ಚಿಕ್ಕಜಾಜೂರು: ಇಲ್ಲಿನ ವಾಯುವಿಹಾರಿಗಳು ಗ್ರಾಮದ ರೈಲ್ವೆ ಮೇಲ್ಸೇತುವೆಯಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಂಡರು.
ಕಡೂರು ಮಾರ್ಗದ ರೈಲ್ವೆ ಮೇಲ್ಸೆಸೇತುವೆಯಲ್ಲಿ ಮಳೆಯಿಂದಾಗಿ ಹುಲ್ಲು, ಗಿಡಗಳು ಬೆಳೆದಿದ್ದವು. ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಗ್ರಾಮದ ಮಹಿಳೆಯರು, ಯುವಕರು ಹಾಗೂ ವೃದ್ಧರು ವಾಯುವಿಹಾರ ಮಾಡುತ್ತಿದ್ದು, ಹುಲ್ಲು ಹಾಗೂ ಗಿಡಗಳಲ್ಲಿ ವಿಷ ಜಂತುಗಳು ಓಡಾಡುತ್ತಿದ್ದುದನ್ನು ಕಂಡು ಭಯಗೊಂಡಿದ್ದರು.
ವಾಯು ವಿಹಾರಿಗಳಾದ ನಿವೃತ್ತ ಬ್ಯಾಂಕ್ ಅಧಿಕಾರಿ ಜಿ. ನಟರಾಜ್, ಸಾರಥಿ ಮಾರುತಿ, ಎಚ್. ದೇವರಾಜ್, ಶ್ರೀನಿವಾಸ್, ರವಿಕುಮಾರ್, ಸತ್ಯನಾರಾಯಣ ಶ್ರೇಷ್ಠಿ, ನಿಜಗುಣ ಶಿಕ್ಷಕ ಬಸವರಾಜಪ್ಪ, ನಾಗರಾಜ್ ಹುಲ್ಲು ಹಾಗೂ ಗಿಡಗಳನ್ನು ಸ್ವಚ್ಛಗೊಳಿಸಿದರು.
ಗ್ರಾಮ ಪಂಚಾಯಿತಿಯ ಪೌರಕಾರ್ಮಿಕರು ಅದನ್ನು ತೆರವುಗೊಳಿಸಿದರು.
ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಆರೋಪ:
ಗ್ರಾಮದಲ್ಲಿ ರೈಲ್ವೆ ಹಳಿ ದಾಟಲು ರೈಲ್ವೆ ಇಲಾಖೆ ಹಲವು ವರ್ಷಗಳ ಹಿಂದೆ ಮೇಲ್ಸೇತುವೆ ನಿರ್ಮಿಸಿದೆ. ಆದರೆ, ಇದರ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಸರ್ವೀಸ್ ರಸ್ತೆಯಲ್ಲಿ ಗುಂಡಿಗಳು ಬಿದ್ದಿದೆ. ಹೊಸನಗರ ಬಡಾವಣೆ ಹಾಗೂ ಸಿದ್ಧರಾಮೇಶ್ವರ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಪಾಡಂತೂ ಹೇಳ ತೀರದು. ರಸ್ತೆಯ ಕಬ್ಭಿಣದ ಸರಳುಗಳು ಮೇಲೆದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಸರ್ವೀಸ್ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.