಗ ಹೊಳಲ್ಕೆರೆ ಮೂಲಕ ಸುಮಾರು 22 ರಿಂದ 30 ಕಿ.ಮೀ. ದೂರ ಸುತ್ತಾಡಿ ಊರು ತಲುಪುವಂತಾಗಿದೆ.

ಹನುಮನಕಟ್ಟೆ ಬಳಿ ನೀರು ನಿಂತಿತೆಂದರೆ ಬಸ್‌ ಆಟೋ ಶಾಲಾ ವಾಹನ ದ್ವಿಚಕ್ರ ವಾಹನ ಚಾಲಕರು ತೀವ್ರ ಸಮಸ್ಯೆ ಅನುಭವಿಸುತ್ತಾರೆ. ಅಮೃತಾಪುರ ರೈಲ್ವೆ ನಿಲ್ದಾಣದ ಬಳಿಯ ಸೇತುವೆಯಲ್ಲಿ ಸಾಕಷ್ಟು ನೀರು ನಿಲ್ಲುವುದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಇದರಿಂದಾಗಿ ಅಮೃತಾಪುರ ಕಾಶೀಪುರ ಚಿತ್ರಹಳ್ಳಿ ಚಿಕ್ಕಜಾಜೂರು ಕೇಶವಾಪುರ ಹನುಮನಕಟ್ಟೆ ಅರಸನಘಟ್ಟ ಬಿಜ್ಜೆನಾಳ್‌ ಮೊದಲಾದ ಗ್ರಾಮಸ್ಥರು ಅಂದಾಜು 25-30 ಕಿ.ಮೀ. ದೂರ ಬೇರೆ ಮಾರ್ಗದಲ್ಲಿ ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ಬೈಕ್‌ ವಾಹನಗಳು ನೀರಿನಲ್ಲಿ ಸಿಲುಕುವುದು ಹಾಳಾಗುವುದು ಈ ಭಾಗದಲ್ಲಿ ತೀರ ಸಾಮಾನ್ಯವಾಗಿದೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT