ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ರಚನೆಗೂ ಮೊದಲೇ ಸಿರಿಗೆರೆ ಮಠದಲ್ಲಿ ಸಹಪಂಕ್ತಿ ಭೋಜನ: ಬಿ.ಎಲ್.ಶಂಕರ್

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 26ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿರಿಗೆರೆ ಮಠದ ಬಣ್ಣನೆ
Last Updated 24 ಸೆಪ್ಟೆಂಬರ್ 2018, 12:50 IST
ಅಕ್ಷರ ಗಾತ್ರ

ಸಿರಿಗೆರೆ: ದೇಶದಲ್ಲಿ ಸಂವಿಧಾನ ರಚನೆ ಪೂರ್ವದಲ್ಲಿಯೇ ಎಲ್ಲಾ ವರ್ಗದ ಮಕ್ಕಳನ್ನು ಒಂದೇ ಸಾಲಿನಲ್ಲಿ ಕೂರಿಸಿ ಸಹಪಂಕ್ತಿ ಭೋಜನ ವ್ಯವಸ್ಥೆ ಮಾಡಿದ್ದ ಸಾಧನೆ ಸಿರಿಗೆರೆ ಮಠದ್ದು ಎಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅಭಿಪ್ರಾಯಪಟ್ಟರು.

ಇಲ್ಲಿನ ಬಿಎಲ್‍ಆರ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 26ನೇ ಶ್ರದ್ಧಾಂಜಲಿಯ ಅಂತಿಮ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕೇವಲ ಧಾರ್ಮಿಕ ಉಪನ್ಯಾಸ ನೀಡದೆ ಸಮಾಜದ ಸಂಘಟನೆ, ಏಕತೆ ಬಗ್ಗೆ ದೂರದೃಷ್ಟಿ ಉಳ್ಳವರಾಗಿದ್ದರು ಎಂದು ಪ್ರಶಂಸಿಸಿದರು.

ಕೃಷಿಕರು ಇಂದು ಗೌರವಯುತವಾಗಿ ಬಾಳುವಂತಹ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು. ನೀರಿನ ಸದ್ಭಳಕೆ, ಕೆರೆಗಳ ಪುನರುಜ್ಜೀವನಗೊಳಿಸುವ ಕೆಲಸ ತುರ್ತು ಮಾಡಬೇಕಿದೆ. ಅಭಿವೃದ್ಧಿಯು ಮನುಷ್ಯ ಕೇಂದ್ರವಾಗದೆ ಜೀವಕೇಂದ್ರವಾಗಬೇಕು. ಪ್ರಕೃತಿಯಲ್ಲಿ ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಬೇಕಾದ ಫಲ ನೀಡುವ ಗಿಡಮರಗಳಿವೆ. ಆದರೆ ಸ್ವಾತಂತ್ರ್ಯ ನಂತರದ ಸರ್ಕಾರ ಉದ್ಯಮಿಗಳಿಗೆ ಬೇಕಾದ ತೇಗ, ಬೀಟೆ, ಅಕೇಶಿಯಾ, ನೀಲಗಿರಿಯಂತಹ ಸಸಿಗಳನ್ನು ನೆಟ್ಟು ಪರಿಸರ ವಿರೋಧಿ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿದೆ. ಇದರಿಂದ ಪ್ರಕೃತಿಯಲ್ಲಿ ಸಮತೋಲನ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜೆಡಿಎಸ್ ಅಧ್ಯಕ್ಷ ಎಚ್. ವಿಶ್ವನಾಥ್ ಮಾತನಾಡಿ, ಸಿರಿಗೆರೆಯ ಶ್ರೀಗಳು ಅಹಿಂದ ಸಮಾಜ ನಿರ್ಮಾಣದ ಕನಸುಗಾರರು. ಯಜಮಾನಿಕೆ ರಾಜಕಾರಣವನ್ನು ವಿರೋಧಿಸುತ್ತಾ ಜನಪರ ಕಾಳಜಿಯ ರಾಜಕಾರಣಿಗಳನ್ನು ಪ್ರೋತ್ಸಾಹಿಸಿದವರು. ಆಧುನಿಕ ಮೆರಗಿನೊಂದಿಗೆ ತಂತ್ರಜ್ಞಾನವನ್ನು ಸಮರ್ಥವಾಗಿ ಬೆಳಸಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಠವಾಗಿದೆ. ಹಿರಿಯ ಗುರುಗಳು ಎಲ್ಲಾ ವರ್ಗದ ಜನರನ್ನು ಪ್ರೀತಿಸಿದರು. ಅವರಿಗೆ ಬೇಕಾದ ಅನ್ನ, ಅಕ್ಷರ ನೀಡಿ ಉದ್ಧಾರದ ಮಾರ್ಗವನ್ನು ತೋರಿಸಿದ್ದರು. ಅವರ ರಾಜಕೀಯ ಪಟುತ್ವಕ್ಕೆ ಹೊಸದುರ್ಗದ ರಂಗಪ್ಪನೇ ಸಾಕ್ಷಿ ಎಂದು ಸ್ಮರಿಸಿದರು.

ಶಾಸಕ ಬಸವರಾಜ ಬೊಮ್ಮಾಯಿ, ಸಿರಿಗೆರೆ ಮಠವು ಆತ್ಮ ಜಾಗೃತಿಯ ಮೂಲಕ ಸಮಾಜ ಜಾಗೃತಿಯನ್ನು ಮಾಡುತ್ತಿದೆ. ಅಧ್ಯಾತ್ಮ ಮತ್ತು ವಿಜ್ಞಾನವನ್ನು ಸರಿದೂಗಿಸಿಕೊಂಡು ವೈಚಾರಿಕ ಸಮಾಜವನ್ನು ನಿರ್ಮಾಣ ಮಾಡುತ್ತಿದೆ. ತತ್ವಜ್ಞಾನವಿಲ್ಲದ ತಂತ್ರಜ್ಞಾನಕ್ಕೆ ಭವಿಷ್ಯವಿಲ್ಲ. ಆದ್ದರಿಂದ ತತ್ವಜ್ಞಾನ ಮತ್ತು ವಿಜ್ಞಾನ ನಮ್ಮ ಬದುಕಿನ ಭಾಗವಾಗಬೇಕು. ಈಗ ಬೇಕಾಗಿರುವುದು ಜನೋಪಯೋಗಿ ಶಾಸಕರು, ಮಂತ್ರಿಗಳು. ಜನಪ್ರಿಯರು ಬೇಕಾಗಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಪ್ರವಾಹ ಪೀಡಿತ ಸಂತ್ರಸ್ತರಿಗೆ ₹10 ಲಕ್ಷಗಳ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿದರು. ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಆರ್. ಜಯದೇವಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಎಂ. ಚಂದ್ರಪ್ಪ, ಮಾಜಿ ಶಾಸಕ ಚಂದ್ರಶೇಖರ್, ಉದ್ಯಮಿ ಅಣಬೇರು ರಾಜಣ್ಣ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT