ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಸ್ಥಳಾಂತರ: ಆದೇಶ ರದ್ದುಗೊಳಿಸಿ

3ನೇ ದಿನವೂ ಮುಂದುವರಿದ ಶಾಸಕ ಟಿ.ರಘುಮೂರ್ತಿ ಧರಣಿ
Last Updated 8 ಆಗಸ್ಟ್ 2020, 14:39 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವ ಆದೇಶ ರದ್ದುಗೊಳಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಮೂರನೇ ದಿನವೂ ಮುಂದುವರಿಯಿತು.

ಚಿಂತಕರಾದ ಪ್ರೊ.ಸಿ.ಕೆ. ಮಹೇಶ್ವರಪ್ಪ, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್ ಸೇರಿ ಹಲವು ಕಾಂಗ್ರೆಸ್‌ ಮುಖಂಡರು ಪ್ರತಿಭಟನಕಾರರಿಗೆ ಸಾಥ್‌ ನೀಡಿದರು. ಒನಕೆ ಓಬವ್ವ ವೃತ್ತದ ರಸ್ತೆಯಲ್ಲಿ ಬೆಳಿಗ್ಗೆ 12ರಿಂದ ಮಧ್ಯಾಹ್ನ 2ರ ವರೆಗೆ ಧರಣಿ ನಡೆಯಿತು.

ಚಿಂತಕ ಪ್ರೊ.ಸಿ.ಕೆ. ಮಹೇಶ್ವರಪ್ಪ, ‘ಕೋಮುವಾದಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಿದ್ದರಾಮಯ್ಯ ಅವರು ತುರುವನೂರಿಗೆ ಮಂಜೂರು ಮಾಡಿದ್ದ ಈ ಕಾಲೇಜನ್ನು ನಿಪ್ಪಾಣಿಗೆ ವರ್ಗಾಯಿಸಿರುವುದು ನಿಜಕ್ಕೂ ಹತ್ತಾರು ಹಳ್ಳಿಯ ಪ್ರತಿಭಾವಂತ ಮಕ್ಕಳಿಗೆ ಎಸಗಿರುವ ಬಹುದೊಡ್ಡ ದ್ರೋಹ. ಕಾಲೇಜು ಸ್ಥಳಾಂತರ ಆದೇಶ ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಎಚ್ಚರಿಕೆ ನೀಡಿದರು.

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ‘ಕಾಲೇಜನ್ನು ನಿಪ್ಪಾಣಿಗೆ ವರ್ಗಾಯಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟು ಉನ್ನತ ಶಿಕ್ಷಣದ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಉನ್ನತೀಕರಣಗೊಳಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಡಾ.ಸಿ.ಶಿವಲಿಂಗಪ್ಪ, ಪ್ರೊ.ಎಚ್.ಲಿಂಗಪ್ಪ, ಜೆ.ಯಾದವರೆಡ್ಡಿ, ಪ್ರೊ.ಟಿ.ವಿ. ಸುರೇಶ್‌ಗುಪ್ತ, ಪ್ರೊ.ಟಿ.ಎಚ್.ಕೃಷ್ಣಮೂರ್ತಿ, ಪ್ರೊ.ಕೆ.ರಾಮರಾಮ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಡಿ.ಎನ್.ಮೈಲಾರಪ್ಪ, ಸಂಪತ್, ಬಿ.ಟಿ. ಜಗದೀಶ್, ಮಲ್ಲೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಎಚ್.ಆನಂದಕುಮಾರ್, ಕೆ.ಟಿ. ಶಿವಕುಮಾರ್ ಇದ್ದರು.

ಸ್ಥಳಾಂತರಿಸದಂತೆ ಸಂಸದರ ಮನವಿ
ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಳಾಂತರ ಮಾಡಬೇಡಿ ಎಂದು ಸಂಸದ ಎ.ನಾರಾಯಣಸ್ವಾಮಿ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನು ಫೇಸ್‌ಬುಕ್‌ನಲ್ಲಿ ಸಂಸದರ ಅನುಯಾಯಿಗಳು ಹಂಚಿಕೊಂಡಿದ್ದಾರೆ.

‘ಈ ಭಾಗದ ಜನತೆಗೆ ಕಾಲೇಜು ಅನಿವಾರ್ಯವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಸ್ಥಳಾಂತರಿಸಬೇಡಿ’ ಎಂದು ಸಂಸದರು ಮನವರಿಕೆ ಮಾಡಿಕೊಟ್ಟಿದ್ದಾರೆ. ‘ಸರ್ಕಾರದ ಮಾರ್ಗಸೂಚಿ ಪ್ರಕಾರ ನಿರೀಕ್ಷಿತ ಸಂಖ್ಯೆಯಲ್ಲಿ ದಾಖಲಾತಿ ಆಗದಿರುವ ಕಾರಣ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ’ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.

‘ಭೇಟಿಯಾದ ವೇಳೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸಕ್ತ ಬರುವ ಸಾಲಿನಲ್ಲಿ ನಿರೀಕ್ಷಿತ ವಿದ್ಯಾರ್ಥಿಗಳು ದಾಖಲಾತಿಯಾದಲ್ಲಿ ತುರುವನೂರಿಂದ ಕಾಲೇಜನ್ನು ಸ್ಥಳಾಂತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದೇಶ ರದ್ದುಪಡಿಸುವುದರ ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆಗೊಳಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ’ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT